Advertisement

ಬಾಗಿಲು ಮುಚ್ಚಿದ ಇಂದಿರಾ ಕ್ಯಾಂಟೀನ್‌!

03:11 PM Jul 04, 2022 | Team Udayavani |

ಹಾವೇರಿ: ಹಸಿವಿನಿಂದ ಯಾರೂ ಬಳಲಬಾರದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್‌ ತೆರೆದಿತ್ತು. ಆದರೆ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಳೆದ ಎಂಟು ತಿಂಗಳಿಂದ ನಗರದ ಇಂದಿರಾ ಕ್ಯಾಂಟೀನ್‌ ಬಾಗಿಲು ಮುಚ್ಚಿದ್ದು, ಬಡಜನರು, ಕಾರ್ಮಿಕರು ಊಟಕ್ಕೆ ಪರದಾಡುವಂತಾಗಿದೆ.

Advertisement

ಸ್ಥಳೀಯ ಜಿಲ್ಲಾಸ್ಪತ್ರೆಯ ಎದುರಿನ ಪಶು ವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಇಂದಿರಾ ಕ್ಯಾಂಟೀನ್‌ ಆರಂಭಿಸಲಾಗಿತ್ತು. ಬಸ್‌ ನಿಲ್ದಾಣಕ್ಕೂ ಹತ್ತಿರವಾಗಿದ್ದರಿಂದ ಮಾರುಕಟ್ಟೆ, ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳು ಮತ್ತು ಅವರ ಸಂಬಂಧಿಗಳು, ಸಂತೆ ಮತ್ತು ತರಕಾರಿ ಮಾರುಕಟ್ಟೆಗೆ ಬರುತ್ತಿದ್ದ ರೈತರು, ಆಟೋ ಚಾಲಕರು, ಕೂಲಿ ಕಾರ್ಮಿಕರು ಸೇರಿದಂತೆ ಬಡ ಮಧ್ಯಮ ವರ್ಗದ ಜನರು ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಆದರೆ ಕಳೆದ ಎಂಟು ತಿಂಗಳಿಂದ ಇಂದಿರಾ ಕ್ಯಾಂಟೀನ್‌ ಬಾಗಿಲು ಮುಚ್ಚಿರುವ ಕಾರಣ ಬಡಜನರು ಊಟಕ್ಕೆ ಪರಿತಪ್ಪಿಸುವಂತಾಗಿದೆ.

ನಗರದ ಪಶು ವೈದ್ಯಕೀಯ ಆಸ್ಪತ್ರೆ ಆವರಣದಲ್ಲಿ ಕ್ಯಾಂಟೀನ್‌ ತೆರೆದು ನವಪ್ರಯಾಸ ನವದೆಹಲಿ ಸಂಸ್ಥೆಯವರು 2019ರಿಂದ ಗುತ್ತಿಗೆ ಆಧಾರದಲ್ಲಿ ಕ್ಯಾಂಟೀನ್‌ ನಡೆಸುತ್ತಿದ್ದರು. ಸರ್ಕಾರದ ಆದೇಶದಂತೆ ಉಪಾಹಾರಕ್ಕೆ 5, ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟಕ್ಕೆ 10 ರೂ. ದರ ನಿಗದಿಪಡಿಸಲಾಗಿತ್ತು. ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ 52.49 ರೂ.ಗಳಿಗೆ ಆಹಾರ ವಿತರಣೆಯ ಟೆಂಡರ್‌ ಮಂಜೂರು ಮಾಡಲಾಗಿತ್ತು. ಗ್ರಾಹಕರಿಂದ 25 ರೂ. ಮತ್ತು ಉಳಿದ 27.49ರೂ. ಸಹಾಯಧನವನ್ನು ರಾಜ್ಯ ಸರ್ಕಾರ ನೀಡುತ್ತಿತ್ತು. ಪ್ರತಿ ತಿಂಗಳು ಉಪಾಹಾರ ಮತ್ತು ಊಟ ಸೇವಿಸಿದ ಗ್ರಾಹಕರ ಸಂಖ್ಯೆಯ ಆಧಾರದ ಮೇಲೆ ಬಿಲ್‌ ಪಾವತಿಸಲಾಗುತ್ತಿತ್ತು. ನಮ್ಮಲ್ಲಿ ಅನುದಾನದ ಕೊರತೆಯಿಲ್ಲ. ಆದರೆ, ಗುತ್ತಿಗೆದಾರರು ಆರು ತಿಂಗಳ ಬಿಲ್‌ಗ‌ಳನ್ನೇ ಸಲ್ಲಿಸಿಲ್ಲ. ಟೆಂಡರ್‌ ಪಡೆದ ಗುತ್ತಿಗೆದಾರರು ಉಪಗುತ್ತಿಗೆ ಕೊಟ್ಟಿದ್ದರು. ಸಮರ್ಪಕವಾಗಿ ನಿರ್ವಹಣೆ ಮಾಡದೇ ಆಗಾಗ್ಗೆ ದೂರುಗಳು ಬಂದವು. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಗೆ ನೋಟಿಸ್‌ ಕೊಟ್ಟಿದ್ದೇವೆ ಎನ್ನುತ್ತಾರೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು.

ಕೋವಿಡ್‌ ಸಮಯದಲ್ಲಿ ಕ್ಯಾಂಟೀನ್‌ನಲ್ಲಿ ಊಟ ಕೊಡುತ್ತಿದ್ದೇವು. ಬಡಜನರು ಕೈ ಮುಗಿದು ಊಟ ಮಾಡಿ ಹೋಗುತ್ತಿದ್ದರು. ಆದರೆ, ಗುತ್ತಿಗೆದಾರರು ಕ್ಯಾಂಟೀನ್‌ ನಡೆಸಲು ಆಸಕ್ತಿ ತೋರದೆ ನಿರ್ಲಕ್ಷ್ಯ ವಹಿಸಿದರು. ಇದರಿಂದ ಕ್ಯಾಂಟೀನ್‌ಗೆ ಬೀಗ ಬಿದ್ದಿದೆ. ಕ್ಯಾಂಟೀನ್‌ ನಲ್ಲಿ ಕೆಲಸ ಮಾಡುತ್ತಿದ್ದ ಐವರು ಸಿಬ್ಬಂದಿಗೆ 6 ತಿಂಗಳ ಸಂಬಳವನ್ನೇ ಕೊಟ್ಟಿಲ್ಲ. ನಾವು ನಿರುದ್ಯೋಗಿಗಳಾಗಿದ್ದೇವೆ ಎಂದು ಕ್ಯಾಂಟೀನ್‌ ಸಿಬ್ಬಂದಿ ತಮ್ಮ ಅಳಲು ತೋಡಿಕೊಂಡರು.

ಇಂದಿರಾ ಕ್ಯಾಂಟೀನ್‌ಗೆ ಹಾಲು, ತರಕಾರಿ, ಅಕ್ಕಿ, ತೆಂಗಿನಕಾಯಿ ಪೂರೈಸಿದ ವ್ಯಾಪಾರಿಗಳಿಗೆ ಗುತ್ತಿಗೆದಾರರು ಸುಮಾರು 2 ಲಕ್ಷದಷ್ಟು ಹಣವನ್ನು ಕೊಟ್ಟಿಲ್ಲ. ಅವರೆಲ್ಲರಿಗೂ ಮೋಸವಾಗಿದೆ. ನಮಗೆ ಸಂಬಳ ಕೊಡಿ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳನ್ನು ಕೇಳಿದರೆ ಮೊದಲು ನಿಮ್ಮ ಗುತ್ತಿಗೆದಾರರನ್ನು ಹುಡುಕಿಕೊಂಡು ಬನ್ನಿ ಎಂದು ಹಾರಿಕೆಯ ಉತ್ತರ ಕೊಡುತ್ತಾರೆ. ನಮ್ಮ ಗೋಳನ್ನು ಕೇಳುವವರಿಲ್ಲದಂತಾಗಿದೆ ಎಂದು ದೂರಿದರು.

Advertisement

ಒಟ್ಟಾರೆ ಬಡವರ ಪಾಲಿಗೆ ಆಸರೆಯಾಗಿದ್ದ ಇಂದಿರಾ ಕ್ಯಾಂಟೀನ್‌ ಮುಚ್ಚಿದ್ದು, ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕೂಡಲೇ ಕ್ಯಾಂಟೀನ್‌ ಪುನಾರಂಭಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಜಿಲ್ಲೆಯಲ್ಲಿರುವ ಎಲ್ಲ ಇಂದಿರಾ ಕ್ಯಾಂಟೀನ್‌ ಆರಂಭಕ್ಕೆ ಈಗಾಗಲೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಕಾರ್ಯಾದೇಶ ನೀಡಿ ತ್ವರಿತವಾಗಿ ಕಾರ್ಯಾರಂಭಗೊಳಿಸಲು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ. –ಸಂಜಯ ಶೆಟ್ಟಣ್ಣವರ, ಜಿಲ್ಲಾಧಿಕಾರಿ

-ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next