ಒಂದು ಸಿನಿಮಾವನ್ನು ನಿರ್ಮಾಣ ಮಾಡುವುದು ಅಷ್ಟು ಸುಲಭವಲ್ಲ. ಇಂದಿನ ಕಾಲದಲ್ಲಿ ಸಿನಿಮಾ ನಿರ್ಮಾಣಕ್ಕೆ ಕೋಟಿ ಕೋಟಿ ರೂ. ಸುರಿಯಬೇಕಾಗುತ್ತದೆ. ಒಟ್ಟಿ ಚಿತ್ರರಂಗದಲ್ಲಿ ನಿರ್ಮಾಪಕರು ಗಟ್ಟಿಯಾಗಿದ್ದರೆ ಸಿನಿಮಾ ಸಲೀಸಾಗಿ ಸೆಟ್ಟೇರುತ್ತದೆ ಎನ್ನುವ ಮಾತು ನೂರಕ್ಕೆ ನೂರರಷ್ಟು ಸತ್ಯವೆಂದರೆ ತಪ್ಪಾಗದು.
ಭಾರತೀಯ ಚಿತ್ರರಂಗದಲ್ಲಿ ಕರಣ್ ಜೋಹರ್ ಮತ್ತು ಆದಿತ್ಯ ಚೋಪ್ರಾದಂತಹ ಶ್ರೀಮಂತ ನಿರ್ಮಾಪಕರಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ಗಳಾದ ಶಾರುಖ್ ಖಾನ್ ಮತ್ತು ಅಮಿತಾಬ್ ಬಚ್ಚನ್ ಅವರನ್ನೇ ಮೀರಿಸಿರುವ ಅತ್ಯಂತ ಶ್ರೀಮಂತ ನಿರ್ಮಾಪಕರೊಬ್ಬರು ನಮ್ಮಲಿದ್ದಾರೆ.
ಕಲಾನಿಧಿ ಮಾರನ್. ಕಾಲಿವುಡ್ ಸಿನಿಮಾ ಇಂಡಸ್ಟ್ರಿ ಹಾಗೂ ತಮಿಳುನಾಡಿನ ಮನರಂಜನಾ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರನ್ನು ಹೊಂದಿರುವ ಕೋಟಿ ಕುಳ ಈ ಕಲಾನಿಧಿ ಮಾರನ್.
ಯಾರು ಈ ಕಲಾನಿಧಿ ಮಾರನ್..? ಪ್ರಭಾವಿ ರಾಜಕಾರಣಿ ಕುಟುಂಬದದಲ್ಲಿ ಹುಟ್ಟಿದ ಕಲಾನಿಧಿ, ಡಿಎಂಕೆ ಪಕ್ಷದಲ್ಲಿದ್ದ ಮುರಸೋಲಿ ಮಾರನ್ ಅವರ ಪುತ್ರ.
ಆರಂಭಿಕ ಜೀವನ: ಚೆನ್ನೈನಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಕಲಾನಿಧಿ ಯುಎಸ್‌ಎಯ ಪೆನ್ಸಿಲ್ವೇನಿಯಾದ ಸ್ಕ್ರ್ಯಾಂಟನ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿಯನ್ನು ಪಡೆದರು.
ಕಲಾನಿಧಿ ಆರಂಭದಲ್ಲಿ ಅಂದರೆ 1990 ರಲ್ಲಿ ʼಪೂಮಾಲೈʼ ಎಂಬ ತಮಿಳು ನಿಯತಕಾಲಿಕವನ್ನು ಪ್ರಾರಂಭಿಸಿದರು. ಇದಾದ ಬಳಿಕ 1993 ಅವರು ʼಸನ್ ಟಿವಿʼಯನ್ನು ಪ್ರಾರಂಭಿಸಿದರು. ಈ ಸನ್ ಗ್ರೂಪ್ ಇಂದು ದೊಡ್ಡ ಹೆಮ್ಮರವಾಗಿ ಬೆಳೆದಿದೆ.
ಸಿನಿಮಾ ನಿರ್ಮಾಣ, ಕ್ರಿಕೆಟ್ ಟೀಮ್, ಟವಿ ಚಾನೆಲ್… ಆಸ್ತಿ ಎಷ್ಟು?:
2024ರ ʼಹುರುನ್ ಇಂಡಿಯಾ ಶ್ರೀಮಂತರ ಪಟ್ಟಿʼ ಪ್ರಕಾರ ಕಲಾನಿಧಿ ಮಾರನ್ ಅವರ ನಿವ್ವಳ ಮೌಲ್ಯ 33,400 ಕೋಟಿ ರೂ. ಆಗಿದೆ. ಅವರು ಭಾರತದ 80ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಕಳೆದ ವರ್ಷದಿಂದ ಅವರ ಸಂಪತ್ತಿನಲ್ಲಿ 34% ಹೆಚ್ಚಳ ಕಂಡ ನಂತರವೂ ಅವರ ಶ್ರೇಯಾಂಕವು ಪಟ್ಟಿಯಲ್ಲಿ ಕುಸಿದಿದೆ. ಅವರು ಕಳೆದ ವರ್ಷ 75ನೇ ಶ್ರೀಮಂತ ಭಾರತೀಯರಾಗಿದ್ದರು.
ಮಾರನ್ ಕುಟುಂಬವು ಸನ್ ಟಿವಿಯಲ್ಲಿ 75% ಪಾಲನ್ನು ಹೊಂದಿದೆ. ಸನ್ ಪಿಕ್ಚರ್ಸ್ 6 ಭಾಷೆಗಳಲ್ಲಿ ಒಟ್ಟು 30 ಚಾನೆಲ್ ಗಳನ್ನು ಹೊಂದಿದೆ. ಇದರಲ್ಲಿ ಸನ್ NXT OTT, ಡಿಟಿಎಚ್ ಸೇವೆ ಸನ್ ಡೈರೆಕ್ಟ್, ಐಪಿಎಲ್ ತಂಡವಾದ ಸನ್‌ರೈಸರ್ಸ್ ಹೈದರಾಬಾದ್, ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡದ ಮಾಲೀಕರಾಗಿದ್ದಾರೆ.
ಸೂಪರ್ ಹಿಟ್ ಸಿನಿಮಾಗಳ ನಿರ್ಮಾಣ: 2010ರಿಂದ ಸನ್ ಪಿಕ್ಚರ್ಸ್ ಸಿನಿಮಾ ನಿರ್ಮಾಕ್ಕೆ ಕೈಹಾಕಿತ್ತು. ಇದರಲ್ಲಿ ರಜಿನಿಕಾಂತ್ ಅವರ ʼಎಂದಿರನ್ʼ, ʼಪೆಟ್ಟಾʼ , ʼಜೈಲರ್ʼ ಸೇರಿದಂತೆ ದಳಪತಿ ವಿಜಯ್ ಅವರ ʼಬೀಸ್ಟ್ʼ ʼಸರ್ಕಾರ್ʼ ಮತ್ತು ಧನುಷ್ ಅವರ ʼತಿರುಚಿತ್ರಂಬಲಂʼ ಮತ್ತು ʼರಾಯನ್ʼ ಚಿತ್ರಗಳು ಒಳಗೊಂಡಿದೆ.
ಶಾರುಖ್, ಅಮಿತಾಬ್ ರನ್ನೇ ಮೀರಿಸಿದ ಮಾರನ್..
2024ರ ಹುರನ್ ರಿಚ್ ಲಿಸ್ಟ್ ಪ್ರಕಾರ ಮಾರನ್ ಅವರ ನಿವ್ವಳ ಮೌಲ್ಯ ಶಾರುಖ್, ಅಮಿತಾಭ್, ಕರಣ್ ಜೋಹರ್ ಗಿಂತಲೂ ಹೆಚ್ಚಿದೆ. ಶಾರುಖ್ ಖಾನ್ ನಿವ್ವಳ ಮೌಲ್ಯ 7300 ಕೋಟಿ ರೂ. ಆಗಿದೆ. ಅಮಿತಾಬ್ ಬಚ್ಚನ್ ಮತ್ತು ಅವರ ಕುಟುಂಬ ಒಟ್ಟು 1600 ಕೋಟಿ ರೂ. ಅತ್ಯಂತ ಶ್ರೀಮಂತ ಬಾಲಿವುಡ್ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ ನಿವ್ವಳ ಮೌಲ್ಯ 1400 ರೂ. ಆಗಿದೆ. ಮಾರನ್ ಅವರ ನಿವ್ವಳ ಮೌಲ್ಯ 33,400 ಕೋಟಿ ರೂ. ಆಗಿದೆ.