ನವದೆಹಲಿ: ಭಾರತದಲ್ಲಿ ಮಂಗಳವಾರ ರಾತ್ರಿಯ ವೇಳೆಗೆ ಕೋವಿಡ್-19 ಸೋಂಕಿತರ ಸಂಖ್ಯೆ 2 ಲಕ್ಷದ ಗಡಿ ದಾಟಿದ್ದು, ಕಳೆದ 3 ದಿನಗಳಿಂದ 8,000ಕ್ಕಿಂತ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿದೆ.
ದೇಶದಲ್ಲಿ 1 ಲಕ್ಷ ವೈರಾಣು ಪೀಡಿತರು ವರದಿಯಾದ ತದನಂತರದ ಕೇವಲ 15 ದಿನಗಳಲ್ಲಿ ಮತ್ತೆ 1 ಲಕ್ಷ ಸೋಂಕಿತರು ಪತ್ತೆಯಾಗಿದ್ದಾರೆ. ಆ ಮೂಲಕ ಕೋವಿಡ್ ಹಾಟ್ ಸ್ಪಾಟ್ ಗಳಲ್ಲಿ ಭಾರತವೂ ಒಂದೆನಿಸಿದ್ದು ಜಾಗತಿಕವಾಗಿ ಏಳನೇ ಸ್ಥಾನ ಪಡೆದುಕೊಂಡಿದೆ. ದೇಶದಲ್ಲಿ ಕೋವಿಡ್ 19 ಮಹಾಮಾರಿ ಅಬ್ಬರಿಸಲು ಆರಂಭವಾಗಿ 93 ದಿನಗಳು ಕಳೆದಿದ್ದು ಈವರೆಗಿನ ಸೋಂಕಿತರ ಸಂಖ್ಯೆ 2,07,112 ಎಂದು ಆರೋಗ್ಯ ಸಚಿವಾಲಯ ವರದಿ ತಿಳಿಸಿದೆ.
ದೇಶದಲ್ಲಿ ಒಟ್ಟಾರೆ ಯಾಗಿ ಸೋಂಕಿನ ಕಾರಣದಿಂದ 5,598 ಜನರು ಮೃತರಾಗಿದ್ದು ದೆಹಲಿ, ಮಹಾರಾಷ್ಟ್ರ , ಗುಜರಾತ್ , ತಮಿಳುನಾಡು ರಾಜ್ಯಗಳು ಅಕ್ಷರಶಃ ತತ್ತರಿಸಿವೆ.
ತಮಿಳುನಾಡುವಿನಲ್ಲಿ ಕಳೆದ 24 ಗಂಟೆಗಳಲ್ಲಿ 1,091 ಜನರಿಗೆ ಸೋಂಕು ದೃಢಪಟ್ಟಿದ್ದು, ಒಟ್ಟಾರೆಯಾಗಿ 24 ಸಾವಿರಕ್ಕಿಂತಲೂ ಹೆಚ್ಚು ಜನರು ಭಾಧಿತರಾಗಿದ್ದಾರೆ. ಮಹಾರಾಷ್ಟ್ರದಲ್ಲಿ 70 ಸಾವಿರಕ್ಕಿಂತ ಹೆಚ್ಚು ಜನರು ವೈರಾಣು ದಾಳಿಗೆ ನಲುಗಿದ್ದಾರೆ.
ಜಾಗತಿಕವಾಗಿ ಕೋವಿಡ್ 19 ಸೋಂಕಿತರ ಸಂಖ್ಯೆ 6.4 ಮಿಲಿಯನ್ ದಾಟಿದ್ದು 3,80,000 ಜನರು ಬಲಿಯಾಗಿದ್ದಾರೆ.