Advertisement

I.N.D.I.A.ಗೆ ನಿಲ್ಲದ “ಪ್ರಧಾನಿ” ಸಂಕಟ -ದೆಹಲಿ ಸಿಎಂ ಕೇಜ್ರಿವಾಲ್‌ ಪರ ಧ್ವನಿ ಎತ್ತಿದ ಆಪ್‌

09:32 PM Aug 30, 2023 | Team Udayavani |

ನವದೆಹಲಿ/ಮುಂಬೈ: ಕಾಂಗ್ರೆಸ್‌ ನೇತೃತ್ವದ ಪ್ರತಿಪಕ್ಷಗಳ ಒಕ್ಕೂಟ ಐ.ಎನ್‌.ಡಿ.ಐ.ಎ.ನ ಮೂರನೇ ಸಭೆ ಆ.31, ಸೆ.1ರಂದು ಮುಂಬೈನಲ್ಲಿ ನಡೆಯಲಿದೆ. ಅದರ ನಡುವೆಯೇ ಪ್ರಧಾನಮಂತ್ರಿ ಹುದ್ದೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಆಗಬೇಕು ಎಂದು ಆಪ್‌ನ ನಾಯಕರು ಬಹಿರಂಗವಾಗಿಯೇ ಸಾರಿದ್ದಾರೆ. ದೆಹಲಿಯಲ್ಲಿ ಉಚಿತ ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಜನಮೆಚ್ಚುಗೆಯ ಯೋಜನೆಗಳನ್ನು ಕ್ಲುಪ್ತವಾಗಿ ಜಾರಿ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಬಲ ಪ್ರತಿಸ್ಪರ್ಧೆ ನೀಡಲು ಅರವಿಂದ ಕೇಜ್ರಿವಾಲ್‌ ಯೋಗ್ಯರಾಗಿದ್ದಾರೆ ಎಂದು ಪಕ್ಷದ ವಕ್ತಾರೆ ಪ್ರಿಯಾಂಕಾ ಕಕ್ಕರ್‌ ಹೇಳಿದ್ದಾರೆ.

Advertisement

ಜನರಿಗೆ ಹತ್ತಿರವಾಗಿರುವ ವಿಚಾರಗಳನ್ನು ಕೇಜ್ರಿವಾಲ್‌ ಪ್ರಸ್ತಾಪಿಸಿ, ಪ್ರಧಾನಿ ನರೇಂದ್ರ ಮೋದಿಯವರಿಗೆ ಸಮಾನವಾಗಿದ್ದಾರೆ. ಪ್ರಧಾನಿಯವರ ಶೈಕ್ಷಣಿಕ ಅರ್ಹತೆ ಸೇರಿದಂತೆ ಯಾವುದೇ ವಿಚಾರಗಳನ್ನು ಕೇಜ್ರಿವಾಲ್‌ ಧೈರ್ಯವಾಗಿ ಮಂಡಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಪ್ರಿಯಾಂಕಾ ಹೇಳಿಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಜೆಡಿಯು ಮುಖಂಡರು ನಿತೀಶ್‌ ಕುಮಾರ್‌ ಪ್ರಧಾನಿಯಾಗಲಿ ಎಂದಿದ್ದರೆ, ಕಾಂಗ್ರೆಸ್‌ ನಾಯಕರು ರಾಹುಲ್‌ ಗಾಂಧಿ ಪ್ರಧಾನಿಯಾಗಲಿ ಎಂದು ಪ್ರತಿಪಾದಿಸಿದ್ದರು.

ಯಾರ ಜತೆಗೂ ಇಲ್ಲ:
ಬಿಜೆಪಿ ನೇತೃತ್ವದ ಎನ್‌ಡಿಎ ಅಥವಾ ಕಾಂಗ್ರೆಸ್‌ ನೇತೃತ್ವದ ಐ.ಎನ್‌.ಡಿ.ಐ.ಎ. ಜತೆಗಾಗಲಿ ಸಂಪರ್ಕವನ್ನೇ ಹೊಂದಿಲ್ಲ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡುವುದಾಗಿ ಪ್ರಕಟಿಸಿದ್ದಾರೆ. ಬಿಎಸ್‌ಪಿ ಯಾವತ್ತಿದ್ದರೂ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ನೀತಿಗಳ ವಿರುದ್ಧ ಹೋರಾಟ ನಡೆಸುತ್ತಾ ಬಂದಿದೆ ಎಂದೂ ಬರೆದುಕೊಂಡಿದ್ದಾರೆ.

ಸ್ಥಾನ ಹೊಂದಾಣಿಕೆ, ಲಾಂಛನ ಅಂತಿಮಗೊಳ್ಳುವ ಸಾಧ್ಯತೆ
ಎರಡು ದಿನಗಳ ಕಾಲ ಮುಂಬೈನಲ್ಲಿ ನಡೆಯಲಿರುವ ಸಭೆಯಲ್ಲಿ ಲೋಕಸಭೆ ಚುನಾವಣೆ ಪ್ರಯುಕ್ತ ಐ.ಎನ್‌.ಡಿ.ಐ.ಎ. ಪಾಲುದಾರ ಪಕ್ಷಗಳ ನಡುವೆ ಸ್ಥಾನ ಹೊಂದಾಣಿಕೆ ಬಗ್ಗೆ ಮಾತುಕತೆ ನಡೆದು ಅಂತಿಮಗೊಳ್ಳುವ ಸಾಧ್ಯತೆ ಇದೆ. ಜತೆಗೆ ಒಕ್ಕೂಟಕ್ಕೆ ಹೊಸ ಲಾಂಛನ, ಧ್ವಜ ಬಿಡುಗಡೆಯಾಗುವ ಸಾಧ್ಯತೆಗಳು ಇವೆ. ಮುಂಬೈ ಸಭೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ “ಲಾಲು ಪ್ರಸಾದ್‌ ಯಾದವ್‌ ಅವರು, ಬಿಹಾರದಲ್ಲಿ ತನ್ನ ಮಗನನ್ನು ಮುಖ್ಯಮಂತ್ರಿ ಮಾಡಲು ಒಕ್ಕೂಟದ ಜತೆಗೆ ಸೇರ್ಪಡೆಯಾಗಿದ್ದಾರೆ. 2014, 2019ರಲ್ಲಿ ಜನರು ಸೂಕ್ತ ಉತ್ತರ ನೀಡಿದ್ದಾರೆ. ಕಾಂಗ್ರೆಸ್‌ ಅಧಿಕಾರದಲ್ಲಿರುವಾಗಲೇ ಲಾಲು ವಿರುದ್ಧ ಕೇಸು ದಾಖಲಾಗಿತ್ತು. ಮಗನ ಹಿತಾಸಕ್ತಿ ಕಾರಣಕ್ಕಾಗಿಯೇ ಲಾಲು ಯಾದವ್‌ ಕಾಂಗ್ರೆಸ್‌ ನೇತೃತ್ವದ ಮೈತ್ರಿಕೂಟದ ಜತೆಗೆ ಇದ್ದಾರೆಯೇ ಹೊರತು ರಾಷ್ಟ್ರದ ಹಿತದೃಷ್ಟಿಯಿಂದ ಅಲ್ಲ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next