ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿ ವಿರುದ್ಧ ನಗರದಲ್ಲಿ ದಾಖಲಾಗಿದ್ದ ಎರಡು ಪ್ರತ್ಯೇಕ ಪ್ರಕರಣಗಳ ತನಿಖೆ ಮುಕ್ತಾಯಗೊಳಿಸಿರುವ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ತಿಲಕ್ ನಗರ ಠಾಣಾ ವ್ಯಾಪ್ತಿಯಲ್ಲಿ ಶಬನಂ ಬಿಲ್ಡರ್ ಕಚೇರಿ ಸಿಬ್ಬಂದಿ ಜೋಡಿ ಕೊಲೆ ಪ್ರಕರಣ ಹಾಗೂ ವೈಟ್‌ಫೀಲ್ಡ್ ಠಾಣೆ ವ್ಯಾಪ್ತಿಯಲ್ಲಿ ದೇವ ಸ್ಥಾನದ ಟ್ರಸ್ಟಿಯೊಬ್ಬರಿಂದ ಹಣ ಸುಲಿಗೆ ಪ್ರಕರಣಗಳಲ್ಲಿ ರವಿ ಪೂಜಾರಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಪ್ರಕರಣದಲ್ಲಿ ಈಗಾಗಲೇ 18 ಮಂದಿಯನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದರು.
ರವಿ ಪೂಜಾರಿ ಬಂಧನದ ಬಳಿಕ ಪ್ರಕರಣದಲ್ಲಿ ಒಟ್ಟು 18 ಮಂದಿಯನ್ನು ಬಂಧಿಸಿದಂತಾಗಿದೆ. ಪ್ರಕರಣದಲ್ಲಿ ಪೂಜಾರಿ ಮೇಲೆ 514 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, 48 ಜನರ ಹೇಳಿಕೆ ಹಾಗೂ ಸಾಕ್ಷ ಸಂಗ್ರಹಿಸಲಾಗಿದೆ ಎಂದರು. ಅಂದಿನ ಪಾಲಿಕೆ ಸದಸ್ಯ ಸಮೀವುಲ್ಲಾ ಶಬನಂ ಬಿಲ್ಡರ್ ನಡೆಸುತ್ತಿದ್ದು, ಅವರಿಗೆ ವಿದೇಶದಿಂದಲೇ ಬೆದರಿಕೆ ಕರೆ ಮಾಡಿದ್ದ ಪೂಜಾರಿ, ಲಕ್ಷಾಂತರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ.
ಹಣ ನೀಡಲು ಒಪ್ಪದಿದ್ದಾಗ ಕೊಲೆ ಮಾಡುವುದಾಗಿ ಬೆದರಿಸಿದ್ದ. ತಿಲಕ್‌ನಗರ ಠಾಣೆ ವ್ಯಾಪ್ತಿಯಲ್ಲಿ 2007 ರ ಫೆ. 15ರಂದು ಮುಸುಕುಧಾರಿಗಳಾಗಿ ಶಬನಂ ಕಚೇರಿಗೆ ಆಗಮಿಸಿದ್ದ ದುಷ್ಕರ್ಮಿಗಳು “ಶಬನಂ ಬಿಲ್ಡರ್’ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಶೈಲಜಾ ಹಾಗೂ ಕಾರು ಚಾಲಕ ರವಿ ಅವರನ್ನು ಗುಂಡಿಕ್ಕಿ ಕೊಂದಿದ್ದರು. ಹತ್ಯೆ ಬಳಿಕ ಆರೋಪಿಗಳು ರವಿ ಪೂಜಾರಿ ಎಂಬ ಭಿತ್ತಿ ಪತ್ರವನ್ನು ಕಚೇರಿ ಗಾಜಿನ ಮೇಲೆ ಅಂಟಿಸಿ ಹೋಗಿದ್ದರು.
ಪೂಜಾರಿಯ ಸಹಚರರು ಎನ್ನಲಾದ ಕವಿರಾಜ್, ಮೋಹನ್, ಶಿವಾ, ಇಬ್ರಾಹಿಂ, ಮಹೇಶ್, ಸಂತೋಷ್ ರೈ, ಪ್ರದೀಪ್, ಆಜಾದ್ ಹಾಗೂ ಉದಯ್ ಕುಮಾರ್ ಹೆಗ್ಡೆಯನ್ನು 2009ರಲ್ಲೇ ಬಂಧಿಸಲಾಗಿತ್ತು ಎಂದು ತನಿಖಾ ತಂಡದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ವೈಟ್‌ಫೀಲ್ಡ್ ಪ್ರಕರಣ: ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯ ದೇವಸ್ಥಾನವೊಂದರ ಟ್ರಸ್ಟಿಗೆ ಕರೆ ಮಾಡಿದ್ದ ರವಿ ಪೂಜಾರಿ ಜೀವ ಬೆದರಿಕೆಯೊಡ್ಡಿದ್ದ. ಅಲ್ಲದೆ, ಹಣ ಸುಲಿಗೆ ಮಾಡಿದ್ದ. ಈ ಪ್ರಕರಣದಲ್ಲೂ 200 ಪುಟಗಳ ದೋಷಾರೋಪ ಪಟ್ಟಿ ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಅಧಿಕಾರಿ ವಿವರಿಸಿದರು.
ವಿದೇಶದಲ್ಲಿ ಅಡಗಿ ಕುಳಿತಿದ್ದ ಪಾತಕಿ ರವಿ ಪೂಜಾರಿ ಉದ್ಯಮಿ, ರಾಜಕಾರಣಿಗಳಿಗೆ ಹಣ ಬೇಡಿಕೆಯಿಡುತ್ತಿದ್ದ. ಈತನ ವಿರುದ್ಧ ಬೆಂಗಳೂರಿನಲ್ಲಿ 39, ಮಂಗಳೂರಿನಲ್ಲಿ 36, ಉಡುಪಿಯಲ್ಲಿ 11, ಮೈಸೂರು, ಹುಬ್ಬಳ್ಳಿ- ಧಾರವಾಡ, ಕೋಲಾರ ಮತ್ತು ಶಿವಮೊಗ್ಗದಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.