ಬೆಂಗಳೂರು: ಇಂದಿರಾ ಕ್ಯಾಂಟೀನ್ ಯೋಜನೆಗೆ ಶೇ.50 ಆರ್ಥಿಕ ಹೊರೆ ಭರಿಸಲು ರಾಜ್ಯ ಸರ್ಕಾರ ಹಿಂದೇಟು ಹಾಕಿದ್ದು, ಶೇ.25 ಮಾತ್ರ ನೆರವು ಭರವಸೆ ನೀಡಿದೆ. ಹೀಗಾಗಿ, ಪಾಲಿಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ. ಯೋಜನೆಯ ಶೇ.100 ರಾಜ್ಯ ಸರ್ಕಾರವೇ ಭರಿಸಬೇಕು ಎಂಬುದು ಬಿಬಿಎಂಪಿ ಬೇಡಿಕೆಯಾಗಿತ್ತು. ಆದರೆ, ಶೇ.50 ಭರಿಸುವ ಭರವಸೆ ದೊರೆತಿತ್ತು. ಆದರೆ, ಹಣಕಾಸು ಇಲಾಖೆ ಶೇ.25 ಮಾತ್ರ ಕೊಡಲು ಸಾಧ್ಯ ಎಂದು ತಿಳಿಸಿದ್ದು, ಶೇ.75 ಪಾಲಿಕೆ ಭರಿಸಬೇಕಾಗಿದೆ.
ಶೇ.50 ನೆರವು ನೀಡಿದರೆ ಮಾತ್ರ ಯೋಜನೆ ಮುಂದುವರಿಸಲು ಸಾಧ್ಯ ಎಂದು ಬಿಬಿಎಂಪಿ ಹೇಳಿದೆ. ಒಂದೊಮ್ಮೆ ನಿರೀಕ್ಷಿತ ನೆರವು ಸಿಗದಿದ್ದರೆ ಬಿಬಿಎಂಪಿ ವತಿಯಿಂದ ಇಂದಿರಾ ಕ್ಯಾಂಟೀನ್ ನಡೆಸಲು ಸಾಧ್ಯವೇ ಎಂಬ ಬಗ್ಗೆ ಪಾಲಿಕೆ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುವ ಸಾಧ್ಯತೆಯಿದೆ. ಹೀಗಾಗಿ, ರಾಜ್ಯ ಸರ್ಕಾರವು ಯಾವ ರೀತಿ ಸ್ಪಂದಿಸಲಿದೆ ಎಂಬುದರ ಮೇಲೆ ಯೋಜನೆಯ ಭವಿಷ್ಯ ನಿರ್ಧಾರವಾಗುವ ಸಾಧ್ಯತೆಯಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್, ಸದ್ಯಕ್ಕೆ ಇಂದಿರಾ ಕ್ಯಾಂಟಿನ್ ಬಿಬಿಎಂಪಿ ವತಿಯಿಂದಲೇ ನಿರ್ವಹಣೆ ಮಾಡಲಾಗುತ್ತಿದೆ. ಸರ್ಕಾರ ಶೇ. 50 ಅನುದಾನ ನೀಡುವುದಾಗಿ ಭರವಸೆ ನೀಡಿತ್ತು. ಆದರೆ, ಹಣಕಾಸು ಇಲಾಖೆಯು ಸರ್ಕಾರದಿಂದ ಶೇ. 25ರಷ್ಟು ಮಾತ್ರ ಅನುದಾನ ನೀಡಲು ಸಾಧ್ಯ ಎಂದು ತಿಳಿಸಿದೆ.
ಬಿಬಿಎಂಪಿಗೆ ಶೇ. 50 ಅನುದಾನ ನೀಡಿದರೆ ಮಾತ್ರ ಇಂದಿರಾ ಕ್ಯಾಂಟಿನ್ ಯೋಜನೆ ಮುಂದುವರಿಸಲು ಸಾಧ್ಯ ಎಂದು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳೇ ತೀರ್ಮಾನ ತೆಗೆದುಕೊಳ್ಳಬೇಕು ಎಂದು ತಿಳಿಸಿದರು. ಅನುದಾದ ವಿಷಯದಲ್ಲಿ ಪಾಲಿಕೆ ಸರ್ಕಾರದಿಂದ ಸ್ಪಷ್ಟ ಉತ್ತರ ಪಡೆಯಬೇಕಾಗಿದೆ. ಇಲ್ಲದಿದ್ದಲ್ಲಿ ಇಂದಿರಾ ಕ್ಯಾಂಟಿನ್ ಬಿಬಿಎಂಪಿ ವತಿಯಿಂದ ನಡೆಸಲು ಸಾಧ್ಯವೇ ಎನ್ನುವುದನ್ನು ಪಾಲಿಕೆಯ ಸಭೆಯಲ್ಲಿ ಚರ್ಚೆ ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದರು.
ಅನುದಾನವೇ ಸಿಕ್ಕಿಲ್ಲ: ಬಿಬಿಎಂಪಿ ವ್ಯಾಪ್ತಿಯಲ್ಲಿ 174 ವಾರ್ಡ್‌ಗಳಲ್ಲಿ ಇಂದಿರಾ ಕ್ಯಾಂಟಿನ್ ಆರಂಭಿಸಲಾಗಿದೆ. 18 ಕಡೆ ಸಂಚಾರಿ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸುತ್ತಿವೆ. ಪ್ರಾರಂಭದಲ್ಲಿ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟಿನ್ ಯೋಜನೆಗೆ 100 ಕೋಟಿ ರೂ. ಅನುದಾನ ಒದಗಿಸಿತ್ತು. ಆ ನಂತರ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಈ ಯೋಜನೆಗೆ ಯಾವುದೇ ಅನುದಾನ ನೀಡಿರಲಿಲ್ಲ. ಬಿಜೆಪಿ ನೇತೃತ್ವದ ಸರ್ಕಾರ ಕೂಡಾ ಅನುದಾನ ನೀಡದೆ ಯೋಜನೆಯಲ್ಲಿ ಅವ್ಯವಹಾರ ಆರೋಪ ತನಿಖೆಗೆ ಸೂಚಿಸಿದೆ.
ಮತ್ತೊಂದು ಹೊರೆ: ಬಿಬಿಎಂಪಿ 2019-20 ನೇ ಸಾಲಿನಲ್ಲಿ ಕ್ಯಾಂಟೀನ್ ನಿರ್ವಹಣೆಗೆ 152 ಕೋಟಿ ರೂ. ಅಂದಾಜು ಮಾಡುವುದರ ಜತೆಗೆ ಈ ಹಿಂದಿನ ವರ್ಷದಲ್ಲಿ ಹೆಚ್ಚುವರಿಯಾಗಿ ವೆಚ್ಚ ಮಾಡಿದ 58 ಕೋಟಿ ರೂ. ಸೇರಿಸಿ ಒಟ್ಟು 210 ಕೋಟಿ ಬಿಡುಗಡೆ ಮಾಡುವಂತೆ ರಾಜ್ಯಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿತ್ತು. ಆದರೆ, ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ. ಈ ವರ್ಷ ಪ್ರಾರಂಭದಿಂದ ಪ್ರತಿ ತಿಂಗಳು ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಿಗೆ ಬಿಲ್ ಪಾವತಿಗೆ ಬಿಬಿಎಂಪಿ ಬೇರೆ ಬೇರೆ ಯೋಜನೆಗಳಿಗೆ ಮೀಸಲಿಟ್ಟಿದ್ದ ಅನುದಾನವನ್ನು ಬಳಕೆ ಮಾಡಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆ.