ಮುಂಬೈ:ಕೋವಿಡ್ 19 ಸೋಂಕು ಗುಣಪಡಿಸುವ ಲಸಿಕೆ ಅಭಿವೃದ್ಧಿ ಹಂತದಲ್ಲಿದೆ ಎಂಬ ವಿಶ್ವಾಸದ ಹಿನ್ನೆಲೆಯಲ್ಲಿ ಮುಂಬೈ ಶೇರುಪೇಟೆ ಮಂಗಳವಾರ (ನವೆಂಬರ್ 10, 2020)ಬಿಎಸ್ ಇ ಮತ್ತು ಎಸ್ ಎಸ್ ಇ ಭರ್ಜರಿ ದಾಖಲೆಯ ಅಂಕಗಳೊಂದಿಗೆ ವಹಿವಾಟು ನಡೆಸಿದೆ.
ಬಾಂಬೆ ಶೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ 680 ಅಂಕಗಳ ಏರಿಕೆಯೊಂದಿಗೆ 43,316 ಅಂಕಗಳೊಂದಿಗೆ ವಹಿವಾಟು ಮುಕ್ತಾಯಗೊಂಡಿದೆ.
ರಾಷ್ಟ್ರೀಯ ಶೇರುಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡಾ 165 ಅಂಕಗಳ ಏರಿಕೆಯೊಂದಿಗೆ 12,631 ಅಂಕಗಳ ವಹಿವಾಟಿನಿಂದಿಗೆ ಅಂತ್ಯಗೊಂಡಿದೆ. ಇಂದು ಬೆಳಗ್ಗೆ ಮುಂಬೈ ಶೇರುಮಾರುಕಟ್ಟೆ ವಹಿವಾಟು ಆರಂಭವಾಗುತ್ತಲೇ ಸೆನ್ಸೆಕ್ಸ್ ಮತ್ತು ನಿಫ್ಟಿ ಅಂಕ ಭರ್ಜರಿ ಏರಿಕೆ ಕಂಡಿತ್ತು.
ಸೆನ್ಸೆಕ್ಸ್ ಸಾರ್ವಕಾಲಿಕ ಏರಿಕೆಯ ಪರಿಣಾಮ ಬಜಾಜ್ ಫೈನಾನ್ಸ್, ಇಂಡಸ್ ಲ್ಯಾಂಡ್ ಬ್ಯಾಂಕ್, ಬಜಾಜ್ ಫಿನ್ ಸರ್ವ್, ಎಸ್ ಬಿಐ ಮತ್ತು ಎಚ್ ಡಿಎಫ್ ಸಿ ಶೇರು ಶೇ.8.94ರಷ್ಟು ಏರಿಕೆಯಾಗುವ ಮೂಲಕ ಭರ್ಜರಿ ಲಾಭ ಪಡೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಶಿರಾದಲ್ಲಿ ‘ವಿಜಯ’: ಕಲ್ಪತರು ನಾಡಿನಲ್ಲಿ ಕಮಲ ಅರಳಿಸಿದ ಡಾ.ರಾಜೇಶ್ ಗೌಡ
ಮುಂಬೈ ಶೇರುಪೇಟೆ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಸೋಮವಾರ ಕೂಡಾ 704 ಅಂಕಗಳ ಏರಿಕೆ ಕಂಡು 42,597 ಅಂಕಗಳೊಂದಿಗೆ ವಹಿವಾಟು ಅಂತ್ಯಕಂಡಿತ್ತು. ಅದೇ ರೀತಿ ನಿಫ್ಟಿ ಕೂಡಾ 197 ಅಂಕಗಳ ಏರಿಕೆಯೊಂದಿಗೆ 12,461 ಅಂಕಗಳೊಂದಿಗೆ ವಹಿವಾಟು ಮುಕ್ತಾಯವಾಗಿತ್ತು. ಅಮೆರಿಕ ಅಧ್ಯಕ್ಷರಾಗಿ ಜೋ ಬೈಡೆನ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಶೇರುಪೇಟೆ ವಹಿವಾಟು ಚೇತರಿಕೆಗೆ ಕಾರಣವಾಗಿತ್ತು.