ಮುಂಬೈ: ಇತ್ತೀಚೆಗೆ ನಡೆದ ಟಿ20 ವಿಶ್ವಕಪ್ ನ ಭಾರತ ಮತ್ತು ಪಾಕಿಸ್ಥಾನ ನಡುವಿನ ಪಂದ್ಯದಲ್ಲಿ ಭಾರತೀಯ ಆಟಗಾರರು ಪಂದ್ಯದ ಆರಂಭಕ್ಕೂ ಮುನ್ನವೇ ಹೆದರಿದ್ದರು ಎಂದು ಪಾಕಿಸ್ಥಾನದ ಮಾಜಿ ನಾಯಕ ಇಂಝಮಾಮ್ ಉಲ್ ಹಕ್ ಹೇಳಿದ್ದಾರೆ.
ದುಬೈನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡ ಹತ್ತು ವಿಕೆಟ್ ಅಂತರದಿಂದ ಸೋಲನುಭವಿಸಿತ್ತು. ಇದು ಯಾವುದೇ ಮಾದರಿ ವಿಶ್ವಕಪ್ ನಲ್ಲಿ ಪಾಕಿಸ್ಥಾನ ವಿರುದ್ಧದ ಮೊದಲ ಸೋಲಾಗಿತ್ತು.
ಸಂದರ್ಶನವೊಂದರಲ್ಲಿ ಮಾತನಾಡಿದ ಇಂಝಿ, “ನನ್ನ ಪ್ರಕಾರ ಭಾರತೀಯ ಆಟಗಾರರು ಪಂದ್ಯಕ್ಕೂ ಮೊದಲೇ ಹೆದರಿದ್ದರು. ಟಾಸ್ ವೇಳೆ ವಿರಾಟ್ ಮತ್ತು ಬಾಬರ್ ಅಜಂ ಬಾಡಿ ಲಾಂಗ್ವೇಜ್ ಗಮನಿಸಿದಾಗ ಯಾರು ಒತ್ತಡದಲ್ಲಿದ್ದರು ಎಂದು ಗೊತ್ತಾಗುತ್ತಿತ್ತು” ಎಂದಿದ್ದಾರೆ.
ಇದನ್ನೂ ಓದಿ:ಮಾನಸಿಕ ಆರೋಗ್ಯ ಸುಧಾರಣೆಗಾಗಿ ಅನಿರ್ದಿಷ್ಟಾವಧಿ ವಿಶ್ರಾಂತಿ ಮೊರೆ ಹೋದ ಟಿಮ್ ಪೇನ್
“ನಮ್ಮ ಆಟಗಾರರ ಬಾಡಿ ಲಾಂಗ್ವೇಜ್ ಅಂದು ಭಾರತೀಯರಿಗಿಂತ ಉತ್ತಮವಾಗಿತ್ತು. ರೋಹಿತ್ ಔಟಾದ ಮೇಲೆ ಅವರು ಒತ್ತಡಕ್ಕೆ ಸಿಲುಕಿದ್ದಲ್ಲ, ಸ್ವತಃ ರೋಹಿತ್ ಶರ್ಮಾ ಕೂಡಾ ಅಂದು ಒತ್ತಡದಲ್ಲಿದ್ದರು. ಇದರಿಂದ ಭಾರತೀಯ ಆಟಗಾರರು ಪಂದ್ಯ ಆರಂಭವಾಗುವ ಮೊದಲೇ ಒತ್ತಡಕ್ಕೆ ಒಳಗಾಗಿದ್ದರು ಎಂದು ಗೊತ್ತಾಗುತ್ತದೆ” ಎಂದು ಪಾಕಿಸ್ಥಾನದ ಮಾಜಿ ನಾಯಕ ಹೇಳಿದರು.
“ಭಾರತೀಯರು ಉತ್ತಮ ಟಿ20 ತಂಡ ಹೊಂದಿದ್ದಾರೆ. ಅದರಲ್ಲಿ ಯಾವುದೇ ಅನುಮಾನಿಲ್ಲ. ಕಳೆದ ಎರಡು- ಮೂರು ವರ್ಷದ ಪ್ರದರ್ಶನಗಳನ್ನು ಗಮನಿಸಿದರೆ ಅವರು ಫೆವರೇಟ್ ಆಗಿದ್ದರು” ಎಂದು ಇಂಝಮಾಮ್ ಉಲ್ ಹಕ್ ಹೇಳಿದ್ದಾರೆ.