Advertisement

ಒಲಿಂಪಿಕ್ಸ್‌ ಅರ್ಹತೆಗೆ ಭಾರತದ ಪ್ರಯತ್ನ

12:02 AM Jun 06, 2019 | Team Udayavani |

ಭುವನೇಶ್ವರ: ಎಫ್ಐಎಚ್‌ ಸಿರೀಸ್‌ ಫೈನಲ್ಸ್‌ ಗುರುವಾರದಿಂದ ಇಲ್ಲಿ ಆರಂಭವಾಗಲಿದ್ದು, 8 ಬಾರಿಯ ಚಾಂಪಿಯನ್‌ ಭಾರತವು 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ತನ್ನ ಪ್ರಯತ್ನ ಆರಂಭಿಸಲಿದೆ.

Advertisement

ಏಶ್ಯ, ಯುರೋಪ್‌, ಆಫ್ರಿಕಾ ಮತ್ತು ಉತ್ತರ ಅಮೆರಿಕದ ಒಟ್ಟು 8 ತಂಡಗಳು ಈ ಕೂಟದಲ್ಲಿ ಲಭ್ಯವಿರುವ 2 ಒಲಿಂಪಿಕ್ಸ್‌ ಅರ್ಹತೆ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಸುವ ಸಾಧ್ಯತೆಯಿದೆ.

ಅಗ್ರ ಶ್ರೇಯಾಂಕದ ಭಾರತವಲ್ಲದೇ “ಎ’ ಬಣದಲ್ಲಿ ಪೋಲೆಂಡ್‌, ರಶ್ಯ ಮತ್ತು ಉಜ್ಬೆಕಿಸ್ಥಾನ ತಂಡಗಳಿದ್ದರೆ “ಬಿ’ ಬಣದಲ್ಲಿ ದಕ್ಷಿಣ ಆಫ್ರಿಕಾ, ಏಶ್ಯನ್‌ ಗೇಮ್ಸ್‌ ಚಾಂಪಿಯನ್‌ ಜಪಾನ್‌, ಅಮೆರಿಕ ಮತ್ತು ಮೆಕ್ಸಿಕೊ ತಂಡಗಳಿವೆ.

ಭಾರತ ಫೇವರಿಟ್‌
ವಿಶ್ವ ರ್‍ಯಾಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿರುವ ಭಾರತವೇ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡವಾಗಿದೆ. ಆಟದ ಗುಣಮಟ್ಟ, ತಂತ್ರ ಮತ್ತು ವಿಶ್ವ ಹಾಕಿಯಲ್ಲಿನ ಸ್ಥಾನಮಾನವನ್ನು ಗಮನಿಸಿದರೆ ಭಾರತವು ಉಳಿದ ತಂಡಗಳಿಗಿಂತ ಉನ್ನತ ಮಟ್ಟದಲ್ಲಿದೆ. ರ್‍ಯಾಂಕಿಂಗ್‌ ಅನ್ನು ಗಮನಿಸಿದರೆ ದಕ್ಷಿಣ ಆಫ್ರಿಕಾ ಮತ್ತು ಜಪಾನ್‌ ಮುಂದಿನೆರಡು ತೀವ್ರ ಪೈಪೋಟಿ ನೀಡಬಹುದಾದ ತಂಡಗಳಾಗಿವೆ.

ರಶ್ಯ ಮೊದಲ ಎದುರಾಳಿ
ರಶ್ಯ ತಂಡವನ್ನು ಎದುರಿಸುವ ಮೂಲಕ ಭಾರತ ತನ್ನ ಅಭಿಯಾನ ಆರಂಭಿಸಲಿದೆ. ಈ ಪಂದ್ಯವನ್ನು ಭಾರತ ಭಾರೀ ಅಂತರದಿಂದ ಗೆದ್ದೀತೆಂಬ ನಿರೀಕ್ಷೆ ಇದೆ.

Advertisement

ಜಕಾರ್ತಾ ಏಶ್ಯನ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ಒಳ್ಳೆಯ ಅವಕಾಶ ಸಿಕ್ಕಿತ್ತು. ಆದರೆ ಸೆಮಿಫೈನಲ್‌ನಲ್ಲಿ ಮಲೇಶ್ಯಕ್ಕೆ ಶರಣಾದ ಕಾರಣ ಸಾಧ್ಯವಾಗಲಿಲ್ಲ. ಈ ವರ್ಷದ ಅಜ್ಲಾನ್‌ ಶಾ ಕಪ್‌ನಲ್ಲೂ ಭಾರತ ಪ್ರಶಸ್ತಿ ಗೆಲ್ಲಲು ವಿಫ‌ಲವಾಯಿತು. ಫೈನಲ್‌ನಲ್ಲಿ ಅದು ದಕ್ಷಿಣ ಕೊರಿಯಕ್ಕೆ ಶರಣಾಗಿತ್ತು.

ಕೋಚ್‌ಗೆ ಮೊದಲ ಪರೀಕ್ಷೆ
ಎಫ್ಐಎಚ್‌ ಸೀರೀಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಲು ಭಾರತದ ಮೊದಲ ಹೆಜ್ಜೆ. ಮಾತ್ರವಲ್ಲದೇ ಇದು ತಂಡದ ನೂತನ ಕೋಚ್‌ ಆಸ್ಟ್ರೇಲಿ ಯದ ಗ್ರಹಾಂ ರೀಡ್‌ ಅವರಿಗೆ ಮೊದಲ ಪರೀಕ್ಷೆಯೂ ಆಗಲಿದೆ. ಆಸ್ಟ್ರೇಲಿಯನ್‌ ತಂಡದ ಮಾಜಿ ಕೋಚ್‌ ಆಗಿದ್ದ ರೀಡ್‌ ಅವರು ಆಟಗಾರರ ಫಾರ್ಮ್ಗೆ ಹೆಚ್ಚಿನ ಮಹತ್ವ ನೀಡಿದ್ದಾರೆ.

ರೂಪಿಂದರ್‌ ಪಾಲ್‌ ಸಿಂಗ್‌ ಅವರನ್ನು ತಂಡ ಕೈಬಿಟ್ಟಿದೆ. ಅವರ ಬದಲು ಕೋಚ್‌ ಹರ್ಮನ್‌ಪ್ರೀತ್‌ ಸಿಂಗ್‌, ವರುಣ್‌ ಕುಮಾರ್‌ ಮತ್ತು ಅಮಿತ್‌ ರೋಹಿದಾಸ್‌ ಅವರ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next