Advertisement

ಹಲಸಿಗೆ ಲಭಿಸುತ್ತಿದೆ ಜಾಗತಿಕ ಮನ್ನಣೆ

12:34 AM May 19, 2020 | Sriram |

ತೃಶ್ಶೂರು: ಸಣ್ಣ ಮುಳ್ಳುಗಳು, ದಪ್ಪ ಕವಚ, ಕೈಗಂಟುವ ಮೇಣದ ಅಡ್ಡಿಗಳನ್ನು ಬಿಡಿಸಿದರೆ ಜೇನು ಸಿಹಿಯ ಸ್ವರ್ಣ ವರ್ಣದ ತೊಳೆಗಳು! ಎಳೆಗಾಯಿ, ಹದ ಬಲಿತದ್ದು, ಬೆಳೆದ ಕಾಯಿ, ಹಣ್ಣು, ಅದರೊಳಗಿನ ಬೀಜ- ಹೀಗೆ ಸರ್ವಾಂಗವೂ, ಸರ್ವ ರೂಪವೂ ಖಾದ್ಯ. ಶತಮಾನಗಳಿಂದ ದಕ್ಷಿಣ ಭಾರತದ ಪ್ರಮುಖ ಆಹಾರಗಳಲ್ಲಿ ಒಂದಾಗಿರುವ ಹಲಸು ಈಗ ಜಗತ್ತಿನ ಸೂಪರ್‌ ಫ‌ುಡ್‌ ಆಗಿ ಮಾರುಕಟ್ಟೆಯನ್ನು ಆಳುತ್ತಿದೆ.

Advertisement

ಜಗತ್ತಿನ ಅತೀ ದೊಡ್ಡ ಹಲಸು ಉತ್ಪಾದಕನಾಗಿರುವ ಭಾರತಕ್ಕೆ ಇದು ಹಲಸಿನಷ್ಟೇ ಸಿಹಿಸುದ್ದಿ. ಕೋವಿಡ್-19 ಎದುರಾದ ಮೇಲೆ ಮಾಂಸಾಹಾರಕ್ಕಿಂತ ಸಸ್ಯಜನ್ಯ ಆಹಾರಗಳೇ ಆರೋಗ್ಯದಾಯಕ ಎನ್ನುವ ಸತ್ಯವನ್ನು ಜಗತ್ತು ಕಂಡುಕೊಂಡಿದೆ. ಮಾಂಸದಂತೆ ಹಲಸಿಗೂ ಬೇಗನೆ ಮಸಾಲೆ ಹೀರಿಕೊಳ್ಳುವ ಗುಣವಿರುವುದರಿಂದ ಬಾಣಸಿಗರಿಗೆ ಅಡುಗೆ ಸಲೀಸಾಗುತ್ತಿದೆ. ವಿದೇಶಗಳಲ್ಲಿ ಜನರು ಮಾಂಸಕ್ಕೆ ಪರ್ಯಾಯವಾಗಿ ಹಲಸಿನ ಬಳಕೆ ಆರಂಭಿಸಿದ್ದಾರೆ.

ಇಷ್ಟವಾಗಲು ಕಾರಣ?
ಹಲಸಿನ ಖಾದ್ಯಗಳು ರುಚಿಯ ಹುಚ್ಚು ಹಿಡಿಸು ತ್ತಿವೆ ಎನ್ನುತ್ತಾರೆ ಕೇರಳದ ಆಹಾರೋದ್ಯಮಿ ಜೇಮ್ಸ್‌ ಜೋಸೆಫ್. ಕೇರಳ ಮೂಲದ ಜೋಸೆಫ್, ಮೈಕ್ರೋಸಾಫ್ಟ್ ಹುದ್ದೆ ತೊರೆದು ಹಲಸಿಗೆ ಜಾಗತಿಕ ಮಾರುಕಟ್ಟೆ ದೊರಕಿಸುವಲ್ಲಿ ಶ್ರಮಿಸುತ್ತಿದ್ದಾರೆ.

ಸಸ್ಯಜನ್ಯ ಆಹಾರ ಬಳಕೆಯೇ ಆರೋಗ್ಯದಾಯಕ ಎಂದು ವಿಶ್ವ ಆರೋಗ್ಯ ಸಂಸ್ಥೆ 2019ರಲ್ಲಿ ಹೇಳಿರು ವುದೂ ಹಲಸಿಗೆ ವರದಾನವಾಗಿ ಪರಿಣಮಿಸಿದೆ.

ಹಲಸು ಏಕೆ ಆರೋಗ್ಯಸ್ನೇಹಿ?
-ದೇಹಕ್ಕೆ ಅತ್ಯಗತ್ಯವಾಗಿರುವ ಪ್ರೊಟೀನ್‌, ವಿಟಮಿನ್‌, ಕ್ಯಾಲ್ಸಿಯಂ ಇದೆ.
- ಕೊಬ್ಬುರಹಿತ ಹಣ್ಣು. ಬೊಜ್ಜು, ಹೃದಯಾಘಾತ ಆಹ್ವಾನಿಸುವುದಿಲ್ಲ.
- ಅಧಿಕ ಫೈಬರ್‌ ಅಂಶ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯಕ್ಕೆ ಸಹಕಾರಿ.
-  ರಕ್ತದೊತ್ತಡ ಹೆಚ್ಚಿಸುವ ಸೋಡಿಯಂ ಅಂಶ ಇಲ್ಲ.
- ಬೇಸಗೆಯಲ್ಲಿ ದಾಹ ತಪ್ಪಿಸುತ್ತದೆ, ಅಲ್ಪಾಹಾರದಿಂದ ಸಂತೃಪ್ತಿ

Advertisement

ಮನಸ್ಸು ಕದ್ದ ಹಲಸು
ಚಪಾತಿಯಂತೆ ರುಚಿ ಕೊಡುವ ಜಾಕ್‌ಫ್ರೂಟ್ ಟ್ಯಾಕೊ, ಕಟ್ಲೆಟ್‌, ಕೇಕ್‌, ಜ್ಯೂಸ್‌, ಬರ್ಗರ್‌, ಐಸ್‌ಕ್ರೀಮ್‌, ಕ್ರಿಸ್ಪೀಸ್‌ ರೂಪದಲ್ಲಿ ಹಲಸು ಪಾಶ್ಚಾತ್ಯರ ನಾಲಿಗೆಗೆ ಮುದ ನೀಡುತ್ತಿದೆ. ಜೋಸೆಫ್ ಅವರ ಸಂಸ್ಥೆಯು ಹಲಸಿನ ಹಿಟ್ಟನ್ನು ವಿಶ್ವದ ಮಾರುಕಟ್ಟೆಗೆ ಪರಿಚಯಿಸಿದ್ದು, ಇದು ಗೋಧಿ, ಅಕ್ಕಿ ಹಿಟ್ಟಿಗೆ ಪರ್ಯಾಯವಾಗಿ ಜನಪ್ರಿಯತೆ ಪಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next