ಹೊಸದಿಲ್ಲಿ : ಭಾರತದ ಆರ್ಥಿಕತೆ ಬಲಿಷ್ಠವಾಗುತ್ತಿರುವುದಕ್ಕೆ ಹಲವಾರು ಧನಾತ್ಮಕ ಮತ್ತು ನೇತ್ಯಾತ್ಮಕ ಉದಾಹರಣೆಗಳು ಈಗ ಪ್ರಾಪ್ತವಾಗುತ್ತಿವೆ. ಅಂತಾರಾಷ್ಟ್ರೀಯ ಮಾನವ ಹಕ್ಕು ಸಮೂಹ ‘ಓಕ್ಸ್‌ಫಾಮ್’ ನಡೆಸಿರುವ ಅಧ್ಯಯನದ ಪ್ರಕಾರ ಕಳೆದ ವರ್ಷ ಭಾರತೀಯ ಬಿಲಿಯಾಧಿಪತಿಗಳ ಸಂಪತ್ತು ದಿನವಹಿ 2,200 ಕೋಟಿ ರೂ. ಹಿಗ್ಗಿದೆ.
ದೇಶದಲ್ಲಿರುವ ಶೇ.1 ಅತೀ ಸಿರಿವಂತರ ಸಂಪತ್ತು ಕಳೆದ ವರ್ಷ ಶೇ.39ರಷ್ಟು ವೃದ್ಧಿಸಿದೆ; ಆದರೆ ದೇಶದ ಕೆಳಗಿನ ಶೇ.50 ಜನಸಂಖ್ಯೆಯ ಸಂಪತ್ತು ಕೇವಲ ಶೇ.3ರಷ್ಟು ಹಿಗ್ಗಿರುವುದು ಕಂಡು ಬಂದಿದೆ. ಓಕ್ಸ್‌ಫಾಮ್ ಅಧ್ಯಯನ ವರದಿ ಇಂದು ಸೋಮವಾರ ಬಹಿರಂಗವಾಗಿದೆ.
ಜಾಗತಿಕ ಮಟ್ಟದಲ್ಲಿ ಹೇಳುವುದಾದರೆ ವಿಶ್ವ ಬಿಲಿಯಾಧಿಪತಿಗಳ ಸಂಪತ್ತು ಕಳೆದ ವರ್ಷ ಶೇ.12ರಷ್ಟು ಹೆಚ್ಚಿದೆ. ಎಂದರೆ ಇವರ ಸಂಪತ್ತು ದಿನವಹಿ 2.5 ಶತಕೋಟಿ ಡಾಲರ್ ಪ್ರಮಾಣದಲ್ಲಿ ಹಿಗ್ಗಿದೆ.
ಇದೇ ವೇಳೆ ವಿಶ್ವ ಜನಸಂಖ್ಯೆಯ ಅರ್ಧಾಂಶದಷ್ಟು ಇರುವ ಬಡವರ ಸಂಪತ್ತು ಶೇ.11ರಷ್ಟು ಕುಗ್ಗಿದೆ.
ಸ್ವಿಟ್ಸರ್ಲಂಡ್ ನ ಸ್ಕೀ ರಿಸಾರ್ಟ್ ಪಟ್ಟಣದಲ್ಲಿ ಐದು ದಿನಗಳ ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್) ಇದರ ವಾರ್ಷಿಕ ಸಭೆ ಆರಂಭವಾಗುವುದಕ್ಕೆ ಮುನ್ನ ಬಿಡುಗಡೆ ಮಾಡಿರುವ ಅಂತಾರಾಷ್ಟ್ರೀಯ ಮಾನವ ಹಕ್ಕು ಸಮೂಹವಾಗಿರುವ ಓಕ್ಸ್ ಫಾಮ್ ವರದಿಯಲ್ಲಿ ವಿಶ್ವದ ಶ್ರೀಮಂತರು ಮತ್ತು ಬಡವರ ನಡುವಿನ ಆರ್ಥಿಕ ಅಂತರ ಕಳವಳಕಾರಿಯಾಗಿ ಹೆಚ್ಚುತ್ತಿರುವುದರತ್ತ ಬೆಟ್ಟು ಮಾಡಿದೆ.
ಭಾರತದ ಒಟ್ಟು ಜನಸಂಖ್ಯೆಯ ಶೇ. 10ರಷ್ಟಿರುವ 13.6 ಕೋಟಿ ಕಡು ಬಡ ಭಾರತೀಯರು 2004ರಿಂದಲೂ ಸಾಲದ ಶೂಲಕ್ಕೆ ಬಿದ್ದಿರುವುದಾಗಿ ಎಚ್ಚರಿಸಿದೆ.