Advertisement

ಈಜು, ಕುಸ್ತಿಯಲ್ಲಿ ಭಾರತೀಯರ ಪ್ರಾಬಲ್ಯ

10:09 AM Dec 09, 2019 | sudhir |

ಕಾಠ್ಮಂಡು: ಈಜು ಮತ್ತು ಕುಸ್ತಿಪಟುಗಳ ಅಮೋಘ ನಿರ್ವಹಣೆಯಿಂದ ಭಾರತವು ಸೌತ್‌ ಏಶ್ಯನ್‌ ಗೇಮ್ಸ್‌ನಲ್ಲಿ ಭಾರೀ ಪ್ರಮಾಣದಲ್ಲಿ ಪದಕಗಳನ್ನು ಗೆಲ್ಲುತ್ತಿದೆ. ಆರನೇ ದಿನ ಭಾರತೀಯ ಆಟಗಾರರು 29 ಚಿನ್ನ ಸಹಿತ 49 ಪದಕ ಗೆದ್ದುಕೊಂಡಿದ್ದಾರೆ.

Advertisement

ಈಜು ಮತ್ತು ಕುಸ್ತಿ ಪಟುಗಳ ಗಮನಾರ್ಹ ನಿರ್ವಹಣೆ ಯಿಂದಾಗಿ ಭಾರತ ಪದಕಪಟ್ಟಿಯಲ್ಲಿ ಅಗ್ರಸ್ಥಾ ನಕ್ಕೇರಿದೆ. 110 ಚಿನ್ನ, 69 ಬೆಳ್ಳಿ ಸಹಿತ ಒಟ್ಟು 214 ಪದಕ ಗೆದ್ದಿರುವ ಭಾರತ ಆತಿಥೇಯ ನೇಪಾಲವನ್ನು ದ್ವಿತೀಯ ಸ್ಥಾನಕ್ಕೆ ತಳ್ಳಿದೆ. 43 ಚಿನ್ನ ಸಹಿತ 142 ಪದಕ ಗೆದ್ದಿರುವ ನೇಪಾಲ ದ್ವಿತೀಯ ಮತ್ತು ಲಂಕಾ (170 ಪದಕ) 3ನೇ ಸ್ಥಾನದಲ್ಲಿದೆ. ಇನ್ನು ಮೂರು ದಿನದ ಸ್ಪರ್ಧೆಗಳು ಬಾಕಿ ಉಳಿದಿವೆೆ.

ಈಜಿನಲ್ಲಿ ಪ್ರಾಬಲ್ಯ
ಈಜುಕೊಳದಲ್ಲಿ ಭಾರತೀಯ ಈಜುತಾರೆಯರು ಪ್ರಾಬಲ್ಯ ಮೆರೆದಿದ್ದಾರೆ. 7 ಚಿನ್ನ ಗೆದ್ದು ಸಂಭ್ರಮಿಸಿದ್ದಾರೆ. ಶ್ರೀಹರಿ ನಟರಾಜ್‌, ರಿಚಾ ಮಿಶ್ರಾ, ಶಿವಾ, ಮಾನ ಪಟೇಲ್‌, ಚಹತ್‌ ಅರೋರ, ಲಿಕಿತ್‌, ರುಜುತಾ ಭಟ್‌ ಚಿನ್ನ ಗೆದ್ದ ಈಜುಪಟುಗಳಾಗಿದ್ದಾರೆ. ಜಯವೀಣ ಮತ್ತು ರಿಧಿಮಾ ವೀರೇಂದ್ರ ಬೆಳ್ಳಿ ಜಯಿಸಿದ್ದಾರೆ. ಈಜು ಸ್ಪರ್ಧೆ ಯ ಎರಡು ದಿನ ಭಾರತ ಒಟ್ಟು 30 ಪದಕ ಜಯಿಸಿದೆ.

ಕುಸ್ತಿಪಟುಗಳು ಕೂಡ ಉತ್ತಮ ನಿರ್ವಹಣೆ ನೀಡಿ ಗಮನ ಸೆಳೆದಿದ್ದಾರೆ. ಸತ್ಯವರ್ತ್‌ ಕದಿಯನ್‌, ಸುಮಿತ್‌ ಮಲಿಕ್‌, ಗುರ್ಶನ್‌ಪ್ರೀತ್‌ ಕೌರ್‌ ಮತ್ತು ಸರಿತಾ ಮೋರ್‌ ತಮ್ಮ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. ಕಾಮನ್‌ವೆಲ್ತ್‌ ಗೇಮ್ಸ್‌ ಬೆಳ್ಳಿ ವಿಜೇತ ಕದಿಯನ್‌ ತನ್ನ ಎದುರಾಳಿ ಪಾಕಿಸ್ಥಾನದ ತಬಿಯರ್‌ ಖಾನ್‌ ಅವರನ್ನು ಸುಲಭವಾಗಿ ನೆಲಕ್ಕುರುಳಿಸಿ ಚಿನ್ನ ಪಡೆದರು.
ಶೂಟಿಂಗ್‌ನಲ್ಲೂ ಭಾರತೀಯ ಶೂಟರ್‌ಗಳು ಗಮನಾರ್ಹ ನಿರ್ವಹಣೆ ನೀಡಿ ಮೂರು ಚಿನ್ನ ಗೆದ್ದರು. ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಎರಡು ಚಿನ್ನ ಬಂದಿದೆ.

ಮಾಲ್ದೀವ್ಸ್‌ 8 ರನ್ನಿಗೆ ಆಲೌಟ್‌
ಕಾಠ್ಮಂಡು: ಸೌತ್‌ ಏಶ್ಯನ್‌ ಗೇಮ್ಸ್‌ನ ವನಿತಾ ಕ್ರಿಕೆಟ್‌ ಪಂದ್ಯದಲ್ಲಿ ಮಾಲ್ದೀವ್ಸ್‌ ತಂಡ ಕೇವಲ 8 ರನ್ನಿಗೆ ಆಲೌಟಾಗಿದೆ. ಇದಕ್ಕುತ್ತರವಾಗಿ ನೇಪಾಲ ಕೇವಲ 7 ಎಸೆತಗಳಲ್ಲಿ ಯಾವುದೇ ವಿಕೆಟ್‌ ಕಳೆದುಕೊಳ್ಳದೇ ಜಯಭೇರಿ ಬಾರಿಸಿತು. ಇದು ಟಿ20 ಇತಿಹಾಸದ ನಾಲ್ಕನೇ ಅತೀವೇಗದ ಚೇಸ್‌ ಗೆಲುವು ಆಗಿದೆ.

Advertisement

ಮಾಲ್ದೀವ್ಸ್‌ ತಂಡದ 9 ಮಂದಿ ಆಟಗಾರ್ತಿಯರು ಶೂನ್ಯಕ್ಕೆ ಔಟಾಗಿದ್ದರು. ಆರಂಭಿಕ ಆಟಗಾರ್ತಿ ಐಮಾ ಅಶಥ್‌ 12 ಎಸೆತ ಎದುರಿಸಿ 1 ರನ್‌ ಗಳಿಸಿದರು. ಉಳಿದ ಏಳು ರನ್‌ ಇತರ ರನ್‌ ಮೂಲಕ ಬಂದಿತ್ತು. ಹೀಗಾಗಿ ಮಾಲ್ದೀವ್ಸ್‌ 8 ರನ್ನಿಗೆ ಆಲೌಟಾಯಿತು.

Advertisement

Udayavani is now on Telegram. Click here to join our channel and stay updated with the latest news.

Next