ಹೊಸದಿಲ್ಲಿ : ಸೆಪ್ಟಂಬರ್‌ಗೆ ಅಂತ್ಯಗೊಂಡ ಎರಡನೇ ತ್ತೈಮಾಸಿಕದಲ್ಲಿ ಭಾರತದ ಆರ್ಥಿಕ ಪ್ರಗತಿ ದರ ಶೇ. 6.3ರ ಜಿಗಿತವನ್ನು ಸಾಧಿಸಿದೆ. ಮಾತ್ರವಲ್ಲ ಇದು ಕಳೆದ ಐದು ತ್ತೈಮಾಸಿಕಗಳ ನಿರಂತರ ಕುಸಿತವನ್ನು ಯಶಸ್ವಿಯಾಗಿ ತಡೆದಿದೆ.
ಔದ್ಯಮಿಕ ಸಂಸ್ಥೆಗಳು ಜಿಎಸ್‌ಟಿ ಯ ಆರಂಭಿಕ ತೊಂದರೆ, ಗೊಂದಲ, ಸಂಕಷ್ಟಗಳನ್ನು ನಿಭಾಯಿಸಿ ಮುನ್ನಡೆ ಸಾಧಿಸಿರುವುದೇ ಆರ್ಥಿಕ ಪ್ರಗತಿಯ (GDP) ಜಿಗಿತಕ್ಕೆ ಕಾರಣವೆಂದು ವಿಶ್ಲೇಷಕರು ಹೇಳಿದ್ದಾರೆ.
ಜುಲೈ – ಸೆಪ್ಟಂಬರ್‌ನಲ್ಲಿ ಸಾಧಿಸಲಾಗಿರುವ ಶೇ.6.3 ಜಿಡಿಪಿ ಯು ಕಳೆದ ಮೂರು ತ್ತೈಮಾಸಿಕಗಳಲ್ಲೇ ದಾಖಲಾದ ಅತ್ಯಂತ ವೇಗದ ಆರ್ಥಿಕ ಪ್ರಗತಿಯಾಗಿದೆ.
ನೋಟ್ ಬ್ಯಾನ್ ಮತ್ತು ಜಿಎಸ್‌ಟಿ ಅನುಷ್ಠಾನದಲ್ಲಿನ ಆರಂಭಿಕ ತೊಡಕುಗಳ ಪರಿಣಾಮವಾಗಿ ಜೂನ್ ವರೆಗಿನ ಮೂರು ತಿಂಗಳಲ್ಲಿ ದೇಶದ ಜಿಡಿಪಿಯು ಶೇ.5.7ಕ್ಕೆ ಕುಸಿದಿತ್ತು ಮತ್ತು ಇದು ಕಳೆದ ಮೂರು ವರ್ಷಗಳಲ್ಲೇ ಕನಿಷ್ಠವಾಗಿತ್ತು.
ಶೇ.6.3ರ ಜಿಡಿಪಿ ಜಿಗಿತಕ್ಕೆ ವಿಶೇಷವಾದ ಕೊಡುಗೆ ನೀಡಿದ ರಂಗಗಳೆಂದರೆ ಕೈಗಾರಿಕಾ ಉತ್ಪಾದನೆ, ವಿದ್ಯುದುತ್ಪಾದನೆ, ಅನಿಲ, ನೀರು ಪೂರೈಕೆ ಮತ್ತು ಇತರ ಮೂಲ ಸೌಕರ್ಯ ಸೇವೆಗಳು, ವಾಣಿಜ್ಯ, ಹೊಟೇಲ್‌ಗಳು, ಸಾರಿಗೆ ಮತ್ತು ಸಂಪರ್ಕ ಹಾಗೂ ಬ್ರಾಡ್ ಕಾಸ್ಟಿಂಗ್ ಸೇವೆಗಳ ಕ್ಷೇತ್ರ.
ಜುಲೈ – ಸೆಪ್ಟಂಬರ್ ತ್ತೈಮಾಸಿಕದಲ್ಲಿ ಮೋಟಾರು ವಾಹನ ಮಾರಾಟ, ಕೈಗಾರಿಕಾ ಉತ್ಪಾದನೆ, ವಿದ್ಯುದುತ್ಪಾದನಾ ಕ್ಷೇತ್ರಗಳು ಹಿಂದಿನ ತ್ತೈಮಾಸಿಕಗಳಿಗಿಂದ ಅತ್ಯಂತ ಕ್ಷಿಪ್ರ ಗತಿಯ ಬೆಳವಣಿಗೆಯನ್ನು ದಾಖಲಿಸಿದವು.