ನವದೆಹಲಿ/ವಿಶ್ವಸಂಸ್ಥೆ: ವಿಶ್ವಸಂಸ್ಥೆಯಲ್ಲಿ ಭಾರತದ ಖಡಕ್ ರಾಯಭಾರಿ ಎಂದೇ ಗುರುತಿಸಿಕೊಂಡಿದ್ದ ಸೈಯದ್ ಅಕ್ಬರುದ್ದೀನ್ ಗೆ ಇಂದು ಕಚೇರಿಯಲ್ಲಿ ಅಧಿಕಾರಾವಧಿಯ ಕೊನೆಯ ದಿನ. ವಿಶ್ವಸಂಸ್ಥೆಯಲ್ಲಿ ತಮ್ಮ ಕರ್ತವ್ಯದ ಕೊನೆಯ ದಿನವಾದ ಗುರುವಾರ ವಿಶ್ವಸಂಸ್ಥೆ ಮುಖ್ಯಸ್ಥ ಆ್ಯಂಟನಿಯೋ ಗ್ಯುಟೆರಸ್ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ ತಲೆಬಾಗಿ ನಮಸ್ತೆ ಎಂದು ಹೇಳಿರುವ ಫೋಟೋವನ್ನು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸೈಯದ್ ಅವರು ಟ್ವೀಟ್ ನಲ್ಲಿ, ಇದು ಸಾಮಾನ್ಯವಾಗಿ ಒಂದು ಕೆಲಸದಿಂದ ನಿರ್ಗಮಿಸುವಾಗ ಸಲ್ಲಿಸುವ ವಂದನೆಯಾಗಿದೆ ಎಂದು ತಿಳಿಸಿದ್ದು, ಟ್ವೀಟ್ ನಲ್ಲಿರುವ ವಿಡಿಯೋದಲ್ಲಿ, ಅಕ್ಬರುದ್ದೀನ್ ಅವರು ತಮ್ಮ ಎರಡು ಕೈಗಳನ್ನು ಮುಗಿದು ನಮಸ್ಕರಿಸಿದ್ದು, ನಂತರ ನಮಸ್ಕಾರದ ಔಚಿತ್ಯದ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆ್ಯಂಟನಿಯೋ ಗ್ಯುಟೆರಸ್ ಅವರಿಗೆ ವಿವರಣೆ ನೀಡಿದ್ದರು.
“ನಾವು ಹೊರಡುವಾಗ ಅಥವಾ ಒಬ್ಬರನ್ನೊಬ್ಬರು ಭೇಟಿಯಾದಾಗ, ನಾವು ಹಲೋ ಅಥವಾ ಥ್ಯಾಂಕ್ಸ್ ಎಂದು ಹೇಳುವುದಿಲ್ಲ. ಯಾವಾಗಲೂ ನಮಸ್ತೆ ಎಂದು ಹೇಳುತ್ತೇವೆ. ನಾನು ಕೂಡಾ ನನ್ನ ಕರ್ತವ್ಯದ ನಿರ್ಗಮನದ ಹಿನ್ನೆಲೆಯಲ್ಲಿ ನಮಸ್ತೆ ಎಂದು ಹೇಳುತ್ತಿದ್ದೇನೆ” ಎಂದು ಸೈಯದ್ ಅವರು ತಿಳಿಸಿದ್ದಾರೆ. ಈ ಮಾತನ್ನು ಕೇಳಿಸಿಕೊಂಡ ಗ್ಯುಟೆರಸ್ ನಗುಮುಖದಿಂದ ಸಾಂಕೇತಿಕವಾಗಿ ನಮಸ್ತೆ ಎಂದು ಪ್ರತಿಕ್ರಿಯಿಸಿದ್ದರು.
ಸೈಯದ್ ಅಕ್ಬರುದ್ದೀನ್ ಅವರು 1985ರ ಬ್ಯಾಚ್ ನ (ಐಎಫ್ ಎಸ್) ಅಧಿಕಾರಿಯಾಗಿದ್ದರು. ಇವರು 2016ರಿಂದ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಸದಸ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಸೈಯದ್ ಅವರಿಂದ ತೆರವಾಗುವ ಸ್ಥಾನಕ್ಕೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಟಿಎಸ್ ತಿರುಮತಿ ನೇಮಕವಾಗಲಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಸೈಯದ್ ಅಕ್ಬರುದ್ದೀನ್ ಅವರು ಅಪ್ಪಟ ರಾಜತಾಂತ್ರಿಕ ನಡೆಯನ್ನು ಅನುಸರಿಸುವ ಮೂಲಕ ವಿಶ್ವದ ಗಮನ ಸೆಳೆದಿದ್ದರು. ವಿಶ್ವಸಂಸ್ಥೆಯ ಉನ್ನತ ಮಟ್ಟದ ಸಭೆಯಲ್ಲಿ ಪಾಕಿಸ್ತಾನ ಜಮ್ಮು-ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿದಾಗಲೆಲ್ಲಾ ಅದನ್ನು ಬಲವಾಗಿ ಖಂಡಿಸಿ, ಭಾರತದ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದ್ದ ಧೀಮಂತ ರಾಯಭಾರಿಯಾಗಿದ್ದರು.