ಹೊಸದಿಲ್ಲಿ : ಭಾರತದ ಮೊತ್ತ ಮೊದಲ ಜೈವಿಕ ಇಂಧನ ಚಾಲಿತ ವಿಮಾನದ ಚೊಚ್ಚಲ ಹಾರಾಟವನ್ನು ಇಂದು ಸೋಮವಾರ ಸ್ಪೈಸ್ ಜೆಟ್ ಯಶಸ್ವಿಯಾಗಿ ಕೈಗೊಂಡಿತು.
ಆಂಶಿಕ ಜೈವಿಕ ಇಂಧನ ಬಳಕೆಯ 78 ಆಸನಗಳ ಬೊಂಬಾರ್ಡಿಯರ್ ಕ್ಯೂ 400 ವಿಮಾನ ಇಂದು ಡೆಹರಾಡೂನ್ ನಿಂದ ಟೇಕಾಫ್ ಆಗಿ ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಯಿತು.
ಡೆಹರಾಡೂನ್‌ನ ಸಿಎಸ್‌ಐಆರ್ – ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ (ಐಪಿ) ಅಭಿವೃದ್ಧಿ ಪಡಿಸಿರುವ ಈ ಇಂಧನವು ಶೇ.75ರಷ್ಟು ವೈಮಾನಿಕ ಟರ್ಬೈನ್ ಇಂಧನ ಮತ್ತು ಶೇ.25ರಷ್ಟು ಜೈವಿಕ ಇಂಧನವನ್ನು ಒಳಗೊಂಡಿದೆ. ಈ ಜೈವಿಕ ಇಂಧನವನ್ನು ಜತ್ರೋಫಾ ಬೆಳೆಯಿಂದ ಅಭಿವೃದ್ದಿಪಡಿಸಲಾಗಿದೆ.
“ದೇಶದ ವೈಮಾನಿಕ ಮತ್ತು ಇಂಧನ ವಲಯದಲ್ಲಿ ಇದೊಂದು ಐತಿಹಾಸಿಕ ದಿನ. ಜೈವಿಕ ಇಂಧನ ಚಾಲಿತ ವಿಮಾನ ಇಂದು ದಿಲ್ಲಿಯಯಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂ ಇದನ್ನು ಅಭಿವೃದ್ಧಿಪಡಿಸಿದೆ’ ಎಂದು ದೂರದರ್ಶನ್ ಟ್ವೀಟ್ ಮಾಡಿದೆ.
ಜೈವಿಕ ಇಂಧನ ಚಾಲಿತ ಸ್ಪೈಸ್ ಜೆಟ್ ವಿಮಾನದ ಇಂದಿನ ಪ್ರಾಯೋಗಿಕ, ಐತಿಹಾಸಿಕ ಹಾರಾಟದಲ್ಲಿ ಡಿಜಿಸಿ ಅಧಿಕಾರಿಗಳು ಮತ್ತು ಸ್ಪೈಸ್ ಜೆಟ್ ಅಧಿಕಾರಿಗಳು ಸೇರಿದಂತೆ ಒಟ್ಟು 20 ಮಂದಿ ಇದ್ದರು. ವಿಮಾನದ ಹಾರಾಟ ಅವಧಿಯು ಸುಮಾರು 25 ನಿಮಿಷಗಳದ್ದಾಗಿತ್ತು ಎಂದು ಏರ್ ಲೈನ್ಸ್ ಕಾರ್ಯನಿರ್ವಹಣಾಧಿಕಾರಿ ಹೇಳಿದ್ದಾರೆ.
ವಿಮಾನವು ದಿಲ್ಲಿಯಲ್ಲಿ ಲ್ಯಾಂಡ್ ಆದಾಗ ಕೇಂದ್ರ ಸಚಿವ ನಿತಿನ್ ಗಡ್ಕರಿ, ಸುರೇಶ್ ಪ್ರಭು, ಧರ್ಮೇಂದ್ರ ಪ್ರಧಾನ್, ಡಾ. ಹರ್ಷವರ್ಧನ್ ಮತ್ತು ಜಯಂತ್ ಸಿನ್ಹಾ ಇದ್ದರು.