ಯಾದಗಿರಿ: ಮಾರಕ ಕೊರೊನಾ ನಿರ್ಮೂಲನೆಗೆ ಟೊಂಕಕಟ್ಟಿ ನಿಂತಿರುವ ಭಾರತವು ಲಸಿಕಾ ಅಭಿಯಾನದಲ್ಲಿ 100 ಕೋಟಿ ಡೋಸ್ ಲಸಿಕಾಕರಣ ತಲುಪುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ. ಈ ಸಾಧನೆಯಿಂದ ಲಸಿಕಾಕರಣ ನೀಡಿದ ವಿಶ್ವದ ಎರಡನೇ ರಾಷ್ಟ್ರವಾಗಿ ಭಾರತ ದೇಶ ಹೊರಹೊಮ್ಮಿದೆ ಎಂದು ಜಿಲ್ಲಾ ಧಿಕಾರಿ ಡಾ| ರಾಗಪ್ರಿಯಾ ಆರ್. ಹೇಳಿದರು.
ಜಿಲ್ಲಾಡಳಿತ, ಜಿಪಂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಜಿಲ್ಲಾಡಳಿತ ಸಭಾಂಗಣದಲ್ಲಿ ಭಾರತ 100 ಕೋಟಿ ಲಸಿಕಾಕರಣದ ಸಾಧನೆ ತೋರಿದ ನಿಮಿತ್ತ ಹಮ್ಮಿಕೊಂಡಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಬಲೂನ್ ಹಾರಿಸಿ, ಅವರು ಮಾತನಾಡಿದರು.
ಈ ಸಂಭ್ರಮಕ್ಕೆ ಸಾಕಷ್ಟು ಅಧಿಕಾರಿಗಳು ಶ್ರಮವಹಿಸಿದ್ದಾರೆ. ಜಿಲ್ಲೆಯಲ್ಲಿಯೂ ಶೇ.75 ಲಸಿಕಾಕರಣ ಪೂರೈಸಿದೆ. ಇನ್ನೂ ಬಾಕಿ ಇರುವ ಶೇ.25 ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಜನರು ಲಸಿಕಾಕರಣಕ್ಕೆ ಹಿಂಜರಿದಾಗ ಅವರಿಗೆ ಅರಿವು ಮೂಡಿಸಿ, ಮನವೊಲಿಸುವ ಮೂಲಕ ಜಿಲ್ಲಾಮಟ್ಟದ ಅಧಿಕಾರಿಗಳು ಲಸಿಕಾ ಮೇಳ ಯಶ್ವಸಿಗೊಳಿಸಿದ್ದಾರೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು, ಪಿಡಿಒಗಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಇನ್ನಿತರ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಮನೆ-ಮನೆಗೆ ತೆರಳಿ ಲಸಿಕಾಕರಣಕ್ಕೆ ಜನರ ಮನವೊಲಿಸಿದ್ದಾರೆ ಎಂದು ಶ್ಲಾಘಿಸಿದರು.
ಶೇ.100 ಲಸಿಕಾಕರಣ ಪೂರೈಸುವುದರ ಮೂಲಕ 3ನೇ ಅಲೆಯನ್ನು ಜಿಲ್ಲಾಡಳಿತದಿಂದ ಎದುರಿಸಲು ಸಮರ್ಥರಾಗಿದ್ದೇವೆ. ಜಿಲ್ಲೆಯಲ್ಲಿ 8.38 ಲಕ್ಷ ಜನರಿಗೆ ಲಸಿಕಾಕರಣ ಗುರಿಯಿದ್ದು, ಈಗಾಗಲೇ 6 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಇನ್ನುಳಿದ ಜನರ ಮನವೊಲಿಸಿ, ಲಸಿಕೆ ನೀಡಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಇಂದುಮತಿ ಕಾಮಶೆಟ್ಟಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಸಂಜೀವಕುಮಾರ ರಾಯಚೂರಕರ್, ಕಾರ್ಯಕ್ರಮ ಅಧಿಕಾರಿ ಡಾ| ಸಾಕ್ ಹಾಗೂ ಆರೋಗ್ಯ ಇಲಾಖಾಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.