ಜ್ಯುರಿಚ್: ಸ್ವಿಜರ್ಲೆಂಡಿನಲ್ಲಿರುವ ಬ್ಯಾಂಕ್ ಗಳಲ್ಲಿ ಭಾರತೀಯರು ಹಾಗೂ ಭಾರತೀಯ ಮೂಲದ ಸಂಸ್ಥೆಗಳು ಇಟ್ಟಿರುವ ಹಣದ ಮೊತ್ತ 2021ರಲ್ಲಿ ಬರೋಬ್ಬರಿ 3.83 ಬಿಲಿಯನ್ ಸ್ವಿಸ್ ಫ್ರಾಂಕ್ ಗಳಿಗೆ (ಅಂದಾಜು 30,500 ಕೋಟಿಗೂ ಅಧಿಕ) ಏರಿಕೆಯಾಗಿದ್ದು, ಇದು ಕಳೆದ 14 ವರ್ಷಗಳಲ್ಲಿನ ಗರಿಷ್ಠ ಪ್ರಮಾಣದ್ದಾಗಿದೆ ಎಂದು ಸ್ವಿಸ್ ಬ್ಯಾಂಕ್ ನ ವಾರ್ಷಿಕ ವರದಿ ತಿಳಿಸಿದೆ.
ಇದನ್ನೂ ಓದಿ:ಚಾರ್ಲಿ ಎಂಬ ಬೂಸ್ಟರ್ ಡೋಸ್: ಮತ್ತೆ ಥಿಯೇಟರ್‌ನತ್ತ ಜನ ಜನ ಕಾಂಚಾಣ
ಸ್ವಿಸ್ ಬ್ಯಾಂಕ್ ಗ್ರಾಹಕರ ಠೇವಣಿ ಮೊತ್ತ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿರುವುದಾಗಿ ಸ್ವಿಸ್ ಸೆಂಟ್ರಲ್ ಬ್ಯಾಂಕ್ ವರದಿ ವಿವರಿಸಿದೆ. 2020ರ ಅಂತ್ಯದ ವೇಳೆ ಭಾರತೀಯ ಗ್ರಾಹಕರು ಸ್ವಿಸ್ ಬ್ಯಾಂಕ್ ನಲ್ಲಿ ಇರಿಸಿದ ಠೇವಣಿ ಮೊತ್ತ 20,700 ಕೋಟಿಯಷ್ಟಿತ್ತು. ಸತತ ಎರಡು ವರ್ಷಗಳಿಂದ ಸ್ವಿಸ್ ಬ್ಯಾಂಕ್ ನಲ್ಲಿನ ಠೇವಣಿ ಮೊತ್ತ ಹೆಚ್ಚಳವಾಗುತ್ತಿದೆ.
ಇದಲ್ಲದೇ ಭಾರತೀಯ ಗ್ರಾಹಕರ ಉಳಿತಾಯ ಅಥವಾ ಠೇವಣಿ ಖಾತೆಯಲ್ಲಿರುವ ಮೊತ್ತವು ಏಳು ವರ್ಷಗಳಲ್ಲಿ ಗರಿಷ್ಠ ಮೊತ್ತವಾದ 4,800 ಕೋಟಿ ರೂಪಾಯಿಗೆ ಏರಿಕೆಯಾಗಿದೆ. 2006ರಲ್ಲಿ ಸ್ವಿಸ್ ಖಾತೆಯಲ್ಲಿ ಭಾರತೀಯರ ಹಣದ ಮೊತ್ತ 50,000 ಕೋಟಿ ರೂಪಾಯಿಯಷ್ಟಿತ್ತು.
15.61 ಸಾವಿರ ಕೋಟಿ ರೂಪಾಯಿಗಳಷ್ಟು ಮೌಲ್ಯದ ಬಾಂಡ್, ಭದ್ರತೆಗಳನ್ನು ಭಾರತೀಯ ಗ್ರಾಹಕರ ಹೆಸರಿನಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿ ಇಡಲಾಗಿದೆ. 2019ರಲ್ಲಿ ಠೇವಣಿ, ಭದ್ರತೆ ಸೇರಿದಂತೆ ಹಣದ ಮೊತ್ತ ಕುಸಿದಿದ್ದರೂ ಕೂಡಾ, 2020ರಲ್ಲಿ ಗ್ರಾಹಕರ ಠೇವಣಿ ಮೊತ್ತದಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿತ್ತು. ಆದರೆ 2021ರಲ್ಲಿ ಭಾರೀ ಪ್ರಮಾಣದ ಏರಿಕೆಯಾಗಿರುವುದಾಗಿ ವರದಿ ವಿವರಿಸಿದೆ.
ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರು ಇಟ್ಟಿರುವ ಠೇವಣಿ ಹಣವನ್ನು ಕಪ್ಪು ಹಣ ಎಂಬಂತೆ ಬಿಂಬಿಸಬಾರದು ಎಂದು ಸ್ವಿಸ್ ಬ್ಯಾಂಕ್ ವರದಿಯಲ್ಲಿ ತಿಳಿಸಿದೆ. ಭಾರತೀಯರು, ಅನಿವಾಸಿ ಭಾರತೀಯರು ಬೇರೆ ದೇಶಗಳ ಮೂಲಕ ಸ್ವಿಸ್ ಬ್ಯಾಂಕ್ ಗಳಲ್ಲಿ ಇರಿಸಿರುವ ಠೇವಣಿ ಮೊತ್ತ ಇದರಲ್ಲಿ ಸೇರ್ಪಡೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದೆ.