ಹೊಸದಿಲ್ಲಿ : ಭಾರತದ ಮೊತ್ತ ಮೊದಲ ಬಾಹ್ಯಾಕಾಶ ಕಾರ್ಯಕ್ರಮವಾಗಿರುವ ಗಗನಯಾನಕ್ಕೆ ಕೇಂದ್ರ ಸಚಿವ ಸಂಪುಟ ಇಂದು ಶುಕ್ರವಾರ ಹಸಿರು ನಿಶಾನೆ ತೋರಿದೆ. 10,000 ಕೋಟಿ ರೂ. ವೆಚ್ಚದ ಗಗನಯಾನದಲ್ಲಿ ಮೂವರನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ.
ಬಾಹ್ಯಾಕಾಶ ಹಾರಾಟದ ಈ ವಿನೂತನ ಕಾರ್ಯಕ್ರಮದಲ್ಲಿ ಮೂವರು ಚಾಲಕ ಸಿಬಂದಿಗಳು ಕನಿಷ್ಠ ಏಳು ದಿನಗಳ ಕಾಲ ಬಾಹ್ಯಾಕಾಶದಲ್ಲಿ ವಿಹರಿಸುತ್ತಾರೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಭಾರತದ ಮೊತ್ತ ಮೊದಲ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮಕ್ಕೆ ಅನುಮತಿ ನೀಡುವ ನಿರ್ಧಾರವನ್ನು ಕೈಗೊಳ್ಳಲಾಯಿತು.
ಬಾಹ್ಯಾಕಾಶ ಹಾರಾಟ ಕಾರ್ಯಕ್ರಮಕ್ಕೆ ಮಾನವ ಕ್ರಮಾಂಕದ ಜಿಎಸ್‌ಎಲ್‌ವಿ ಎಂಕೆ-111 ವ್ಯೋಮ ವಾಹನವನ್ನು ಬಳಸಲಾಗುವುದು. ಇದರಲ್ಲಿ ಮೂವರು ಸದಸ್ಯರಿಗೆ ಅವಕಾಶವಿದ್ದು ಇದರ ಸೌಕರ್ಯವು ಕನಿಷ್ಠ ಏಳು ದಿನಗಳ ಬಾಹ್ಯಾಕಾಶ ಇರುವಿಕೆಗೆ ಅನುಕೂಲಿಸುತ್ತದೆ.
ಗಗನಯಾನ ಕಾರ್ಯಕ್ರಮಕ್ಕೆ ಬೆಂಬಲವಾಗಿ ಅತ್ಯಗತ್ಯವಿರುವ ಚಾಲಕ ಸಿಬಂದಿ ತರಬೇತಿ, ಹಾರಾಟ ವ್ಯವಸ್ಥೆಯ ಅರಿಯುವಿಕೆ ಮತ್ತು ಭೂ-ಮೂಲಸೌಕರ್ಯಗಳನ್ನು ವ್ಯವಸ್ಥೆಗೊಳಿಸಲಾಗುವುದು.
ಗಗನಯಾನ ಕಾರ್ಯಕ್ರಮದ ಯಶಸ್ಸಿಗೆ ಇಸ್ರೋ, ವಿವಿಧ ರಾಷ್ಟ್ರೀಯ ಸಂಘ-ಸಂಸ್ಥೆಗಳು, ಪ್ರಯೋಗಾಲಯಗಳು, ಶಿಕ್ಷಣ ತಜ್ಞರು ಮತ್ತು ಕೈಗಾರಿಕಾ ವಯಲಯದ ಉನ್ನತರೊಂದಿಗೆ ವಿಸ್ತೃತವಾಗಿ ಕೆಲಸ ಮಾಡಲಿದೆ.
ಗಗನಯಾನ ಕಾರ್ಯಕ್ರಮಕ್ಕೆ ಮಂಜೂರಾಗಿರುವ 10,000 ಕೋಟಿ ರೂ. ಮೊತ್ತವು, ತಂತ್ರಜ್ಞಾನ ಅಭಿವೃದ್ಧಿ , ಫ್ಲೈಟ್ ಹಾರ್ಡ್ ವೇರ್ ಮತ್ತು ಮೂಲ ಸೌಕರ್ಯಗಳ ಒದಗಣೆ ವೆಚ್ಚವನ್ನು ಒಳಗೊಂಡಿರುತ್ತದೆ. ಎರಡು ಮಾನವ ರಹಿತ ಹಾರಾಟಗಳು ಮತ್ತು ಒಂದು ಮಾನವ ಸಹಿತ ಹಾರಾಟವನ್ನು ಗಗನಯಾನ ಕಾರ್ಯಕ್ರಮ ಭಾಗವಾಗಿ ಕೈಗೊಳ್ಳಲಾಗುವುದು.