ಹೊಸದಿಲ್ಲಿ: ದಶಕಗಳ ಹಿಂದೆಯೇ ಸಾಂಪ್ರದಾಯಿಕ ಚೌಕಟ್ಟಿನಿಂದ ಆಚೆ ಬಂದು, ಕಚೇರಿ, ರಾಜಕೀಯ, ಉದ್ಯಮ ರಂಗಗಳನ್ನು ದಾಟಿ, ಇತ್ತೀಚೆಗೆ ಯುದ್ಧಭೂಮಿಯವರೆಗೂ ಸಾಗಿದ್ದ ಭಾರತೀಯ ಮಹಿಳೆಯರ ಆತ್ಮವಿಶ್ವಾಸ ಇದೀಗ ಬಾನೆತ್ತರಕ್ಕೆ ಚಿಮ್ಮಿದೆ. ಮಧ್ಯಪ್ರದೇಶ ಮೂಲದ ಅವನಿ ಚತುರ್ವೇದಿ (24), ಬುಧವಾರ, ವಿಶ್ವದಲ್ಲೇ ಅತಿ ವೇಗದ ಯುದ್ಧವಿಮಾನ ಎಂದೇ ಖ್ಯಾತಿ ಪಡೆದಿರುವ ಮಿಗ್-21 ಅನ್ನು ಏಕಾಂಗಿಯಾಗಿ ಚಲಾಯಿಸಿ, ಈ ಸಾಧನೆ ಮಾಡಿದ ಭಾರತದ ಮೊಟ್ಟ ಮೊದಲ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಗುಜರಾತ್‌ನ ಜಾಮ್‌ನಗರ್‌ನಲ್ಲಿರುವ ಭಾರತೀಯ ವಾಯು ಸೇನಾ ನೆಲೆಯಿಂದ ಮಿಗ್-21 ಬೈಸನ್ ವಿಮಾನದಲ್ಲಿ ಕೂತು ಗಗನಕ್ಕೆ ಹಾರಿದ ಅವರು, ಅಲ್ಲಿ ಸುಮಾರು 30 ನಿಮಿಷಗಳ ಕಾಲ ಹಾರಾಟ ನಡೆಸಿ ಹಿಂದಿರುಗಿದರು.
2015ರಲ್ಲೇ, ಭಾರತೀಯ ವಾಯುಪಡೆಗೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಲಾಗಿತ್ತು. ಆಗ, ಅವನಿ ಚತುರ್ವೇದಿ, ಮೋಹನಾ ಸಿಂಗ್ ಹಾಗೂ ಭಾವನಾ ಕಾಂತ್ ಎಂಬ ಮೂವರು ಯುವತಿಯರು ಪೈಲಟ್ ಹುದ್ದೆಗಳಿಗೆ ಆಯ್ಕೆಯಾಗಿದ್ದರು. ಇವರಿಗೆ ಹೈದರಾಬಾದ್‌ನಲ್ಲಿರುವ ಏರ್‌ಫೋರ್ಸ್ ಅಕಾಡೆಮಿಯಲ್ಲಿ ತರಬೇತಿ ನೀಡಲಾಗಿತ್ತು. ಹಾಗಾಗಿಯೇ, ಬುಧವಾರ ಏಕಾಂಗಿಯಾಗಿ ವಿಮಾನ ನಡೆಸುವ ಸವಾಲನ್ನು ಸ್ವೀಕರಿಸಿದ ಅವನಿ, ಅದನ್ನು ಯಶಸ್ವಿಯಾಗಿ ಪೂರೈಸಿ ಇತಿಹಾಸ ನಿರ್ಮಿಸಿದ್ದಾರೆ.
ಅವನಿ ಅವರ ಈ ಸಾಧನಯಿಂದಾಗಿ, ಭಾರತವು, ಯುದ್ಧ ವಿಮಾನಗಳಿಗೆ ಮಹಿಳಾ ಪೈಲಟ್‌ಗಳನ್ನು ಹೊಂದಿರುವ ಅಮೆರಿಕ, ಇಸ್ರೇಲ್, ಬ್ರಿಟನ್ ಹಾಗೂ ಪಾಕಿಸ್ಥಾನ ರಾಷ್ಟ್ರಗಳ ಸಾಲಿಗೆ ಸೇರ್ಪಡೆಗೊಂಡಿದೆ.
ಯಾರು ಈ ಅವನಿ?
ಅವನಿ ಚತುರ್ವೇದಿ ಅವರು ಮಧ್ಯಪ್ರದೇಶದ ರೇವಾ ಜಿಲ್ಲೆಯ ಡಿಯೋಲ್ಯಾಂಡ್ ಎಂಬ ಪುಟ್ಟ ಊರಿನವರು. ತಂದೆ, ದಿನಕರ್ ಚತುರ್ವೇದಿ ಮಧ್ಯಪ್ರದೇಶ ಸರಕಾರದ ಜಲ ಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನಿಯರ್. ತಾಯಿ ಗೃಹಿಣಿ. ಅಲ್ಲಿಯೇ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವನಿ, ರಾಜಸ್ಥಾನದ ಬನಾಸ್ತಲಿ ವಿಶ್ವವಿದ್ಯಾಲಯದಿಂದ ತಾಂತ್ರಿಕ ಪದವಿ ಪಡೆದರು. ಅಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಫ್ಲೈಟ್ ಕ್ಲಬ್‌ಗ ಸೇರಿಕೊಂಡ ಅವರು, ಭಾರತೀಯ ವಾಯು ಸೇನೆಯ ಪರೀಕ್ಷೆಯಲ್ಲಿ ಉತ್ತೀರ್ಣರಾದರು.
ಬೀದರ್‌ಗೂ ಬರಲಿದ್ದಾರೆ!
ತರಬೇತಿಯ ಎರಡು ಹಂತಗಳನ್ನು ಪೂರೈಸಿರುವ ಅವನಿ, ಮುಂದಿನ ವರ್ಷ 3ನೇ ಹಂತದ ತರಬೇತಿಗಾಗಿ ಬೀದರ್‌ಗೆ ಆಗಮಿಸಲಿದ್ದಾರೆ. ಅಲ್ಲಿ, ಸುಖೋಯ್ ಮತ್ತು ತೇಜಸ್‌ನಂತ ಯುದ್ಧ ವಿಮಾನಗಳನ್ನು ಚಲಾಯಿಸುವ ತರಬೇತಿ ಪಡೆಯಲಿದ್ದಾರೆ.