ಹುಬ್ಬಳ್ಳಿ: ಹುಬ್ಬಳ್ಳಿ-ದೆಹಲಿ ನಡುವೆ ಸೋಮವಾರದಿಂದ ಸಂಚಾರ ಆರಂಭಿಸಿದ ವಿಮಾನದಲ್ಲಿ ಇಂಡಿಗೋ ಕಂಪನಿ ಅಧಿಕಾರಿ ಅಕ್ಷಯ ಪಾಟೀಲ ಉತ್ತರ ಕರ್ನಾಟಕ ಭಾಷೆಯಲ್ಲಿ ಸ್ವಾಗತ ಹಾಗೂ ವಿವರಣೆ ನೀಡುವ ಮೂಲಕ ಪ್ರಯಾಣಿಕರ ಗಮನ ಸೆಳೆದರಲ್ಲದೆ, ಕನ್ನಡ ಪ್ರೇಮ ಮೆರೆದರು.
ಸೋಮವಾರ ಮಧ್ಯಾಹ್ನ ದೆಹಲಿಯಿಂದ ಹುಬ್ಬಳ್ಳಿಗೆ ಆಗಮಿಸಿದ್ದ ವಿಮಾನ, ಮಧ್ಯಾಹ್ನ 1:15ರ ಸುಮಾರಿಗೆ ದೆಹಲಿಗೆ ಮರು ಪ್ರಯಾಣ ಬೆಳೆಸಿತು. ವಿಮಾನದಲ್ಲಿ ಇಂಡಿಗೋ ಕಂಪನಿ ಅಧಿಕಾರಿ, ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಅಕ್ಷಯ ಪಾಟೀಲ ಅವರು ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಉತ್ತರ ಕರ್ನಾಟಕ ಜವಾರಿ ಭಾಷೆಯಲ್ಲೇ ಸ್ವಾಗತ ಕೋರಿದರು.
ಅಲ್ಲದೆ, ಹುಬ್ಬಳ್ಳಿ-ದೆಹಲಿ ನಡುವೆ 1,700 ಕಿಮೀ ದೂರ ಇದ್ದು, ಕೇವಲ ಎರಡೂವರೆ ತಾಸಿನಲ್ಲಿ ದೆಹಲಿ ತಲುಪಬಹುದಾಗಿದೆ. ದೆಹಲಿ-ಹುಬ್ಬಳ್ಳಿ ನಡುವೆ ನೇರ ವಿಮಾನ ಆರಂಭಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಯತ್ನ ಪ್ರಮುಖವಾಗಿದೆ ಎಂದು ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಜೋಶಿ ಅವರಿಗೆ ಅಭಿನಂದನೆ ಸಲ್ಲಿಸಿದರು.
ವಿಮಾನದಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಕೊರೊನಾ ಹೋಗಿದೆ ಎಂದು ಮಾಸ್ಕ್ ಧರಿಸುವುದು ಬಿಟ್ಟಿದ್ದೇವೆ. ಅದು ಇನ್ನೂ ಸಂಪೂರ್ಣವಾಗಿ ಹೋಗಿಲ್ಲ. ಎಲ್ಲರೂ ಮಾಸ್ಕ್ ಧರಿಸಬೇಕು. ಮಾಸ್ಕ್ ಇಲ್ಲದವರು ಪಡೆದುಕೊಳ್ಳಬೇಕು ಎಂದು ಕನ್ನಡದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಷೆಯಲ್ಲೇ ಹೇಳುವ ಮೂಲಕ ಗಮನ ಸೆಳೆದರು.