ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಂತೂ ಬೆಚ್ಚಿಬೀಳಿಸುವ ಪ್ರಮಾಣದಲ್ಲಿ ಏರುತ್ತಿದೆ. ಆರೋಗ್ಯ ಕಾರ್ಯಕರ್ತರು, ಆರೋಗ್ಯ ಇಲಾಖೆಗಳು ಕೋವಿಡ್ ವಿರುದ್ಧದ ಹೋರಾಟದಲ್ಲಿ ನಿರತವಾಗಿವೆ. ಇದೇ ವೇಳೆಯಲ್ಲಿ ದೇಶದ ವೈಜ್ಞಾನಿಕ ವಲಯ ಕೋವಿಡ್ ವಿರುದ್ಧ ಲಸಿಕೆ ಕಂಡುಹಿಡಿಯುವಲ್ಲೂ ಶ್ರಮವಹಿಸುತ್ತಿದೆ. ಭಾರತದ ಮೂರು ಲಸಿಕೆಗಳು ಕ್ಲಿನಿಕಲ್ ಟ್ರಯಲ್‌ನ ವಿವಿಧ ಹಂತದಲ್ಲಿದ್ದು, ಅದರಲ್ಲಿ ಎರಡು ಲಸಿಕೆಗಳು ಆರಂಭಿಕ ಭರವಸೆಯನ್ನಂತೂ ಮೂಡಿಸಿವೆ, ಆದರೆ ಅವಿನ್ನೂ ಪ್ರಮುಖ ಟ್ರಯಲ್ ಹಂತಗಳನ್ನು ದಾಟುವ ಅಗತ್ಯವಿದೆ. ಅದಕ್ಕೆ ಸಮಯವಾಗಬಹುದು.
ಇವೆಲ್ಲದರ ನಡುವೆಯೇ ರಷ್ಯಾದಿಂದ ಭರವಸೆಯ ಸುದ್ದಿಯೊಂದು ಹೊರಬಿದ್ದಿದ್ದು, ಕೋವಿಡ್ ವಿರುದ್ಧ ಮೊದಲ ಲಸಿಕೆ ಸಿದ್ಧವಾಗಿರುವುದಾಗಿ ಅದು ಹೇಳುತ್ತಿದೆ. ಭಾರತವು ಈಗ ಲಸಿಕೆ ಸಂಶೋಧನೆಯಲ್ಲಿ ತೊಡಗಿರುವುದಷ್ಟೇ ಅಲ್ಲದೇ, ಈ ನಿಟ್ಟಿನಲ್ಲಿ ವಿಶ್ವಾದ್ಯಂತದ ವಿದ್ಯಮಾನಗಳ ಮೇಲೂ ಗಮನವಿಟ್ಟಿರುವುದರಿಂದಾಗಿ, ರಷ್ಯಾದಿಂದ ಬಂದಿರುವ ಈ ಸುದ್ದಿ ಮಹತ್ವ ಪಡೆದಿದೆ.
ಕೇಂದ್ರ ಸರ್ಕಾರವು ವಿಶೇಷ ತಜ್ಞರ ಒಂದು ಸಮಿತಿಯನ್ನು ನೇಮಕ ಮಾಡಿದ್ದು, ಇದರ ನೇತೃತ್ವವನ್ನು ನೀತಿ ಆಯೋಗದ ಡಾ. ವಿ.ಕೆ. ಪೌಲ್ ಅವರು ವಹಿಸಿಕೊಂಡಿದ್ದಾರೆ. ಈ ಸಮಿತಿಯು ಒಂದು ವೇಳೆ ವ್ಯಾಕ್ಸಿನ್ ಲಭ್ಯವಾದರೆ ಅದನ್ನು ಗುರುತಿಸುವಿಕೆ, ಖರೀದಿ, ಫೈನಾನ್ಸ್ ಇತ್ಯಾದಿ ಅಂಶಗಳನ್ನು ನಿಭಾ ಯಿಸಿ, ವೇಗವಾಗಿ ಭಾರತದ ಬೃಹತ್ ಜನಸಂಖ್ಯೆಗೆ ತಲುಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಿದೆ. ಈ ನಡುವೆಯೇ ಸೀರಂ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ (ಎಸ್ ಐಐ) ಗಾವಿ ದ ವ್ಯಾಕ್ಸಿನ್ ಅಲಯನ್ಸ್ ಮತ್ತು ಬಿಲ್-ಮೆಲಿಂದಾ ಗೇಟ್ಸ್ ಫೌಂಡೇಷನ್‌ನ ಸಹಭಾಗಿತ್ವದಲ್ಲಿ 10 ಕೋಟಿ ವ್ಯಾಕ್ಸಿನ್ ಡೋಸ್‌ಗಳನ್ನು ಉತ್ಪಾದಿಸುವ ಒಪ್ಪಂದ ಮಾಡಿಕೊಂಡಿದೆ.
ನೆನಪಿರಲಿ, ಲಸಿಕೆ ಅಭಿವೃದ್ಧಿ ಎಷ್ಟು ಮುಖ್ಯವೋ, ಅದರ ಡೋಸ್‌ಗಳ ವ್ಯಾಪಕ ಉತ್ಪಾದನೆಯೂ ಅಷ್ಟೇ ಮುಖ್ಯ. ಈ ಹಿನ್ನೆಲೆಯಲ್ಲಿಯೇ, ಪ್ರಪಂಚದಲ್ಲೇ ಅತಿಹೆಚ್ಚು ವಿವಿಧ ವ್ಯಾಕ್ಸಿನ್ ಡೋಸ್‌ಗಳ ಉತ್ಪಾದನಾ ಕಂಪೆನಿಯಲ್ಲಿ ಒಂದಾಗಿರುವ ಎಸ್‌ಐಐ ಮುಂದಿನ ದಿನಗಳಲ್ಲಿ ದೊಡ್ಡ ಪಾತ್ರ ನಿರ್ವಹಿಸಲಿದೆ. ಗಮನಾರ್ಹ ಸಂಗತಿಯೆಂದರೆ, ಆಕ್ಸ್‌ಫರ್ಡ್ ವಿವಿ ಅಭಿವೃದ್ಧಿಪಡಿಸುತ್ತಿರುವ ಲಸಿಕೆಯು ಯಶಸ್ವಿಯಾದರೆ, ಅದನ್ನೂ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸುವ ಒಪ್ಪಂದ ಮಾಡಿಕೊಂಡಿದೆ ಈ ಸಂಸ್ಥೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಸಂಸ್ಥೆಯು ಬಿಲ್‌ಗೇಟ್ಸ್ ಫೌಂಡೇಷನ್‌ನೊಂದಿಗೆ ಮಾಡಿಕೊಂಡಿರುವ ಒಪ್ಪಂದ ಶ್ಲಾಘನೀಯವಾಗಿದೆ. ಅತ್ಯಂತ ಅಗ್ಗದ ದರದಲ್ಲಿ ವ್ಯಾಕ್ಸಿನ್‌ಗಳನ್ನು ಜನರಿಗೆ ತಲುಪಿಸುವುದು ಈ ಒಪ್ಪಂದದ ಉದ್ದೇಶ.
ಇದೇನೇ ಇದ್ದರೂ ಒಂದು ವಿಷಯವನ್ನಂತೂ ನಾವು ಕಡೆಗಣಿಸಲೇಬಾರದು. ಲಸಿಕೆಯ ಭರವಸೆಯಲ್ಲಿ ಬದುಕು ದೂಡುವುದು ತಪ್ಪಾಗುತ್ತದೆ. ಕೋವಿಡ್ ವಿರುದ್ಧ ಪರಿಣಾಮಕಾರಿ ಲಸಿಕೆ ಲಭ್ಯವಾಗುತ್ತದೋ ಇಲ್ಲವೋ ಎನ್ನುವುದರ ಬಗ್ಗೆ ಸಾರ್ವಜನಿಕರು ತಲೆಕೆಡಿಸಿಕೊಳ್ಳುವುದನ್ನು ಬಿಟ್ಟು, ತಮ್ಮ ಸುರಕ್ಷತೆಯಲ್ಲಿ ತಾವಿರುವುದಕ್ಕೆ ಆದ್ಯತೆ ಕೊಡುವುದು ಬಹಳ ಮುಖ್ಯ.