ಬೆಂಗಳೂರು: ಭಾರತೀಯತೆ ಕಡಿಮೆಯಾಗಿ ಈ ಮಣ್ಣಿನ ಗುಣವನ್ನು ಮರೆಯುತ್ತಿದ್ದೇವೆ. ದೇಶ ಭಕ್ತಿ ಮತ್ತು ಸೇವಾ ಕಾರ್ಯದ ಮೂಲಕ ಭಾರತೀಯತೆಗೆ ಇನ್ನಷ್ಟು ಬಲ ತುಂಬಬೇಕಿದೆ ಎಂದು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಗವಿಪುರದಲ್ಲಿ ಮಂಗಳವಾರ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ರಾಷ್ಟ್ರೋತ್ಥಾನ ಪರಿಷತ್ತು ದೇಶಭಕ್ತಿ ಮತ್ತು ಸೇವಾ ಕಾಯದ ಮೂಲಕ ಎಲ್ಲರಲ್ಲೂ ಭಾರತೀಯತೆ ಹಾಗೂ ಈ ಮಣ್ಣಿನ ಗುಣವನ್ನು ತುಂಬುತ್ತಿದೆ. ಈ ಮೂಲಕ ರಾಷ್ಟ್ರಭಕ್ತಿ, ಸಂಸ್ಕಾರ ಉಳಿಸಿ ಬೆಳೆಸಲು ತನ್ನದೇ ಆದ ಕೊಡಗೆ ನೀಡುತ್ತದೆ ಎಂದು ಹೇಳಿದರು.
ಅನ್ನದಾನ, ವಿದ್ಯಾದಾನಕ್ಕಿಂತ ರಕ್ತದಾನ ಶ್ರೇಷ್ಠವಾಗಿದೆ. ಪ್ರತಿ ಜೀವಿಗೂ ರಕ್ತ ಅವಶ್ಯಕ. ಹೀಗಾಗಿ, ರಕ್ತದಾನವು ದಾಸೋಹ ರೀತಿ ನಡೆಯಬೇಕು. ಸೇವೆಯ ಮೂಲಕ ರಕ್ತದಾನ ವ್ಯಾಪಕವಾಗಬೇಕಿದ್ದು, ಸೇವೆ ಮತ್ತು ತ್ಯಾಗ ಈ ದೇಶದ ಶ್ರೇಷ್ಠ ಕೊಡುಗೆ. ಶಿಕ್ಷಣ ಎಲ್ಲಿ ಬೇಕಾದರೂ ಸಿಗಬಹುದು. ಆದರೆ, ಮನುಷ್ಯನಿಗೆ ಮುಖ್ಯವಾದ ಸಂಸ್ಕಾರವನ್ನು ರಾಷ್ಟ್ರೋತ್ಥಾನ ನೀಡುತ್ತಿದೆ ಎಂದರು.
ಆರ್‌ಆರ್‌ಎಸ್ ಮಧ್ಯಕ್ಷೇತ್ರಿಯ ಸಂಘ ಚಾಲಕ್ ವಿ.ನಾಗರಾಜು ಮಾತನಾಡಿ, ತನ್ನ ರಕ್ತವನ್ನು ಇನ್ನೊಬ್ಬರಿಗೆ ನೀಡುವ ಮನೋಭಾವವೇ ಉನ್ನತ ಸೇವೆಯಾಗಿದೆ. ಇನ್ನೊಬ್ಬರಿಗಾಗಿ ಬದುಕುವ ನಿಜವಾದ ಧರ್ಮ, ಮಾತೃಪಿತೃ ಋಣವನ್ನು ಹೇಗೆ ಬೇಕಾದರೂ ತೀರಿಸಬಹುದು. ಸಮಾಜ ಋಣ ತೀರಿಸಲು ಸೇವೆಯಿಂದ ಮಾತ್ರ ಸಾಧ್ಯ. ಅದನ್ನು ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರ ಉತ್ತಮವಾಗಿ ಮಾಡುತ್ತಿದೆ ಎಂದರು.
ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನಾ.ದಿನೇಶ್ ಹೆಗ್ಡೆ ಮಾತನಾಡಿ, 1993ರಲ್ಲಿ ರಕ್ತ ನಿಧಿ ಕೇಂದ್ರ ಸ್ಥಾಪಿಸಿದ್ದು, ಸಂಗ್ರಹವಾಗುವ ರಕ್ತದಲ್ಲಿ ಶೇ.45 ರಷ್ಟು ಸರ್ಕಾರಿ ಆಸ್ಪತ್ರೆಗೆ ನೀಡುತ್ತೇವೆ. ರಕ್ತವನ್ನು ಉದ್ಯಮ ಮಾಡಿಕೊಂಡು ಮಾರಾಟ ಮಾಡುತ್ತಿಲ್ಲ. ಸರ್ಕಾರ ವಿಧಿಸಿರುವ ಶುಲ್ಕಕ್ಕೆ ಮಾತ್ರ ನೀಡುತ್ತೇವೆ.
ರಕ್ತನಿಧಿ ಕೇಂದ್ರ ಆರಂಭದಿಂದ ಈವರೆಗೂ 4,189 ಶಿಬಿರಗಳು, 3.72 ಲಕ್ಷ ರಕ್ತದಾನಿಗಳು, 7.4 ಲಕ್ಷ ಯೂನಿಟ್ ರಕ್ತದಾನ ಮಾಡಿದ್ದಾರೆ. ಪ್ರಸಕ್ತ ವರ್ಷ 334 ಶಿಬಿರಗಳನ್ನು ನಡೆಸಿದ್ದು, 29,404 ಮಂದಿ ರಕ್ತದಾನ ಮಾಡಿದ್ದು, 67,000 ಯುನಿಟ್ ರಕ್ತ ಸಂಗ್ರಹ ಮಾಡಿದ್ದೇವೆ ಎಂದರು. ಕಟ್ಟಡದ ದಾನಿ ಜಯಂತ್ ಲಾಲ್ ನಗರದಾಸ್, ರಾಷ್ಟ್ರೋತ್ಥಾನ ಪರಿಷತ್ ಅಧ್ಯಕ್ಷ ಡಾ.ಎಸ್.ಆರ್.ರಾಮಸ್ವಾಮಿ ಇದ್ದರು.