ನವದೆಹಲಿ: ಕೋವಿಡ್-19 ಬಿಕ್ಕಟ್ಟು ಪ್ರಾರಂಭವಾದಗಿನಿಂದ ದೇಶ ಸೇರಿದಂತೆ ವಿದೇಶಗಳಲ್ಲಿ ಆರ್ಥಿಕ ಹಿಂಜರಿತದ ಬಿಸಿ ತಟ್ಟಿದೆ.
ಈ ಹೊಡೆತದಿಂದ ಚೇತರಿಸಿಕೊಳ್ಳಲು ನಮಗೆ ಇನ್ನೂ ಕೆಲವು ವರ್ಷಗಳೇ ಬೇಕಾಗಬಹುದು ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.
ಈ ಹೇಳಿಕೆಗಳಿಗೆ ಪುಷ್ಟಿ ನೀಡವಂತಹ ಅಧ್ಯಯನ ವರದಿಗಳು ಪ್ರಕಟವಾಗುತ್ತಿದ್ದು, ಇದೀಗ 2020 ನೇ ಸಾಲಿನಲ್ಲಿ ಏಷ್ಯಾದ ಅಭಿವೃದ್ಧಿಶೀಲ ರಾಷ್ಟ್ರಗಳ ಅಭಿವೃದ್ಧಿ ದರ ತೀರಾ ಕ್ಷೀಣವಾಗಿರಲಿದ್ದು, ಭಾರತದ ಆರ್ಥಿಕತೆ ಶೇ 4 ರಷ್ಟು ಕುಸಿಯಲಿದೆ ಎಂದು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ಎಡಿಬಿ) ಅಂದಾಜು ಮಾಡಿದೆ. ಈ ಮೂಲಕ ಏಷ್ಯಾ ರಾಷ್ಟ್ರಗಳ ಅಭಿವೃದ್ಧಿ ದರ ಕುಸಿತಕ್ಕೆ ಕೋವಿಡ್-19 ಸೃಷ್ಟಿಸಿರುವ ಸಮಸ್ಯೆಗಳ ಕಂದಕವೇ ಕಾರಣ ಎಂದು ಅದು ಹೇಳಿದೆ.
ಕೋವಿಡ್ 19 ಸೋಂಕು ಹರಡುವಿಕೆ ತಡೆಗಟ್ಟಲು ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಮೊರೆ ಹೋಗಿದ್ದು, ಸುಮಾರು 40 ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವಿಧಿಸಲಾಗಿರುವ ಲಾಕ್‌ಡೌನ್ ಕ್ರಮಗಳಿಂದಾಗಿ ಆರ್ಥಿಕ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇದರೊಂದಿಗೆ ಬಾಹ್ಯ ಬೇಡಿಕೆಗಳು ಗಣನೀಯವಾಗಿ ಕುಸಿತ ಕಂಡಿದ್ದು, ಸರಕು ಸಾಗಾಣಿಕೆ, ಖರೀದಿ ಪ್ರಮಾಣವು ಕಡಿತವಾಗಿದೆ ಎಂದು ಎಡಿಬಿ ತಿಳಿಸಿದೆ.
ಜತೆಗೆ ಕೈಗಾರಿಕಾ ಕ್ರಾಂತಿಯ ದೇಶಗಳಾದ ಹಾಂಕಾಂಗ್ ಹಾಗೂ ಚೀನ, ರಿಪಬ್ಲಿಕ್ ಆಫ್ ಕೊರಿಯಾ, ಸಿಂಗಾಪುರ, ತೈಪೆ ದೇಶಗಳನ್ನು ಹೊರತುಪಡಿಸಿದರೆ ಏಷ್ಯಾದ ಅಭಿವೃದ್ಧಿಶೀಲ ರಾಷ್ಟ್ರಗಳ ಬೆಳವಣಿಗೆ ಪ್ರಸಕ್ತ ಸಾಲಿನಲ್ಲಿ ಶೇ 0.4 ರಷ್ಟು ಹಾಗೂ 2021 ರಲ್ಲಿ ಶೇ 6.6 ರಷ್ಟಕ್ಕೆ ತಲುಪಿದ್ದು, ಒಟ್ಟಾರೆ ದಕ್ಷಿಣ ಏಷ್ಯಾ ಪರಿಗಣಿಸಿದಲ್ಲಿ 2020 ರಲ್ಲಿ ಈ ಭಾಗದ ದೇಶಗಳ ಬೆಳವಣಿಗೆ ದರ ಶೇ 3 ಕ್ಕೆ ಕುಸಿಯಲಿದೆ ಎಂದು ಎಡಿಬಿ ಸಂಸ್ಥೆಯ ವರದಿ ಉಲ್ಲೇಖ ಮಾಡಿದೆ.
ಇನ್ನು ಏಪ್ರಿಲ್‌ನಲ್ಲಿ ಈ ಅಂದಾಜು ಪ್ರಮಾಣ ಶೇ 4.1 ರಷ್ಟಿತ್ತು ಎಂದು ವರದಿ ತಿಳಿಸಿದ್ದು, 2021 ರ ವೇಳೆಗೆ ದಕ್ಷಿಣ ಏಷ್ಯಾ ಈ ಮುನ್ನ ಅಂದಾಜಿಸಿದ್ದ ಶೇ4.9 ನ್ನು ಮೀರಿ ಶೇ.6 ರಷ್ಟು ಬೆಳವಣಿಗೆ ದರ ಸಾಧಿಸಲಿದೆ ಎಂದು ಎಡಿಬಿ ಮಾಹಿತಿ ನೀಡಿದೆ. 2021ರ ಮಾರ್ಚ್ 31 ಕ್ಕೆ ಕೊನೆಗೊಳ್ಳುವ ಹಣಕಾಸು ಸಾಲಿನಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇ 4ಕ್ಕೆ ಕುಸಿಯಲಿದೆ ಎಂದು ಅಂದಾಜಿಸಲಾಗಿದೆ.