ದೇಶದಲ್ಲಿ ಮೊದಲ ಬಾರಿಗೆ ಕೋವಿಡ್ 19 ವೈರಸ್ ಸೋಂಕು ಕಾಣಿಸಿಕೊಂಡಿರುವ ತ್ರಿಶ್ಶೂರ್‌ನ ವಿದ್ಯಾರ್ಥಿನಿ ಈಗ ಆನ್‌ಲೈನ್‌ನಲ್ಲಿ ಶಿಕ್ಷಣ ಮುಂದುವರಿಸುತ್ತಿದ್ದಾರೆ. ಉಳಿದ ಅವಧಿಯಲ್ಲಿ ಕುಟುಂಬದ ಸದಸ್ಯರ ಜತಗೆ ನೆಮ್ಮದಿಯಿಂದ ಕಾಲ ಕಳೆಯುತ್ತಿದ್ದಾರೆ.
ಜ. 30ರಂದು ಸೋಂಕು ದೃಢಪಟ್ಟಿದ್ದ ಯುವತಿ, ಗುಣಮುಖರಾಗಿದ್ದಾರೆ. ಚೀನಾದ ವುಹಾನ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ ಈಕೆ, ಸೆಮಿಸ್ಟರ್ ರಜೆ ಇದ್ದರಿಂದ ಜನವರಿಯಲ್ಲಿ ಕೇರಳಕ್ಕೆ ಮರಳಿದ್ದರು. ಜ.27 ರಂದು ಸೋಂಕಿನ ಲಕ್ಷಣ ಕಾಣಿಸಿಕೊಂಡ ಕೂಡಲೇ ಅವರನ್ನು ತ್ರಿಶ್ಶೂರ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
3 ವಾರ ಚಿಕಿತ್ಸೆ ಪಡೆದ 20 ವರ್ಷದ ಈ ವಿದ್ಯಾರ್ಥಿನಿಯನ್ನು ಮತ್ತೆ 2 ಬಾರಿ ಸೋಂಕು ಪತ್ತೆ ಪರೀಕ್ಷೆಗೊಳಪಡಿಸಿದಾಗ ನೆಗೆಟಿವ್ ಬಂದಿತ್ತು. ಕೋವಿಡ್ 19 ವೈರಸ್ ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದರಿಂದ ಫೆ.20 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು.
3ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ ಈಕೆ, ಇದೀಗ ಮನೆಯಲ್ಲೇ ಕುಳಿತು ವುಹಾನ್ ಕಾಲೇಜಿನಿಂದ ಆನ್‌ಲೈನ್ ಮೂಲಕ ಕ್ಲಾಸ್‌ಗಳನ್ನು ಪಡೆಯುತ್ತಿದ್ದಾರೆ. ಪ್ರತಿದಿನ ಬೆಳಗ್ಗೆ 5.30ಕ್ಕೆ ಶುರುವಾಗುವ ಆನ್‌ಲೈನ್ ಕ್ಲಾಸ್ ಬೆಳಗ್ಗೆ 9 ಗಂಟೆಗೆ ಮುಕ್ತಾಯವಾಗುತ್ತದೆ. ಬಿಡುವಿನ ವೇಳೆಯಲ್ಲಿ ಈಕೆ ಅಡುಗೆ ತಯಾರಿಗೆ ತಾಯಿಗೆ ನೆರವಾಗುತ್ತಿದ್ದಾರೆ.
‘ನನಗೆ ಸೋಂಕು ದೃಢಪಟ್ಟ ಸಂದರ್ಭದಲ್ಲಿ ವಿಶ್ವದಲ್ಲಿ ಹಲವರು ಮಂದಿ ಇದರಿಂದ ಗುಣಮುಖರಾಗಿದ್ದರು. ಹೀಗಾಗಿ ಅಂದು ನಾನು ಭಯಪಡಲಿಲ್ಲ’ ಎಂದು ವಿದ್ಯಾರ್ಥಿನಿ ಪ್ರತಿಕ್ರಿಯಿಸಿದ್ದಾರೆ.