ಬ್ರಿಸ್ಟಲ್: ಭಾರತ ಮಹಿಳಾ ತಂಡದ ಯುವ ಆಟಗಾರ್ತಿ ಶಫಾಲಿ ವರ್ಮಾ ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿ ಅರ್ಧಶತಕ ಗಳಿಸಿರುವ ಶಫಾಲಿ ಈ ಸಾಧನೆ ಮಾಡಿದ ಕಿರಿಯ ಆಟಗಾರ್ತಿ ಎಂಬ ದಾಖಲೆ ಮಾಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಶಫಾಲಿ ಮೊದಲ ಇನ್ನಿಂಗ್ಸ್ ನಲ್ಲಿ 96 ರನ್ ಗಳಿಸಿದ್ದರು. ಉತ್ತಮವಾಗಿ ಆಡಿ ಶತಕದತ್ತ ಸಾಗುತ್ತಿದ್ದ 17ರ ಹರೆಯ ಶಫಾಲಿ ನಾಲ್ಕು ರನ್ ನಿಂದ ಶತಕ ತಪ್ಪಿಸಿಕೊಂಡಿದ್ದರು.
ಎರಡನೇ ಇನ್ನಿಂಗ್ಸ್ ನಲ್ಲೂ ಉತ್ತಮವಾಗಿ ಬ್ಯಾಟ್ ಬೀಸಿದ ಲೇಡಿ ಸೆಹವಾಗ್ ಖ್ಯಾತಿಯ ಶಫಾಲಿ 63 ರನ್ ಗಳಿಸಿದ್ದಾರೆ. ಇದರೊಂದಿಗೆ ಮೊದಲ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿ ಅರ್ಧಶತಕ ಬಾರಿಸಿದ ಸಾಧನೆ ಮಾಡಿದ್ದಾರೆ.
ಒಟ್ಟಾರೆ ಎರಡೂ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಗಳಿಸಿದ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮೊದಲಿದ್ದಾರೆ. ತೆಂಡೂಲ್ಕರ್ 17 ವರ್ಷ 107 ದಿನದವರಿದ್ದಾಗ ಎರಡೂ ಇನ್ನಿಂಗ್ಸ್ ನಲ್ಲಿ 50 ರನ್ ಗಡಿ ದಾಟಿದ್ದರು. ಶಫಾಲಿ ವರ್ಮಾಗೆ ಈ ಸಾಧನೆ ಮಾಡುವಾಗ 17 ವರ್ಷ 139 ದಿನ ಪ್ರಾಯವಾಗಿದೆ. ವಿಶೇಷ ಏನೆಂದರೆ ಇಬ್ಬರೂ ಇಂಗ್ಲೆಂಡ್ ವಿರುದ್ಧ ಇಂಗ್ಲೆಂಡ್ ನಲ್ಲಿಯೇ ಈ ಸಾಧನೆ ಮಾಡಿದ್ದಾರೆ.
ಇದಲ್ಲದೆ ಒಂದು ಟೆಸ್ಟ್ ಪಂದ್ಯದಲ್ಲಿ ಮೂರು ಸಿಕ್ಸ್ ಬಾರಿಸಿದ ಏಕಮಾತ್ರ ವನಿತಾ ಆಟಗಾರ್ತಿ ಎಂಬ ಗರಿಮೆಗೆ ಶಫಾಲಿ ಪಾತ್ರರಾದರು.