ಕಲಬುರಗಿ: ಪ್ರಸಕ್ತವಾಗಿ ಅತಿವೃಷ್ಟಿ ಹಾಗೂ ನೆಟೆರೋಗದಿಂದ ತೊಗರಿ ಹಾಳಾಗಿದ್ದರಿಂದ ಬೆಳೆವಿಮೆಯ ಪರಿಹಾರ ದೊರಕಿಸಿ ಕೊಡುವ ಬೆಳೆ ಇಳುವರಿ ಪ್ರಮಾಣ ( ಕ್ರಾಪ್ ಕಟಿಂಗ್ ಕಲ್ಟಿವೇಶನ್) ಅಳೆಯುವ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗರು ಹಾನಿಯ ನಿಖರವಾದ ವರದಿ ದಾಖಲೀಕರಣಕ್ಕೆ ಬೆಳೆವಿಮಾ ಕಂಪನಿ ಅಧಿಕಾರಿಗಳು ಅಸಡ್ಡೆ ತೋರಿದ್ದಲ್ಲದೇ ಹೆಚ್ಚಿನ ಇಳುವರಿ ತೋರಿಸುವಂತೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಬೆಳೆ ವಿಮಾ ಕಂಪನಿ ವಿರುದ್ದ ಎಫ್ ಐಆರ್ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ ಗುರುಕರ್ ತಿಳಿಸಿದರು.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಬೃಹತ್ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅಧ್ಯಕ್ಷತೆ ಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ತಿಳಿಸಿದರು.
ಯುನಿವರ್ಸಲ್ ಸೊಂಪೋ ಇನ್ಶುರೆನ್ಸ್ ಕಂಪನಿ ಅಧಿಕಾರಿಗಳು ಗ್ರಾಮ ಲೆಕ್ಕಾಧಿಕಾರಿಗಳಿಗೆ ಇಳುವರಿ ಕಡಿಮೆ ಬಂದರೂ ಹೆಚ್ಚಿನ ಪ್ರಮಾಣದಲ್ಲಿ ಇಳುವರಿ ತೊರಿಸುವಂತೆ ವಿನಾ ಕಾರಣ ತೊಂದರೆ ಕೊಡುತ್ತಿರುವುದು ತಮ್ಮ ಗಮನಕ್ಕೆ ಬಂದ ನಂತರ ಇನ್ಶುರೆನ್ಸ್ ಕಂಪನಿ ಅಧಿಕಾರಿಗಳಿಗೆ ಕರೆಯಿಸಿ ಎಚ್ಚರಿಕೆ ನೀಡಲಾಗಿ ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿ ಎಫ್ ಐಆರ್ ದಾಖಲಿಸಲಾಗಿದೆ. ಪ್ರಮುಖವಾಗಿ ಸೊಂಪೋ ಇನ್ಶುರೆನ್ಸ್ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಸರ್ಕಾರಕ್ಕೆ ಶಿಪಾರಸ್ಸು ಮಾಡಲಾಗಿದೆ ಎಂದು ಸಭೆ ಗಮನಕ್ಕೆ ತಂದರು.
ಕಲಬುರಗಿಯಲ್ಲೇ ಹೆಚ್ಚಿನ ಹಾನಿ
ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಅತಿ ಹೆಚ್ಚಿನ ಬೆಳೆ ಹಾನಿ ಕಲಬುರಗಿಯಲ್ಲಾಗಿದೆ. 1.80 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದರು.
ಸ್ಥಳೀಯ ಪ್ರಕೃತಿ ವಿಕೋಪ ದಡಿ ಈಗಾಗಲೇ 38 ಕೋ ರೂ ಬೆಳೆವಿಮೆ ಜಮಾ ಆಗಿದೆ.ಎರಡನೇ ಹಂತದಲ್ಲಿ 37 ಸಾವಿರ ರೈತರಿಗೆ 72 ಕೋ.ರೂ ಬೆಳೆವಿಮೆ ಪರಿಹಾರ ನೀಡಲಾಗುತ್ತದೆ ಎಂದು ಸಭೆಗೆ ವಿವರಿಸಿದರು.
ಸಿಎಂ ಬಳಿ ನಿಯೋಗ: ನೆಟೆರೋಗದಿಂದ ಹಾಳಾಗಿರುವ ತೊಗರಿಗೆ ಸೂಕ್ತ ಪರಿಹಾರ ನೀಡುವಂತೆ ಹಾಗೂ ಬೆಳೆ ಹಾನಿ ಗೆ ಸೂಕ್ತ ಬೆಳೆ ವಿಮೆ ದೊರಕಿಸುವಂತೆ ಒತ್ತಾಯಿಸಿ ಇದೇ ಜ. 12 ರಂದು ಜಿಲ್ಲೆಯ ಶಾಸಕರ ನಿಯೋಗದ ಮೂಲಕ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೃಷಿ ಸಚಿವ ರನ್ನು ಭೇಟಿ ಮಾಡೋಣ ಎಂದು ಸಚಿವ ಮುರುಗೇಶ ನಿರಾಣಿ ಪ್ರಕಟಿಸಿದರು.
ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ, ಕೆಕೆಆರ್ ಟಿಸಿ ಅಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ, ಶಾಸಕರು, ವಿಧಾನ ಪರಿಷತ್ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.