ಮುಂಬಯಿ : ದೇಶ ವಾಯುಯಾನ ನಿಯಂತ್ರಣ ಸಂಸ್ಥೆಯಾಗಿರುವ ಡಿಜಿಸಿಎ ಇಂಡಿಗೋ ವಿಮಾನ ಯಾನ ಸಂಸ್ಥೆಯ ಎಂಟು ಎ320 ನಿಯೋ ಪ್ಲೇನ್‌ಗಳ ಪ್ರ್ಯಾಟ್ ಆ್ಯಂಡ್ ವಿಟ್‌ನೆ ಇಂಜಿನ್ ದೋಷಯುಕ್ತವಾಗಿರುವ ಕಾರಣ ಅವುಗಳ ಹಾರಾಟಕ್ಕೆ ತಡೆ ಒಡ್ಡಿರುವ ಹಿನ್ನೆಲೆಯಲ್ಲಿ ಮಿತವ್ಯಯದ ಇಂಡಿಗೋ ಏರ್ ಲೈನ್ಸ್ ಇಂದು ಮಂಗಳವಾರ ತನ್ನ 47 ವಿಮಾನ ಹಾರಾಟಗಳನ್ನು ರದ್ದು ಪಡಿಸಿದೆ.
ಇದೇ ವೇಳೆ ಡಿಜಿಸಿಎ ಗೋ ಏರ್ ವಿಮಾನಯಾನ ಸಂಸ್ಥೆಯ ಮೂರು ವಿಮಾನಗಳ ಇಂಜಿನ್ ದೋಷಯುಕ್ತವಾಗಿರುವುದನ್ನು ಪತ್ತೆ ಹಚ್ಚಿ ಅವುಗಳ ಹಾರಾಟಕ್ಕೂ ತಡೆ ನೀಡಿದೆ.
ಇಂಡಿಗೋ ಮಾರ್ಚ್ 13ರ ತನ್ನ ದೇಶೀಯ ವಾಯು ಯಾನ ಜಾಲದ 47 ವಿಮಾನ ಹಾರಾಟಗಳನ್ನು ರದ್ದು ಪಡಿಸಿರುವುದಾಗಿ ತನ್ನ ವೆಬ್ ಸೈಟಿನಲ್ಲಿ ಅಧಿಕೃತವಾಗಿ ತಿಳಿಸಿದೆ.
ರದ್ದಾಗಿರುವ ಇಂಡಿಗೋ ವಿಮಾನ ಹಾರಾಟಗಳಲ್ಲಿ ಮುಖ್ಯವಾದವುಗಳೆಂದರೆ ದಿಲ್ಲಿ, ಮುಂಬಯಿ, ಚೆನ್ನೈ, ಕೋಲ್ಕತ, ಹೈದರಾಬಾದ್, ಬೆಂಗಳೂರು, ಪಟ್ನಾ ಶ್ರೀನಗರ, ಭುವನೇಶ್ವರ, ಅಮೃತಸರ, ಶ್ರೀನಗರ ಮತ್ತು ಗುವಾಹಟಿ.
ಸೋಮವಾರದಂದು ಇಂಡಿಗೋ ಏರ್ ಲೈನ್ಸ್ ನ ಲಕ್ನೋ ಗೆ ಹೋಗಲಿದ್ದ ವಿಮಾನ ಕೇವಲ 40 ನಿಮಿಷಗಳ ಒಳಗೆ ಆಗಸದಲ್ಲಿ ಇಂಜಿನ್ ವೈಫಲ್ಯ ಗುರಿಯಾಗಿ ಅಹ್ಮದಾಬಾದ್‌ಗೆ ಮರಳಿತ್ತು.
ಇದನ್ನು ಅನುಸರಿಸಿ ಡಿಜಿಸಿಎ ಕೈಗೊಂಡ ತೀವ್ರ ತಪಾಸಣೆಯಲ್ಲಿ ಇಂಡಿಗೋ ಏರ್ ಲೈನ್ಸ್‌ನ ಎಂಟು ವಿಮಾನಗಳ ಇಂಜಿನ್‌ಗಳು ದೋಷಯುಕ್ತವಾಗಿರುವುದು ಕಂಡುಬಂತು. ಇದರ ಪರಿಣಾಮವಾಗಿಯೇ ಇಂಡಿಗೋ ಇಂದು ಮಂಗಳವಾರದ ತನ್ನ 47 ವಿಮಾನ ಹಾರಾಟಗಳನ್ನು ರದ್ದು ಪಡಿಸಿತು.
ಇಂಡಿಗೋ ದಿನಕ್ಕೆ 1,000 ಹಾರಾಟಗಳನ್ನು ದೇಶೀಯವಾಗಿ ಕೈಗೊಳ್ಳುತ್ತದೆ. ನಿನ್ನೆ ಸೋಮವಾರ ಇಂಡಿಗೋ ಮತ್ತು ಗೋ ಏರ್ ವಿಮಾನ ಹಾರಾಟಗಳು ರದ್ದಾದ ಕಾರಣ ನೂರಾರು ಪ್ರಯಾಣಿಕರು ಭಾರೀ ಪರದಾಟ ಅನುಭವಿಸಿದರು.