Advertisement

ಇಂದಿರಾ ಕ್ಯಾಂಟೀನ್‌ 14ರ ಪೈಕಿ ಉಣ್ಣಲಿಕ್ಕುತ್ತಿರುವುದು 7 ಮಾತ್ರ

10:22 AM Jul 12, 2018 | Harsha Rao |

ಮಂಗಳೂರು/ಉಡುಪಿ: ಈ ಹಿಂದಿನ ಕಾಂಗ್ರೆಸ್‌ ಸರಕಾರ ಜಾರಿಗೆ ತಂದ ಪ್ರತಿಷ್ಠಿತ ಇಂದಿರಾ ಕ್ಯಾಂಟೀನ್‌ ಯೋಜನೆಯಡಿ ದ.ಕ. ಜಿಲ್ಲೆಗೆ 10 ಕ್ಯಾಂಟೀನ್‌ ಮಂಜೂರಾಗಿದ್ದು, ಅದರಲ್ಲಿ ಪ್ರಸ್ತುತ ಐದು ಮಾತ್ರ ಕಾರ್ಯಾಚರಿಸುತ್ತಿದೆ. ಪಂಪ್‌ವೆಲ್‌ನಲ್ಲಿ ಕಾಮಗಾರಿ ಪೂರ್ಣಗೊಂಡಿದ್ದರೂ ಕಾರ್ಯಾರಂಭ ಮಾಡಿಲ್ಲ. ಉಳಿದ ನಾಲ್ಕು ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಇನ್ನೂ ಮುಹೂರ್ತವೇ ಸಿದ್ಧವಾದಂತಿಲ್ಲ.

Advertisement

ಉಡುಪಿ ಜಿಲ್ಲೆಗೆ ನಾಲ್ಕು ಕ್ಯಾಂಟೀನ್‌ಗಳು ಮಂಜೂರಾಗಿವೆ. ಉಡುಪಿ ಮತ್ತು ಮಣಿಪಾಲದಲ್ಲಿ ಎರಡು ಕಾರ್ಯಾಚರಿಸುತ್ತಿದ್ದರೆ ಕುಂದಾಪುರ ಮತ್ತು ಕಾರ್ಕಳಗಳಿಗೆ ಮಂಜೂರಾಗಿರುವ ಕ್ಯಾಂಟೀನ್‌ಗಳು ಕಾರ್ಯಾರಂಭಿಸಿಲ್ಲ.

ಐದು ಇಂದಿರಾ ಕ್ಯಾಂಟೀನ್‌ಗಳು ಮಂಗಳೂರು ನಗರದಲ್ಲಿಯೇ ಕಾರ್ಯಾಚರಿಸುತ್ತಿವೆ. ಸುಳ್ಯ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿಗಳಲ್ಲಿ ಸ್ಥಳ ಗುರುತಿಸುವ ಕೆಲಸವಷ್ಟೇ ಆಗಿದೆ.

ಮಂಗಳೂರು ಮನಪಾ ವ್ಯಾಪ್ತಿಯ ಜನಸಂಖ್ಯೆಯ ಆಧಾರದಲ್ಲಿ ಆರು ಕ್ಯಾಂಟೀನ್‌ ಹಾಗೂ ಅಡುಗೆ ಕೋಣೆಗಳನ್ನು ಆರಂಭಿಸಲು ನಿರ್ದೇಶನ ನೀಡಲಾಗಿತ್ತು. ಈ ಪೈಕಿ ಒಂದು ಕ್ಯಾಂಟೀನ್‌ ಉಳ್ಳಾಲ ನಗರ ಸಭೆಯ ತೊಕ್ಕೊಟ್ಟಿನಲ್ಲಿ ಕಾರ್ಯಾಚರಿಸುತ್ತಿದೆ.

2.97 ಕೋ.ರೂ. ವೆಚ್ಚ
ಇಂದಿರಾ ಕ್ಯಾಂಟೀನ್‌ಗೆ ಸಂಬಂಧಿಸಿದ ಕಟ್ಟಡಗಳನ್ನು ಕಂದಾಯ ಇಲಾಖೆ, ನಗರ ಸ್ಥಳೀಯ ಸಂಸ್ಥೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ವಿದ್ಯುತ್‌ ಕಂಪೆನಿ, ಪೊಲೀಸ್‌ ಇಲಾಖೆ ಹಾಗೂ ಇತರ ಸರಕಾರಿ ಸಂಸ್ಥೆಗಳಿಗೆ ಸಂಬಂಧಿಸಿದ ಜಾಗದಲ್ಲಿ ಭೂಮಿ ವರ್ಗಾವಣೆ ಪ್ರಕ್ರಿಯೆ ಇಲ್ಲದೆ ನಿರ್ಮಿಸಲಾಗಿದೆ. ಎಲ್ಲ ಕಟ್ಟಡಗಳನ್ನು ಕೆಆರ್‌ಐಡಿಎಲ್‌ ಮೂಲಕ 2.97 ಕೋ. ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.

Advertisement

ಮೂಡಾದ ಬಳಿ ಅಡುಗೆ ಕೋಣೆ
ಮಂಗಳೂರಿನ ಐದು ಹಾಗೂ ಉಳ್ಳಾಲದ ಒಂದು ಇಂದಿರಾ ಕ್ಯಾಂಟೀನ್‌ಗೆ ಆಹಾರ ಪದಾರ್ಥವನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಬಳಿ ನಿರ್ಮಿಸಲಾದ ಇಂದಿರಾ ಕ್ಯಾಂಟೀನ್‌ ಜತೆಗಿನ ಅಡುಗೆ ಕೋಣೆಯಲ್ಲಿ ಸಿದ್ಧಪಡಿಸಲಾಗುತ್ತದೆ. ಪ್ರತೀ ಕ್ಯಾಂಟೀನ್‌ ಫೌಂಡೇಶನ್‌ನಡಿಯಲ್ಲಿ ನೀರು ಸಂಗ್ರಹಕ್ಕೆ ಸಂಪ್‌ ಟ್ಯಾಂಕ್‌ ವ್ಯವಸ್ಥೆ ಮಾಡಲಾಗಿದೆ. ಕ್ಯಾಂಟೀನ್‌ ಒಳಗಡೆ ಹಾಗೂ ಹೊರಗಡೆ ಗ್ರಾಹಕರಿಗೆ ಕುಳಿತು ಆಹಾರ ಸೇವಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಕ್ಯಾಂಟೀನ್‌ ಹಿಂಭಾಗದಲ್ಲಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯಿದೆ.

ಮಂಗಳೂರಲ್ಲಿ ಕುಚ್ಚಿಗೆ ಅನ್ನ
ರಾಜ್ಯದ ಎಲ್ಲ ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟಕ್ಕೆ ಬೆಳ್ತಿಗೆ ಅಕ್ಕಿ ಅನ್ನ ಸಿಗುತ್ತದಾದರೆ ಮಂಗಳೂರಿನಲ್ಲಿ ಮಾತ್ರ ಕುಚ್ಚಿಗೆ ಅನ್ನ ನೀಡಲಾಗುತ್ತಿದೆ.

ಸದ್ಯ ಗ್ರಾಹಕರು ಕಡಿಮೆ
ಇಂದಿರಾ ಕ್ಯಾಂಟೀನ್‌ಗೆ ಮಂಗಳೂರಿನಲ್ಲಿ ಪ್ರಾರಂಭಿಕವಾಗಿ ಉತ್ತಮ ಸ್ಪಂದನೆ ದೊರೆತಿದ್ದು, ಸದ್ಯ ಮಳೆಯ ಹಿನ್ನೆಲೆಯಲ್ಲಿ ಸ್ವಲ್ಪ ಗ್ರಾಹಕರ ಕೊರತೆ ಕಾಡುತ್ತಿದೆ. ಕರಾವಳಿ ಭಾಗದ ಶೈಲಿಯ ಉತ್ತಮ ಆಹಾರವನ್ನು ಇಲ್ಲಿ ನೀಡಲಾಗುತ್ತಿದೆ.
-ಮೊಹಮ್ಮದ್‌ ನಝೀರ್‌, ಮನಪಾ ಆಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next