ಬೀಜಿಂಗ್ : ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರದಡಿ ಭಾರತದ ವಿದೇಶ ನೀತಿಯು ಅತ್ಯಂತ ಸದೃಢ, ಸ್ಪಂದನಶೀಲ ಮತ್ತು ನೇತ್ಯಾತ್ಮಕವಾಗಿದೆಯಲ್ಲದೆ ಯಾವುದೇ ಬಗೆಯ ಅಪಾಯವನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಚೀನದ ಸರಕಾರಿ ಒಡೆತನದ ಚಿಂತನ ಚಾವಡಿಯ ಉನ್ನತ ಅಧಿಕಾರಿಯೋರ್ವರು ಹೇಳಿದ್ದಾರೆ.
ಚೀನದ ವಿದೇಶ ಸಚಿವಾಲಯದೊಂದಿಗೆ ಸಂಯೋಜಿತವಾಗಿರುವ ಅಂತಾರಾಷ್ಟ್ರೀಯ ಅಧ್ಯಯನಗಳ ಕೇಂದ್ರದ ಉಪಾಧ್ಯಕ್ಷರಾಗಿರುವ ರೋಂಗ್ ಯಿಂಗ್ ಅವರು “ಕಳೆದ ಮೂರು ವರ್ಷಗಳಲ್ಲಿ ಭಾರತದ ರಾಜತಾಂತ್ರಿಕತೆ ಅತ್ಯಂತ ಸ್ಪಷ್ಟ, ಸದೃಢ, ನೇತ್ಯಾತ್ಮಕ ಮತ್ತು ಯಾವುದೇ ಬಗೆಯ ಅಪಾಯಗಳನ್ನು ಎದುರಿಸಬಲ್ಲ ಸಾಮರ್ಥ್ಯವನ್ನು ಹೊಂದಿರುವುದು ಸ್ಪಷ್ಟವಾಗಿದೆ. ಹೊಸ ಜಾಗತಿಕ ಸನ್ನಿವೇಶದಲ್ಲಿ ಭಾರತವು ಒಂದು ಮಹಾನ್ ಶಕ್ತಿಶಾಲಿ ದೇಶವಾಗಿ ಮೂಡಿ ಬರುವಲ್ಲಿ ಮೋದಿ ಅವರ ವಿಶಿಷ್ಟ ಮತ್ತು ಅನನ್ಯವಾದ ತಂತ್ರಗಾರಿಕೆ ಬಹುದೊಡ್ಡ ಪಾತ್ರವನ್ನು ವಹಿಸಿದೆ’ ಎಂದು ಹೇಳಿದ್ದಾರೆ.
ರೋಂಗ್ ಯಿಂಗ್ ಅವರು ಪ್ರಧಾನಿ ಮೋದಿ ಸರಕಾರದಡಿಯ ವಿದೇಶ ನೀತಿಯ ಬಗ್ಗೆ ಸಿಐಐಎಸ್ ನಿಯತಕಾಲಿಕದಲ್ಲಿ ಲೇಖನ ಬರೆದಿದ್ದಾರೆ.
ಚೀನದ ಈ ಚಿಂತನ ಚಾವಡಿಯ ಮಟ್ಟಿಗೆ ಭಾರತದ ಕುರಿತಾಗಿ ಈ ರೀತಿಯ ಲೇಖನ ಪ್ರಕಟವಾಗಿರುವುದು ಇದೇ ಮೊದಲ ಬಾರಿ ಎಂದು ತಿಳಿಯಲಾಗಿದೆ.
ಭಾರತದಲ್ಲಿ ಚೀನೀ ರಾಯಭಾರಿಯಾಗಿ ಸೇವೆಸಲ್ಲಿಸಿರುವ ರೋಂಗ್ ಯಿಂಗ್ ಅವರು ಚೀನದೊಂದಿಗಿನ ಭಾರತದ ಅತ್ಯಂತ ಸಂಕೀರ್ಣ ಮತ್ತು ನಿರ್ಣಾಯಕ ಸಂಬಂಧಗಳ ಬಗ್ಗೆ ತಮ್ಮ ಲೇಖನದಲ್ಲಿ ಚರ್ಚಿಸಿದ್ದಾರೆ. ಮಾತ್ರವಲ್ಲದೆ ಭಾರತವು ದಕ್ಷಿಣ ಪತ್ತು ಆಗ್ನೇಯ ಏಶ್ಯದೊಂದಿಗೆ ಹಾಗೂ ತನ್ನ ಅತ್ಯಂತ ನಿಕಟ ಮಿತ್ರನಾಗಿರುವ ಅಮೆರಿಕ ಮತ್ತು ಜಪಾನ್ ಜತೆಗೆ ಹೊಂದಿರುವ ಅತ್ಯಂತ ಮಹತ್ವದ ಸಂಬಂಧಗಳನ್ನು ಕೂಡ ಚರ್ಚಿಸಿದ್ದಾರೆ.
ಮೋದಿ ಅವರು ವಿದೇಶ ನೀತಿಯು ಉಭಯ ಪಕ್ಷಗಳಿಗೆ ಲಾಭದಾಯಕವಾಗಿರುವ ಸ್ವರೂಪವನ್ನು ಹೊಂದಿದೆ ಮತ್ತು ಅದೇ ವೇಳೆ ಭಾರತದ ಅಸ್ಮಿತೆಯನ್ನು ಜಗತ್ತಿಗೇ ಸಾರುವ ರೀತಿಯಲ್ಲಿ ಇರುವುದು ಗಮನಾರ್ಹವಾಗಿದೆ ಎಂದು ರೋಂಗ್ ಯಿಂಗ್ ಹೇಳಿದ್ದಾರೆ.