Advertisement

ಭಾರತದ ಮೊದಲ ಏಕದಿನ ಗೆಲುವಿಗೆ ತುಂಬಿತು 45 ವರ್ಷ

03:16 AM Jun 12, 2020 | Sriram |

ಹೊಸದಿಲ್ಲಿ: 1975ರ ಜೂನ್‌ 11 ಭಾರತದ ಏಕದಿನ ಕ್ರಿಕೆಟಿನ ಪಾಲಿಗೆ ಐತಿ ಹಾಸಿಕ ದಿನ. ಅಂದು ಭಾರತ ಏಕದಿನದಲ್ಲಿ ತನ್ನ ಮೊದಲ ಗೆಲುವನ್ನು ದಾಖಲಿಸಿತ್ತು. ಗುರುವಾರ ಈ ಸಂಭ್ರಮಕ್ಕೆ ಭರ್ತಿ 45 ವರ್ಷ ತುಂಬಿತು.

Advertisement

ಭಾರತದ ಈ ಗೆಲುವು ಮೊದಲ ವಿಶ್ವಕಪ್‌ನಲ್ಲಿ ಒಲಿದಿತ್ತು. ಕೂಟದ ದ್ವಿತೀಯ ಪಂದ್ಯದಲ್ಲಿ ಎಸ್‌. ವೆಂಕಟರಾಘವನ್‌ ನೇತೃತ್ವದ ಭಾರತ ಲೀಡ್ಸ್‌ ಅಂಗಳದಲ್ಲಿ ಪೂರ್ವ ಆಫ್ರಿಕಾವನ್ನು 10 ವಿಕೆಟ್‌ಗಳಿಂದ ಮಣಿಸಿತ್ತು. ಈಗ ನೋಡಿದರೆ ಇದೇನೂ ಹೆಗ್ಗಳಿಕೆಯ ವಿಜಯವಲ್ಲ. ಆದರೆ ಆಗಷ್ಟೇ ಚಿಗುರೊಡೆಯುತ್ತಿದ್ದ ಏಕದಿನ ಕ್ರಿಕೆಟಿನ ರೋಮಾಂಚನಕ್ಕೆ ಭಾರತ ತನ್ನ ಕೊಡುಗೆ ನೀಡಿದ್ದಂತೂ ಸುಳ್ಳಲ್ಲ. ಇದು ವಿಶ್ವಕಪ್‌ ಇತಿಹಾಸದಲ್ಲಿ ದಾಖಲಾದ 10 ವಿಕೆಟ್‌ ಅಂತರದ ಪ್ರಪ್ರಥಮ ಗೆಲುವು ಎಂಬುದನ್ನು ಮರೆಯುವಂತಿಲ್ಲ.

ಉದ್ಘಾಟನಾ ಪಂದ್ಯದಲ್ಲಿ ಭಾರತ
ಈ ಪಂದ್ಯಾವಳಿಗೂ ಮುನ್ನ ಭಾರತ ಕೇವಲ 2 ಏಕದಿನ ಪಂದ್ಯಗಳನ್ನಷ್ಟೇ ಆಡಿತ್ತು. 1974ರಲ್ಲಿ ಇಂಗ್ಲೆಂಡ್‌ ವಿರುದ್ಧ ಆಡಿದ ಈ ಎರಡೂ ಮುಖಾಮುಖಿಯಲ್ಲಿ ಭಾರತ ಸೋಲನುಭವಿಸಿತ್ತು.

ಕಾಕತಾಳೀಯ ಎಂಬಂತೆ, ವಿಶ್ವಕಪ್‌ ಉದ್ಘಾಟನಾ ಪಂದ್ಯ ದಲ್ಲೂ ಇಂಗ್ಲೆಂಡ್‌-ಭಾರತ ಎದುರಾಗಿದ್ದವು. ಇದನ್ನು ಭಾರತ 202 ರನ್ನುಗಳಿಂದ ಹೀನಾಯವಾಗಿ ಸೋತಿತು. ಇಂಗ್ಲೆಂಡ್‌ 60 ಓವರ್‌ಗಳಲ್ಲಿ 4ಕ್ಕೆ 334 ರನ್‌ ಗಳಿಸಿದರೆ, ಭಾರತ ಟೆಸ್ಟ್‌ ಶೈಲಿಯಲ್ಲಿ ಬ್ಯಾಟ್‌ ಬೀಸಿ, ಪೂರ್ತಿ 60 ಓವರ್‌ ಆಡಿತು. 3 ವಿಕೆಟಿಗೆ ಕೇವಲ 132 ರನ್‌ ಮಾಡಿ ತನ್ನ ಅನನುಭವವನ್ನು ತೆರೆದಿರಿಸಿತು. ಆರಂಭಕಾರ ಗಾವಸ್ಕರ್‌ 60 ಓವರ್‌ ತನಕ ಬ್ಯಾಟಿಂಗ್‌ ವಿಸ್ತರಿಸಿ, ಬರೋಬ್ಬರಿ 174 ಎಸೆತಗಳನ್ನೆದುರಿಸಿ 36 ರನ್‌ ಮಾಡಿ ಅಜೇಯರಾಗಿ ಉಳಿದದ್ದು ಇದೇ ಪಂದ್ಯದಲ್ಲಿ!

ಟೀಕೆಗಳಿಗೆ ಉತ್ತರ
ಆದರೆ ಪೂರ್ವ ಆಫ್ರಿಕಾ ಎದುರಿನ ಮುಂದಿನ ಪಂದ್ಯದಲ್ಲಿ ಭಾರತ ತಿರುಗಿ ಬಿತ್ತು. 10 ವಿಕೆಟ್‌ಗಳ ಜಯ ಸಾಧಿಸಿ ಸಂಭ್ರಮಿಸಿತು. ಪೂರ್ವ ಆಫ್ರಿಕಾ 55.3 ಓವರ್‌ಗಳಲ್ಲಿ 120ಕ್ಕೆ ಕುಸಿದರೆ, ಭಾರತ 29.5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 123 ರನ್‌ ಬಾರಿಸಿತು. ಇಂಗ್ಲೆಂಡ್‌ ವಿರುದ್ಧ “ಬ್ಯಾಟಿಂಗ್‌ ಪ್ರ್ಯಾಕ್ಟೀಸ್‌’ ನಡೆಸಿದ್ದ ಗಾವಸ್ಕರ್‌ ಇಲ್ಲಿ 86 ಎಸೆತಗಳಿಂದ ಅಜೇಯ 65 ರನ್‌ ಮಾಡಿ ಟೀಕೆಗಳಿಗೆ ತಕ್ಕ ಉತ್ತರ ನೀಡಿದರು. ಜತೆಗಾರ ಫಾರೂಖ್‌ ಇಂಜಿನಿಯರ್‌ ಅಜೇಯ 54 ರನ್‌ ಮಾಡಿ ಪಂದ್ಯಶ್ರೇಷ್ಠರೆನಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next