ಬೆಂಗಳೂರು: ಬಸವನಗುಡಿಯ ಕಹಳೆ ಬಂಡೆಯಲ್ಲಿ ಆಡಿ ಬೆಳೆದ ನನಗೆ ತಂದೆಯ ಪ್ರೋತ್ಸಾಹ ವಿಜ್ಞಾನ ಕ್ಷೇತ್ರದಲ್ಲಿ ಅರಳುವಂತೆ ಮಾಡಿತು ಎಂದು ಹಿರಿಯ ವಿಜ್ಞಾನಿ ಡಾ.ಸಿ.ಎನ್.ಆರ್.ರಾವ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು, ಶನಿವಾರ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಆಯೋಜಿಸಿದ ª”ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ತಾವು ಸಾಗಿ ಬಂದ ದಾರಿಯ ಬಗ್ಗೆ ಮನಬಿಚ್ಚಿಟ್ಟರು. “ನನ್ನ ತಾತ ಕೂಡ ಶಾಲೆಯ ಮಾಸ್ತರ್ ಆಗಿದ್ದರು.
ಅಪ್ಪ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಕನ್ನಡದಲ್ಲೇ ಪ್ರೌಢಶಾಲೆವರೆಗೆ ಓದು, ಆ ನಂತರ ಇಂಗ್ಲಿಷ್ ಮಾಧ್ಯಮದಲ್ಲಿ ಓದು ಅನ್ನುತ್ತಿದ್ದರು. ಅಪ್ಪನ ಆಸೆಯಂತೆ ಕನ್ನಡದಲ್ಲೇ ಓದಿದೆ. ನಂತರ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ತೋರಿದೆ’ ಎಂದು ಬಾಲ್ಯವನ್ನು ನೆನೆದರು. ಈಗ ಬೆಂಗಳೂರಿನಲ್ಲಿ ತಲೆ ಎತ್ತುತ್ತಿರುವ ಬಹುಮಹಡಿ ಕಟ್ಟಡಗಳನ್ನು ನೋಡಿದರೆ ಭಯವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಳ್ಳಿ ಮಕ್ಕಳ ಕೈಯಲ್ಲಿ ಭವಿಷ್ಯ: ಮೂವತ್ತರ ಹರೆಯದಲ್ಲಿಯೇ ವಿಜ್ಞಾನ ಕ್ಷೇತ್ರದ ಹಲವು ಹುದ್ದೆಗಳನ್ನು ಏರಿದೆ.ಇದಕ್ಕೆ ಕಠಿಣ ಪರಿಶ್ರಮ ಕಾರಣ.ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಯುವಕರು ಹಣ ಮಾಡುವ ಉದ್ದೇಶದಿಂದ ಐಟಿ-ಬಿಟಿ ಕ್ಷೇತ್ರಕ್ಕೆ ಮಾರು ಹೋಗುತ್ತಿದ್ದು, ವಿಜ್ಞಾನ ಕ್ಷೇತ್ರದಿಂದ ವಿಮುಖರಾಗುತ್ತಿದ್ದಾರೆ. ಆದರೆ, ಗ್ರಾಮೀಣ ಪ್ರದೇಶದ ಮಕ್ಕಳು ವಿಜ್ಞಾನ ಕ್ಷೇತ್ರದತ್ತ ಒಲವು ಹೊಂದಿದ್ದು,ಭಾರತದ ಭವಿಷ್ಯ ಹಳ್ಳಿ ಮಕ್ಕಳ ಕೈಯಲ್ಲಿ ಅಡಗಿದೆ ಎಂದರು.
ನೊಬೆಲ್ ಸಿಕ್ಕರೆ ಖುಷಿಯಾಗುತ್ತೆ: 60 ವರ್ಷಗಳಿಂದ ನಾನು ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದೇನೆ. ವಿಜ್ಞಾನದ ಕ್ಷೇತ್ರದಲ್ಲಿ ಹಲವು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿ, 52 ಪುಸ್ತಕಗಳನ್ನು ಬರೆದಿದ್ದೇನೆ.
ಆದರೆ ನಾನೆಂದೂ ಪ್ರಶಸ್ತಿಗಳನ್ನು ಅರಸಿ ಹೋಗಲಿಲ್ಲ. ನೊಬೆಲ್ ಪ್ರಶಸ್ತಿಗೆ ಸಾಕಷ್ಟು ಬಾರಿ ನನ್ನ ಹೆಸರು ಹೋಗಿದೆ. ಆದರೆ ಇನ್ನೂ ಸಿಕ್ಕಿಲ್ಲ. ನನ್ನಂತೆ ಹಲವು ಮಂದಿ ಹಿರಿಯ ವಿಜ್ಞಾನಿಗಳಿಗೆ ಇನ್ನೂ ನೋಬೆಲ್ ಪ್ರಶಸ್ತಿ ಸಿಕಿಲ್ಲ. ಸಿಕ್ಕರೆ ಖುಷಿಪಡುತ್ತೇನೆ ಎಂದು ಸಭೆಯಲ್ಲಿ ಕೇಳಿದ ಪ್ರಶ್ನೆಗೆ ರಾವ್ ಉತ್ತರಿಸಿದರು.