ನವದೆಹಲಿ:ಬರೋಬ್ಬರಿ 21 ವರ್ಷಗಳ ಬಳಿಕ “ಮಿಸೆಸ್ ವರ್ಲ್ಡ್ ‘ ಕಿರೀಟವು ಭಾರತದ ಪಾಲಾಗಿದೆ. ಜಮ್ಮು ಮತ್ತು ಕಾಶ್ಮೀರ ಮೂಲದ ಮುಂಬೈನಲ್ಲಿ ನೆಲೆಸಿರುವ ಸರ್ಗಮ್ ಕೌಶಾಲ್ ಅವರು 2022ರ “ಮಿಸೆಸ್ ವರ್ಲ್ಡ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಶನಿವಾರ ರಾತ್ರಿ ವೆಸ್ಟ್‌ಗೇಟ್ ಲಾಸ್ ವೇಗಾಸ್ ರೆಸಾರ್ಟ್‌ನಲ್ಲಿ ನಡೆದ ಸಮಾರಂಭದಲ್ಲಿ ಕಳೆದ ವರ್ಷದ ಮಿಸೆಸ್ ವರ್ಲ್ಡ್ , ಅಮೆರಿಕದ ಶೈಲಿನ್ ಫೋರ್ಡ್ ಅವರು ಸರ್ಗಮ್ ಅವರಿಗೆ ಕಿರೀಟ ತೊಡಿಸಿದರು. ಪಾಲಿನೇಷ್ಯಾದ ಬೆಡಗಿ ಫಸ್ಟ್ ರನ್ನರ್ ಅಪ್ ಆದರೆ, ಮೂರನೇ ಸ್ಥಾನ ಕೆನಡಾದ ಸುಂದರಿಯ ಮುಡಿಗೇರಿದೆ.
“ದೀರ್ಘಕಾಲದ ಕಾಯುವಿಕೆಗೆ ತೆರೆಬಿದ್ದಿದೆ. 21 ವರ್ಷಗಳ ಬಳಿಕ ಮಿಸೆಸ್ ವರ್ಲ್ಡ್ ಕಿರೀಟ ನಮ್ಮದಾಗಿದೆ. ನಾನು ಎಷ್ಟು ಉತ್ಸುಕಳಾಗಿದ್ದೇನೆ ಎಂದು ಬಣ್ಣಿಸಲಾಗುತ್ತಿಲ್ಲ. ಲವ್ ಯೂ ಇಂಡಿಯಾ, ಲವ್ ಯೂ ವರ್ಲ್ಡ್ ‘ ಎಂದು ಸರ್ಗಮ್ ಕೌಶಾಲ್ ಹೇಳಿದ್ದಾರೆ.
ಈ ಹಿಂದೆ, 2001ರಲ್ಲಿ ಭಾರತಕ್ಕೆ ಈ ಕಿರೀಟ ಲಭಿಸಿತ್ತು. ಆಗ ನಟಿ, ಮಾಡೆಲ್ ಅದಿತಿ ಗೋವಿತ್ರಿಕರ್ ಅವರು ಮಿಸೆಸ್ ವರ್ಲ್ಡ್ ಆಗಿ ಮಿಂಚಿದ್ದರು. ನಂತರ ಭಾರತಕ್ಕೆ ಪ್ರಶಸ್ತಿ ಒಲಿದಿದ್ದು ಇದೇ ಮೊದಲು. 1984ರಿಂದ ವಿವಾಹಿತ ಮಹಿಳೆಯರಿಗೆಂದೇ ಜಾಗತಿಕ ಮಟ್ಟದ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ.