Advertisement

ಟೀಂ ಇಂಡಿಯಾಗೆ ಕಾಡುತ್ತಿದೆ ಮೂರನೇ ವೇಗದ ಬೌಲರ್ ಚಿಂತೆ!

04:44 PM Oct 26, 2018 | Team Udayavani |

ಪ್ರಸ್ತುತ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾದ ವೇಗದ ಬೌಲಿಂಗ್ ನ ವಿಫಲತೆ ಬಟಾ ಬಯಲಾಗಿದೆ. ಮೊದಲೆರಡು ಪಂದ್ಯಗಳಿಗೆ ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾಹ್ ಗೆ ವಿಶ್ರಾಂತಿ ನೀಡಿದ್ದ ಆಯ್ಕೆ ಮಂಡಳಿ ಕೊನೆಗೂ ಉಳಿದ ಪಂದ್ಯಗಳಿಗೆ ಅವರಿಬ್ಬರನ್ನೇ ಕರೆಸಿಕೊಳ್ಳಬೇಕಾಯಿತು. 

Advertisement

ಮೊದಲೆರಡು ಪಂದ್ಯಗಳಲ್ಲಿ ಆಡಿದ್ದ ಟೆಸ್ಟ್ ಸ್ಪೆಶಲಿಸ್ಟ್ ಗಳಾದ ಮೊಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ ಮತ್ತು ಮೊದಲ ಪಂದ್ಯ ಆಡಿದ್ದ ಖಲೀಲ್ ಅಹಮದ್ ಸಿಕ್ಕಾಪಟ್ಟೆ ದುಬಾರಿಯಾದರು. ಈ ಮೂವರು ಎರಡು ಪಂದ್ಯಗಳಲ್ಲಿ ಒಟ್ಟು 50 ಓವರ್ ಎಸೆದಿದ್ದು, ಬಿಟ್ಟುಕೊಟ್ಟ ರನ್ ಬರೋಬ್ಬರಿ 346. ಆದರೆ ಕಬಳಿಸಿದ್ದು ಕೇವಲ 5 ವಿಕೆಟ್. 

ಈ ಅಂಕಿ ಅಂಶಗಳು ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿ ಶಾಸ್ತ್ರೀಗೆ  ತಲೆ ನೋವಾಗಿರುವುದು ಮಾತ್ರ ಸತ್ಯ. ಭುವಿ, ಬುಮ್ರಾಹ್ ಜೊತೆಗೆ ಇನ್ಯಾವ ಬೌಲರ್ ನನ್ನು ಆಡಿಸುವುದು ಎಂಬ ಚಿಂತೆ ಕಾಡಿದೆ. ಮುಂದಿನ ವರ್ಷ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ವರೆಗೆ ಭಾರತ 16  ಏಕದಿನ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ಅದರ ಒಳಗಾಗಿ ಭಾರತಕ್ಕೆ ಇನ್ನೋರ್ವ  ಸ್ಥಿರ ಪ್ರದರ್ಶನ ನೀಡುವ ವೇಗದ ಬೌಲರ್ ನನ್ನು ಸಿದ್ದ ಪಡಿಸಬೇಕಾದ ಅನಿವಾರ್ಯತೆ ಇದೆ. 

ಮುಂದಿನ ವಿಶ್ವಕಪ್ ಇಂಗ್ಲೆಂಡ್ ನಲ್ಲಿ ನಡೆಯುದರಿಂದ ಅಲ್ಲಿನ ಬೌನ್ಸಿ ಪಿಚ್ ಗಳಲ್ಲಿ ಕೇವಲ ಇಬ್ಬರು ಸ್ಪೀಡ್ ಬೌಲರ್ಸ್ ಮತ್ತು ಮೂವರು ಸ್ಪಿನ್ನರ್ ಗಳನ್ನು ಆಡಿಸುವ ತಂತ್ರಗಾರಿಕೆ ಯಶಸ್ವಿಯಾಗುವುದು ಕಷ್ಟ. ಆದುದರಿಂದ ಇನ್ನೊರ್ವ ವೇಗದ ಬೌಲರ್ ತಂಡಕ್ಕೆ ಅಗತ್ಯವಾಗಿದೆ. 

ಭುವಿ ಮತ್ತು ಬುಮ್ರಾಹ್ ಜೊತೆ ಸದ್ಯ ಗಾಯಾಳಾಗಿರುವ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯರನ್ನು ವಿಶ್ವಕಪ್ ಆಡಿಸುವ ಆಲೋಚನೆಯಲ್ಲಿ ಆಯ್ಕೆ ಮಂಡಳಿ ಇದೆ. ಆದರೆ ಹಾರ್ದಿಕ್ ಸಂಪೂರ್ಣ 10 ಓವರ್ ಎಸೆಯುವ ಸಾಮರ್ಥ್ಯ ಹೊಂದಿದ್ದಾರೆಯೇ ಎಂಬುದು ಇಲ್ಲಿ ಕಾಡುವ ಪ್ರಶ್ನೆ. ಈ ಹಿಂದೆ ಹಾರ್ದಿಕ್ ಮೊದಲ ಕೆಲವು ಓವರ್ ಗಳಲ್ಲಿ ದುಬಾರಿಯಾದಾಗ ಅವರ ಓವರ್ ಗಳನ್ನು ಕೇದಾರ್ ಜಾದವ್ ಪೂರ್ಣ ಗೊಳಿಸಿದ್ದನ್ನು ನಾವು ಕೆಲವು ಪಂದ್ಯಗಳಲ್ಲಿ ನೋಡಿದ್ದೇವೆ. ಹಾಗಾಗಿ ಪಾಂಡ್ಯರನ್ನು ಇನ್ನೂ ಕೂಡಾ ಪೂರ್ಣ ಪ್ರಮಾಣದ ಬೌಲರ್ ಎಂದು ಒಪ್ಪಿಕೊಳ್ಳುವುದು ಕಷ್ಟ. 

Advertisement

ಈ ಮೂವರನ್ನು ಹೊರತು ಪಡಿಸಿ 2017ರ ಜನವರಿಯಿಂದ ಟೀಂ ಇಂಡಿಯಾ ಪರವಾಗಿ ಉಮೇಶ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಖಲೀಲ್ ಅಹಮದ್, ದೀಪಕ್ ಚಾಹರ್ ಮತ್ತು ಸಿದ್ದಾರ್ಥ ಕೌಲ್ ಏಕದಿನ ಪಂದ್ಯಗಳಲ್ಲಿ ವೇಗದ ಬೌಲಿಂಗ್ ನಡೆಸಿದ್ದಾರೆ. ಆದರೆ ಇವರ‍್ಯಾರು ತಮ್ಮ ಆಯ್ಕೆಯನ್ನು ಸಮರ್ಥಿಸಿ ಕೊಳ್ಳುವಲ್ಲಿ ಸಫಲರಾಗಿಲ್ಲ. ಶಮಿ ಮತ್ತು ಖಲೀಲ್ ಅಹಮದ್ ಎಕಾನಮಿ ರೇಟ್ ಮಾತ್ರ ಆರಕ್ಕಿಂತ ಕಡಿಮೆಯಿದೆ.  ಉಳಿದವರ‍್ಯಾರಿಗೂ ತಮ್ಮ ಬೌಲಿಂಗ್ ನಲ್ಲಿ ನಿಯಂತ್ರಣ ಸಾಧಿಸಲು ಸಾಧ್ಯವಾಗಿಲ್ಲ.  

ಇದುವರೆಗೆ ಕೇವಲ ಮೂರು ಅಂತರಾಷ್ಟ್ರೀಯ  ಪಂದ್ಯಗಳ ಅನುಭವವಿರುವ ಖಲೀಲ್ ಅಹಮದ್ ವಿಶ್ವಕಪ್ ಟಿಕೆಟ್ ಪಡೆಯುವ ವಿಶ್ವಾಸದಲ್ಲಿದ್ದಾರೆ. ಇದಕ್ಕೆ ಮುಖ್ಯ ಕಾರಣ ಖಲೀಲ್ ಓರ್ವ ಎಡಗೈ ವೇಗಿ. ಮೂರು ಪಂದ್ಯಗಳಲ್ಲಿ 5.23 ರ ಸರಾಸರಿಯಲ್ಲಿ 5 ವಿಕೆಟ್ ಪಡೆದಿದ್ದಾರೆ. ಇಂಗ್ಲೆಂಡ್ ಪಿಚ್ ಎಡಗೈ ವೇಗಿಗಳಿಗೆ ಹೆಚ್ಚು ನೆರವು ನೀಡುವುದರ ಜೊತೆಗೆ ಭಾರತದಲ್ಲಿ ಮತ್ತೊರ್ವ ಗಮನಾರ್ಹ ಎಡಗೈ ವೇಗಿ ಇಲ್ಲ ಎನ್ನುವುದು ಖಲೀಲ್ ಪಾಲಿಗೆ ವರವಾಗಬಹುದು.  

ಭುವನೇಶ್ವರ್ ಕುಮಾರ್ ಅಥವಾ ಬುಮ್ರಾಹ್ ರಲ್ಲಿ ಯಾರಾದರೊಬ್ಬರು ವಿಶ್ವಕಪ್ ವೇಳೆಗೆ ಗಾಯಗೊಂಡರೆ ಭಾರತದ ವೇಗದ ಬೌಲಿಂಗ್ ಗೆ ಮತ್ತಷ್ಟು ಸಂಕಷ್ಟ ತಪ್ಪಿದ್ದಲ್ಲ. ಯಾಕೆಂದರೆ ವಿಶ್ವಕಪ್ ಗಿಂತ ಮೊದಲು ಸುದೀರ್ಘ ಎರಡು ತಿಂಗಳು ಐಪಿಎಲ್ ಟೂರ್ನಿ ನಡೆಯಲಿದೆ. ಈ ವೇಳೆಗೆ ಫಿಟ್ನೆಸ್ ಕಾಯ್ದುಕೊಳ್ಳುವುದು ಅಷ್ಟೇ ಮುಖ್ಯವಾಗುತ್ತದೆ.

ಒಟ್ಟಾರೆ ವಿಶ್ವಕಪ್ ಗೆ ಈಗಾಗಲೇ ತಯಾರಿ ಆರಂಭವಾಗಿರುವುದರಿಂದ ಟೀಂ ಇಂಡಿಯಾ ತನ್ನ ಮೂರನೇ ವೇಗಿಯನ್ನು ಆದಷ್ಟು ಬೇಗ ತಯಾರು ಮಾಡಬೇಕಾದ ಅನಿವಾರ್ಯತೆ ಇದೆ. ವಿಶ್ವಕಪ್ ಕಿರೀಟದ ಮೇಲೆ ಕಣ್ಣಿಟ್ಟಿರುವ ನಾಯಕ ಕೊಹ್ಲಿಗೆ ಇದು ನಿಜಕ್ಕೂ ಒಂದು ಸವಾಲು. ಇಲ್ಲದೇ ಇದ್ದರೆ 300 ರನ್ ಹೊಡೆದರೂ ಪಂದ್ಯ ಉಳಿಸಿಕೊಳ್ಳುವುದು ಕಷ್ಟ.  

ಕೀರ್ತನ್ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next