ಹೊಸದಿಲ್ಲಿ: ದೇಶದ ಉತ್ಪಾದನಾ ವಲಯವು ಆಗಸ್ಟ್ ನಲ್ಲಿ ಶೇ.52ರಷ್ಟು ಬೆಳವಣಿಗೆ ಕಂಡಿದ್ದು, ಇದು ದೇಶದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ.
ಆಗಸ್ಟ್‌ನಲ್ಲಿ ಅನ್‌ಲಾಕ್ 3.0 ಆರಂಭವಾಗಿತ್ತು. ಈ ಸಂದರ್ಭದಲ್ಲಿ ದೇಶೀಯ ಉತ್ಪಾದನ ವಲಯ ಇದೇ ಮೊದಲ ಬಾರಿಗೆ ಶೇ. 50ಕ್ಕಿಂತ ಹೆಚ್ಚಿನ ಮಟ್ಟದ ಬೆಳವಣಿಗೆ ಸಾಧಿಸಿದೆ ಎಂದು ಐಎಚ್‌ಎಸ್ ಮಾರ್ಕಿಟ್‌ನ ನಿಕೀ ಮ್ಯಾನುಫ್ಯಾಕ್ಚರಿಂಗ್ ಇಂಡೆಕ್ಸ್ ಎಂಬ ಸಂಸ್ಥೆ ನಡೆಸಿರುವ ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ಆನ್‌ಲಾಕ್ ಆರಂಭದ ಅನಂತರ ಜುಲೈಯಲ್ಲಿ ಕೈಗಾರಿಕಾ ರಂಗದ ಚಟುವಟಿಕೆಗಳು ಶೇ. 48ರಷ್ಟು ಪ್ರಗತಿ ಸಾಧಿಸಿದ್ದವು. ಆಗಸ್ಟ್‌ನಲ್ಲಿ ಈ ಬೆಳವಣಿಗೆ ಶೇ. 52ರಷ್ಟು ಹೆಚ್ಚಾಯಿತು. ಶೇ. 50ಕ್ಕಿಂತ ಹೆಚ್ಚು ಬೆಳವಣಿಗೆ ಕಂಡಿರುವ ಕೈಗಾರಿಕಾ ರಂಗದಿಂದ ದೇಶದ ಆರ್ಥಿಕತೆ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಸಮೀಕ್ಷೆಯಲ್ಲಿ ವಿವರಿಸಲಾಗಿದೆ.
ಕೋವಿಡ್ 19 ಲಾಕ್‌ಡೌನ್ ಅವಧಿಯಲ್ಲಿ ಕುಸಿದಿದ್ದ ಉತ್ಪಾದನ ವಲಯವು ಪ್ರಸಕ್ತ ವರ್ಷದ 2ನೇ ತ್ತೈಮಾಸಿಕದ ಮೊದಲೆರಡು (ಜುಲೈ ಮತ್ತು ಆಗಸ್ಟ್) ತಿಂಗಳುಗಳಲ್ಲಿ ಚೇತರಿಕೆ ಕಂಡಿದೆ. ಅದರಲ್ಲೂ ವಿಶೇಷವಾಗಿ, ಉತ್ಪಾದನ ರಂಗ ದಾಖಲಿಸಿರುವ ಪ್ರಗತಿಯು ಈ ಹಣಕಾಸು ವರ್ಷದ ಮುಂದಿನ ತ್ತೈಮಾಸಿಕಗಳ ಮೇಲೆ ಮತ್ತು ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಐಎಚ್‌ಎಸ್ ಮಾರ್ಕಿಟ್ ಸಂಸ್ಥೆಯ ಆರ್ಥಿಕ ತಜ್ಞರಾದ ಶ್ರೀಯಾ ಪಟೇಲ್ ತಿಳಿಸಿದ್ದಾರೆ.
ಕಾರು ಭರ್ಜರಿ ಮಾರಾಟ
ದೇಶದ ಕಾರು ಮಾರಾಟ ವೇಗ ಪಡೆದುಕೊಳ್ಳುತ್ತಿರುವ ಸ್ಪಷ್ಟ ಸಂದೇಶವೊಂದು ಲಭಿಸಿದೆ. ಕಳೆದ ತಿಂಗಳು ಮಾರಾಟವಾಗಿರುವ ಕಾರುಗಳ ಸಂಖ್ಯೆ 1,24,624. ಕಳೆದ ವರ್ಷ ಇದೇ ತಿಂಗಳಲ್ಲಿ 1,06,413 ಕಾರುಗಳು ಮಾರಾಟವಾಗಿದ್ದವು.
ಹ್ಯುಂಡೈ ಮತ್ತು ಹೀರೋ ಮೋಟಾರ್ಸ್ ಕೂಡ ಆಗಸ್ಟ್ ತಿಂಗಳಲ್ಲಿ ಉತ್ತಮ ವಹಿವಾಟು ನಡೆಸಿವೆ. ಹ್ಯುಂಡೈ ಮೋಟಾರ್ಸ್ ಇಂಡಿಯಾ ಲಿ.ಯ ವಹಿವಾಟಿನಲ್ಲಿಯೂ ಶೇ. 19.9ರಷ್ಟು ಬೆಳವಣಿಗೆಯಾಗಿದೆ. ಹೀರೋ ಮೋಟಾರ್ಸ್ ಕೂಡ ಶೇ. 7.55ರಷ್ಟು ಹೆಚ್ಚು ಬೆಳವಣಿಗೆ ಸಾಧಿಸಿದೆ.