ಹೊಸದಿಲ್ಲಿ: ನ್ಯೂಜಿಲ್ಯಾಂಡ್ ವಿರುದ್ಧದ ತವರಿನ ಸರಣಿ ಮುಗಿದ ಬಳಿಕ ಭಾರತ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ತೆರಳಬೇಕಿದೆ. ಆದರೆ ಸದ್ಯ ಅಲ್ಲಿ ಒಮಿಕ್ರಾನ್ ಭೀತಿ ಹೆಚ್ಚುತ್ತಿರುವುದರಿಂದ ಈ ಸರಣಿಯನ್ನು ಒಂದು ವಾರ ಮಟ್ಟಿಗೆ ಮುಂದೂಡಲಾಗಿದೆ ಎಂದು ವರದಿಯಾಗಿದೆ. ಇನ್ನೊಂದೆಡೆ, ಈ ಪ್ರವಾಸದ ಬಗ್ಗೆ ರವಿವಾರ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ಬಿಸಿಸಿಐ ಮೂಲದಿಂದ ತಿಳಿದು ಬಂದಿದೆ.
ದಕ್ಷಿಣ ಆಫ್ರಿಕಾ ಪ್ರವಾಸ ಪೂರ್ವ ನಿಗದಿಯಂತೆ ನಡೆಯಲಿದೆ ಎಂದು ಗಂಗೂಲಿ ಎರಡು ದಿನಗಳ ಹಿಂದೆ ಹೇಳಿದ್ದರು. ಹೊಸ ರೂಪಾಂತರಿಯ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ; ಪ್ರವಾಸದ ಬಗ್ಗೆ ನಿರ್ಧರಿಸಲು ಇನ್ನೂ ಸಮಯವಿದೆ ಎಂದಿದ್ದರು.
ಇದನ್ನೂ ಓದಿ:ಪ್ರಧಾನಿ ಮೋದಿ ನಡತೆ ನೋಡಿ ಸಿದ್ದು ಕಲಿಯಲಿ: ಈಶ್ವರಪ್ಪ
ಈ ನಡುವೆ ದಕ್ಷಿಣ ಆಫ್ರಿಕಾ ಸರಕಾರ ಭಾರತೀಯ ಕ್ರಿಕೆಟ್‌ಗೆ ಅಭಯ ಸೂಚಿಸಿತ್ತು. ಟೀಮ್ ಇಂಡಿಯಾಕ್ಕೆ ಅತ್ಯಂತ ಸುರಕ್ಷಿತ ಬಯೋಬಬಲ್ ವಾತಾವರಣದ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿತ್ತು. ಜತೆಗೆ ಟೀಮ್ ಇಂಡಿಯಾ ಆಟಗಾರರ ಆರೋಗ್ಯ ಮತ್ತು ರಕ್ಷಣೆ ಸಲುವಾಗಿ ದಕ್ಷಿಣ ಆಫ್ರಿಕಾ ಸರಕಾರ ಸಕಲ ವ್ಯವಸ್ಥೆ ಮಾಡುದಾಗಿ ವಿದೇಶಾಂಗ ಸಚಿವಾಲಯದ ಅಧಿಕಾರಿ ಹೇಳಿದ್ದರು.
ಆದರೆ ಈ ಸರಣಿಯ ಅಂತಿಮ ನಿರ್ಧಾರವೇನಿದ್ದರೂ ಕೇಂದ್ರ ಸರಕಾರದ ಹೇಳಿಕೆಯನ್ನು ಅವಲಂಬಿಸಿದೆ ಎಂಬುದಷ್ಟೇ ಸತ್ಯ.