Advertisement
ಹೌದು ಜೂನ್ ತಿಂಗಳ ಮೊದಲ ಮೂರು ವಾರಗಳಲ್ಲಿ ನಿರುದ್ಯೋಗ ಪ್ರಮಾಣವು ಗಮನಾರ್ಹವಾಗಿ ಕಡಿಮೆಯಾಗಿದ್ದು, ಏಪ್ರಿಲ್-ಮೇ ತಿಂಗಳಲ್ಲಿ ದಾಖಲಾಗಿದ್ದ ಅತಿ ಹೆಚ್ಚು ನಿರುದ್ಯೋಗ ದರ ಶೇ.25.83 ಕ್ಕೆ ಹೋಲಿಸಿದರೆ ಜೂನ್ 12 ಕ್ಕೆ ಕೊನೆಗೊಂಡ ವಾರದಲ್ಲಿ ಶೇ11.2 ರಷ್ಟು ದಾಖಲಾಗುವ ಮೂಲಕ ನಿರುದ್ಯೋಗ ದರ ತೀರಾ ಕುಸಿದಿದೆ. ಆದರೆ ನಗರ ಪ್ರದೇಶಗಳಲ್ಲಿನ ನಿರುದ್ಯೋಗ ಪ್ರಮಾಣದಲ್ಲಿ ಇಳಿಕೆ ಕಂಡೂ ಬಂದರೂ ಲಾಕ್‌ಡೌನ್‌ನ ಹಿಂದಿನ ಅವಧಿಗಿಂತ ಹೆಚ್ಚಾಗಿದೆ.
ಜತೆಗೆ ಚಿಕ್ಕ ಪುಟ್ಟ ವ್ಯಾಪಾರಗಳು ಸಹ ಲಾಭ ಕಾಣಲಾರಂಭಿಸಿದ್ದು, ಸದ್ಯದ ಪರಿಸ್ಥಿತಿಯಲ್ಲಿ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗವಕಾಶಗಳು ಹೆಚ್ಚಾಗಲಾರಂಭಿಸಿವೆ. ಬರುವ ಕೆಲ ತಿಂಗಳಲ್ಲಿ ಗ್ರಾಮೀಣ ಉದ್ಯೋಗವಕಾಶ ದರ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದ್ದು, ಜೂನ್ 21 ಕ್ಕೆ ಕೊನೆಗೊಂಡ ವಾರದಲ್ಲಿ ಗ್ರಾಮೀಣ ಪ್ರದೇಶದ ನಿರುದ್ಯೋಗ ದರವು ಶೇ 7.26 ಕ್ಕೆ ಕುಸಿದಿದೆ. ಮಾರ್ಚ್ 22 ಕ್ಕೆ ಕೊನೆಗೊಂಡ ವಾರದಲ್ಲಿ ಈ ದರ ಶೇ 8.3 ರಷ್ಟಿತ್ತು. ಗ್ರಾಮೀಣ ಭಾಗದಲ್ಲಿ ಮನರೇಗಾ ಕೂಲಿ ಕೆಲಸ ಹಾಗೂ ಮುಂಗಾರು ಹಂಗಾಮಿನ ಚಟುವಟಿಕೆಗಳಿಂದ ಉದ್ಯೋಗವಕಾಶಗಳು ಸೃಷ್ಟಿ ಆಗುತ್ತಿವೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿದ್ದು, ಸೂಕ್ತ ಸಮಯದಲ್ಲಿ ಮನರೇಗಾ ಕೂಲಿ ಕೆಲಸಗಳಿಗೆ ಸರಕಾರ ಹೆಚ್ಚು ಒತ್ತು ನೀಡಿದ್ದರಿಂದ ಹಾಗೂ ಸಕಾಲಕ್ಕೆ ಮಳೆಯಾಗಿ ಬಿತ್ತನೆ ಆರಂಭವಾಗಿದ್ದರಿಂದ ನಿರುದ್ಯೋಗ ಸಮಸ್ಯೆ ಕಡಿಮೆಯಾಗಲು ಪ್ರಮುಖ ಕಾರಣ ಎಂದು ವರದಿ ಹೇಳಿದೆ.