Advertisement

ಹಿಂಸೆ, ಭ್ರಷ್ಟರಿಲ್ಲದ ಭಾರತ ಉದಯಕ್ಕೆ ಬದ್ಧ: ಮೋದಿ

07:26 AM Aug 16, 2017 | |

ಹೊಸದಿಲ್ಲಿ: ಸ್ವಾತಂತ್ರ್ಯೋತ್ಸವದ ದಿನವಾದ ಮಂಗಳವಾರ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನವಭಾರತದ ಕನಸಿಗೆ ನೀರೆರೆದಿದ್ದಾರೆ. 2022ರೊಳಗೆ ನವಭಾರತದ ಉದಯಕ್ಕೆ ಬದ್ಧ ಎಂದು ದೇಶದ ಜನತೆಗೆ ಹೊಸ ಆಶ್ವಾಸನೆಯೊಂದನ್ನು ನೀಡಿದ್ದಾರೆ.

Advertisement

ನವಭಾರತದಲ್ಲಿ “ತಂತ್ರದಿಂದ ಲೋಕ ಅಲ್ಲ, ಲೋಕದಿಂದ ತಂತ್ರ ನಡೆಯಲಿದೆ. ಅಂದರೆ, ಎಲ್ಲ ಪ್ರಗ ತಿಯ ಹಿಂದೆಯೂ ಜನರ ಶಕ್ತಿ ಇರ ಲಿದೆ’. ಅದು ಭ್ರಷ್ಟಾಚಾರ ಮುಕ್ತ, ಹಿಂಸೆಮುಕ್ತ ಭಾರತವಾಗಿರಲಿದ್ದು, ಅಲ್ಲಿ ಎಲ್ಲ ಜಾತಿ, ಧರ್ಮದ ಜನರು ಸಮಾನತೆಯಿಂದ, ಸಾಮರಸ್ಯದಿಂದ ಬದುಕುತ್ತಾರೆ ಎಂದರು.

57 ನಿಮಿಷಗಳ ಕಾಲ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ವಿವಿಧ ವಿಷಯಗಳ ಕುರಿತು ವ್ಯಕ್ತಪಡಿ ಸಿದ ಅಭಿಪ್ರಾಯಗಳು ಹೀಗಿವೆ.

ನವಭಾರತ ಹೇಗಿರುತ್ತೆ ಗೊತ್ತಾ?
ಹೊಸ ಭಾರತದಲ್ಲಿ ಬಡವರಿಗೆ ಸ್ವಂತ ಸೂರು, ನೀರು, ವಿದ್ಯುತ್‌ ಸಂಪರ್ಕವಿರುತ್ತದೆ. ರೈತರೆಲ್ಲ ಚಿಂತೆ ಮುಕ್ತರಾಗಿರುತ್ತಾರೆ. ಅವರು ಈಗ ಗಳಿಸುತ್ತಿರುವ ಆದಾಯದ ಎರಡು ಪಟ್ಟು ಗಳಿಸುತ್ತಿರು ತ್ತಾರೆ. ಯುವಕರು ಮತ್ತು ಮಹಿಳೆಯರಿಗೆ ತಮ್ಮ ಕನಸುಗಳನ್ನು ಈಡೇರಿಸಲು ಸಾಕಷ್ಟು ಅವಕಾಶಗಳಿರುತ್ತವೆ. ಅಷ್ಟೇ ಅಲ್ಲ. ಭಾರತವು ಭಯೋತ್ಪಾದನೆ, ಹಿಂಸೆ, ಜಾತಿವಾದ, ಕೋಮುವಾದ, ಭ್ರಷ್ಟಾಚಾರದಿಂದ ಮುಕ್ತವಾಗಿರುತ್ತದೆ. ಸ್ವತ್ಛ ಮತ್ತು ಆರೋಗ್ಯವಂತ ದೇಶವಾಗಿರುತ್ತದೆ.

18 ಲಕ್ಷ ಮಂದಿ ಮೇಲೆ ನಿಗಾ
ಐನೂರು ಮತ್ತು ಸಾವಿರ ರೂ. ನೋಟುಗಳ ಅಪಮೌಲ್ಯದ ಬಳಿಕ ದೇಶದ ಬ್ಯಾಂಕಿಂಗ್‌ ವ್ಯವಸ್ಥೆಗೆ ಬರೋಬ್ಬರಿ 3 ಲಕ್ಷ ಕೋಟಿ ರೂ.ಗಳು ಬಂದಿವೆ. ಆ ಪೈಕಿ 1.75 ಲಕ್ಷ ಕೋಟಿ ಕಪ್ಪುಹಣವು ಬಂದಿದೆ. ಆದಾಯಕ್ಕಿಂತ ಹೆಚ್ಚು ಹಣ ಠೇವಣಿ ಇಟ್ಟಿರುವ 18 ಲಕ್ಷ ಮಂದಿಯ ಮೇಲೆ ನಿಗಾ ಇಡಲಾಗಿದೆ. ಒಟ್ಟಿನಲ್ಲಿ ನೋಟು ಅಪಮೌಲ್ಯವು ಕಪ್ಪುಹಣದ ಉತ್ಪತ್ತಿಗೂ ತಡೆಯೊಡ್ಡಿದೆ. ಅಪಮೌಲ್ಯದ ಪರಿಣಾಮ 3 ಲಕ್ಷ ಶೆಲ್‌ ಕಂಪೆನಿಗಳು ಪತ್ತೆಯಾಗಿವೆ. ಆದಾಯ ತೆರಿಗೆದಾರರ ಸಂಖ್ಯೆ ದುಪ್ಪಟ್ಟಾ ಗಿದೆ. ಕೆಲವೇ ಸಮಯದಲ್ಲಿ ಸರಕಾರವು 800 ಕೋ. ರೂ.ಗೂ ಹೆಚ್ಚು ಮೌಲ್ಯದ ಬೇನಾಮಿ ಆಸ್ತಿಯನ್ನು ಜಪ್ತಿ ಮಾಡಿಕೊಂಡಿದೆ.

Advertisement

ಸಂಕಷ್ಟದ ಸಂದರ್ಭ ದೇಶವೇ ಜತೆಗಿದೆ
ಉತ್ತರಪ್ರದೇಶದ ಸರಕಾರಿ ಸ್ವಾಮ್ಯದ ಆಸ್ಪತ್ರೆಯಲ್ಲಿ ಮೃತಪಟ್ಟ ಮಕ್ಕಳ ಕುಟುಂಬ ಸದಸ್ಯರ ಜತೆ ಇಡೀ ದೇಶವೇ ಇದೆ. ಅವರಿಗೆ ಎಲ್ಲ ರೀತಿಯ ನೆರವನ್ನು ನೀಡಲಾಗುವುದು. ಇದೇ ವೇಳೆ ಪ್ರಾಕೃತಿಕ ವಿಕೋಪವೂ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಂಥ ಸಂಕಷ್ಟದ ಸ್ಥಿತಿಯಲ್ಲಿ ನಿಮ್ಮೊಂದಿಗೆ ನಾವಿರುತ್ತೇವೆ.

ಭಾರತವ ಒಟ್ಟುಗೂಡಿಸಿ
ಭಕ್ತಿಯ ಹೆಸರಲ್ಲಿ ನಡೆಯುವ ಹಿಂಸೆಯನ್ನು ಸಹಿಸಲಾಗದು. ಜಾತಿವಾದ ಮತ್ತು ಕೋಮುವಾದ ಎಂಬುದು ದೇಶಕ್ಕೆ ವಿಷವಿದ್ದಂತೆ.ಅವುಗಳಿಂದ ದೇಶಕ್ಕೆ ಯಾವ ರೀತಿಯಿಂದಲೂ ಒಳ್ಳೆಯದಾಗುವುದಿಲ್ಲ. ಸ್ವಾತಂತ್ರ್ಯ ಸಂಗ್ರಾಮದ ವೇಳೆ ಹೇಗೆ “ಭಾರತ ಬಿಟ್ಟು ತೊಲಗಿ’ (ಭಾರತ್‌ ಛೋಡೋ) ಎಂಬ ಉದ್ಘೋಷವಿತ್ತೋ, ಅದೇ ರೀತಿ ಈಗ “ಭಾರತವ ಒಟ್ಟುಗೂಡಿಸಿ’ (ಭಾರತ್‌ ಜೋಡೋ) ಎಂಬ ಘೋಷಣೆ ಮೊಳಗಬೇಕು. ಇದು ಮಹಾತ್ಮಾ ಗಾಂಧಿ ಹಾಗೂ ಬುದ್ಧ ಹುಟ್ಟಿದ ನಾಡು. ಅಭಿವೃದ್ಧಿಯ ಪಥದಲ್ಲಿ ಎಲ್ಲರೂ ಒಂದಾಗಿ ನಡೆಯಬೇಕು ಎನ್ನುವುದೇ ದೇಶದ ಸಂಸ್ಕೃತಿ.

ಕಾಶ್ಮೀರ ಮತ್ತೆ  ಸ್ವರ್ಗ
ಕಾಶ್ಮೀರ ವಿವಾದವನ್ನು ಬುಲೆಟ್‌ನಿಂದ ಪರಿಹರಿಸಲು ಸಾಧ್ಯವಿಲ್ಲ. ಎಲ್ಲ ಕಾಶ್ಮೀರಿಯರನ್ನು ನಾವು ನಮ್ಮವರೆಂದು ಸ್ವೀಕರಿಸಬೇಕು. ಕಾಶ್ಮೀರಿ ಯುವಕರು ಗನ್‌ಗಳನ್ನು ಬಿಟ್ಟು ಮುಖ್ಯವಾಹಿನಿಗೆ ಬರಬೇಕು. ಕೆಲವು ಪ್ರತ್ಯೇಕತಾವಾದಿಗಳು ರಾಜ್ಯದಲ್ಲಿ ಸಮಸ್ಯೆ ಸೃಷ್ಟಿಸಲು ವಿವಿಧ ತಂತ್ರಗಳನ್ನು ಹೂಡುತ್ತಿದ್ದಾರೆ. ಆದರೆ ನಾವು ಕಾಶ್ಮೀರವನ್ನು ಮತ್ತೆ ಭೂಲೋಕದ ಸ್ವರ್ಗವನ್ನಾಗಿ ಮಾರ್ಪಡಿಸಲು ಬದ್ಧರಾಗಿದ್ದೇವೆ. 

ಗಡಿ ರಕ್ಷಣೆಗೆ ದೇಶ ಸಮರ್ಥ
ಸಮುದ್ರದಲ್ಲಾಗಲಿ, ಗಡಿಯಲ್ಲಾಗಲಿ ಎಂತಹ ಸಂದಿಗ್ಧ ಸ್ಥಿತಿಯನ್ನೂ ಎದುರಿಸಲು ಭಾರತವು ಸಮರ್ಥವಾಗಿದೆ. ನಮ್ಮ ಸರಕಾರಕ್ಕೆ ದೇಶದ ಭದ್ರತೆಯೇ ಆದ್ಯತೆ. ಕಳೆದ ವರ್ಷದ ಸರ್ಜಿಕಲ್‌ ದಾಳಿಯು ಇಡೀ ಜಗತ್ತಿಗೇ ಭಾರತದ ಸಾಮರ್ಥ್ಯವನ್ನು ತೋರಿಸಿಕೊಟ್ಟಿದೆ. ನಮ್ಮ ಸೇನೆ, ನಮ್ಮ ವೀರರು, ಸಮವಸ್ತ್ರ  ಧರಿಸಿರುವ ಯೋಧರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಲು ಸಿದ್ಧರಿದ್ದಾರೆ. ಎಡಪಂಥೀಯ ಪ್ರತ್ಯೇಕತಾವಾದ, ಭಯೋತ್ಪಾದನೆ, ಒಳನುಸುಳುವಿಕೆ ಹಾಗೂ ದೇಶದೊಳಗೆ ಸಮಸ್ಯೆ ತಂದೊಡ್ಡುವವರನ್ನು ಸದೆಬಡಿಯಲು ಸಮವಸ್ತ್ರಧಾರಿ ಯೋಧರು ಸನ್ನದ್ಧರಾಗಿದ್ದಾರೆ. 

ಜಿಎಸ್‌ಟಿ: ದಕ್ಷತೆ ಹೆಚ್ಚಳ
ಜಿಎಸ್‌ಟಿಯಿಂದಾಗಿ ಅಂತಾರಾಜ್ಯ ಚೆಕ್‌ ಪೋಸ್ಟ್‌ಗಳು ಇಲ್ಲವಾಗಿದ್ದು, ಸರಕುಗಳ ಸಾಗಣೆಗೆ ಬೇಕಿದ್ದ ಸಮಯವನ್ನು ಶೇ.30ರಷ್ಟು ಕಡಿಮೆ ಮಾಡಿದೆ. ಇದರಿಂದ ಕೋಟ್ಯಂತರ ರೂ. ಉಳಿತಾಯವಾಗಿದೆ. ಜುಲೈಯಿಂದ ಇದರ ಸುಗಮ ಜಾರಿಯು ವಹಿವಾಟುಗಳ ದಕ್ಷತೆ ಹೆಚ್ಚಿಸಿದೆ. ಕೇಂದ್ರ-ರಾಜ್ಯಗಳ ನಡುವೆ ಸಹಕಾರವಿದ್ದರೆ ಎಂಥದ್ದನ್ನು ಬೇಕಿದ್ದರೂ ಸಾಧಿಸಬಹುದು ಎಂಬುದನ್ನು ಇದು ತೋರಿಸಿಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next