Advertisement

ಗಲ್ಫ್ ದೇಶಗಳಲ್ಲಿ ದಿನಕ್ಕೆ 10 ಭಾರತೀಯರ ಸಾವು

09:17 AM Nov 09, 2018 | |

ಸುಮಾರು ನಾಲ್ಕು ತಿಂಗಳ ಹಿಂದೆ ಗಲ್ಫ್ ದೇಶದಲ್ಲಿ ನರ್ಸ್‌ ಆಗಿ ದುಡಿಯುತ್ತಿದ್ದ ಉಡುಪಿ ಸಮೀಪದ ಶಿರ್ವದ ಹೆಝೆಲ್‌ ಎಂಬ ಮಹಿಳೆ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದರು. ಆ ದೇಶದ ಪ್ರಜೆಯೊಬ್ಬ ನೀಡಿದ ಕಿರುಕುಳದಿಂದ ಬೇಸತ್ತು ಹೆಝೆಲ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಯಿತಾದರೂ ಅದು ಎಷ್ಟು ನಂಬಿಕಾರ್ಹ ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಹೆಝೆಲ್‌ ಮೃತದೇಹ ಹುಟ್ಟೂರಿಗೆ ಬರಲು ಎರಡು ತಿಂಗಳೇ ಬೇಕಾಯಿತು. ಇದು ಗಲ್ಫ್ ದೇಶಗಳಲ್ಲಿ ದುಡಿಯುತ್ತಿರುವ ಭಾರತೀಯರ ಸ್ಥಿತಿ ಹೇಗಿದೆ ಎನ್ನುವುದನ್ನು ತಿಳಿಸುವ ಒಂದು ಉದಾಹರಣೆ ಮಾತ್ರ. ಇಂಥ ಸಾವುಗಳು ಅಲ್ಲಿ ನಿತ್ಯ ಸಂಭವಿಸುತ್ತಿರುತ್ತವೆ ಎನ್ನುವುದನ್ನು ಆರ್‌ಟಿಐ ಮಾಹಿತಿಯೊಂದು ಬಹಿರಂಗಗೊಳಿಸಿದೆ. 

Advertisement

ಗಲ್ಫ್ ದೇಶಗಳಲ್ಲಿ ಸರಾಸರಿ ದಿನಕ್ಕೆ 10 ಭಾರತೀಯರು ಸಾವನ್ನಪ್ಪುತ್ತಿದ್ದಾರೆ ಎಂಬ ಮಾಹಿತಿಯನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವೇ ಆರ್‌ಟಿಐ ಮೂಲಕ ಕೇಳಿದ ಪ್ರಶ್ನೆಯೊಂದಕ್ಕೆ ನೀಡಿದ ಉತ್ತರದಲ್ಲಿ ತಿಳಿಸಿದೆ.ಇದು ಆಘಾತಕಾರಿ ಮಾತ್ರವಲ್ಲದೆ ಕಳವಳಕಾರಿಯಾದ ಅಂಕಿಅಂಶ. ಉತ್ತಮ ನೌಕರಿ, ಕೈತುಂಬ ಸಂಬಳದ ಕನಸು ಹೊತ್ತುಕೊಂಡು ಗಲ್ಫ್ ದೇಶಕ್ಕೆ ಹೋಗುವ ಕಾರ್ಮಿಕರು ಅನುಭವಿಸುತ್ತಿರುವ ಬವಣೆ ಏನು ಎನ್ನುವುದನ್ನು ಈ ವರದಿ ಬಹಿರಂಗಗೊಳಿಸಿದೆ. ಒಟ್ಟಾರೆಯಾಗಿ ವಿದೇಶಗಳಲ್ಲಿ ಪ್ರತಿ ವರ್ಷ 8000ಕ್ಕೂ ಅಧಿಕ ಭಾರತೀಯ ಕಾರ್ಮಿಕರು ಸಾವಿಗೀಡಾಗುತ್ತಿದ್ದಾರೆ. ಈ ಪೈಕಿ ಗಲ್ಫ್ನ ಆರು ದೇಶಗಳಲ್ಲೇ 3000ಕ್ಕೂ ಹೆಚ್ಚು ಮಂದಿ ಸಾಯುತ್ತಿದ್ದಾರೆ ಎನ್ನುತ್ತಿದೆ ಈ ವರದಿ. 

ಸುಮಾರು 85 ಲಕ್ಷ ಭಾರತೀಯರು ಗಲ್ಫ್ ದೇಶಗಳಲ್ಲಿದ್ದಾರೆ. ಈ ಪೈಕಿ ಕೌಶಲ ರಹಿತ ಮತ್ತು ಅರೆ ಕೌಶಲ ಕಾರ್ಮಿಕರೇ ಅಧಿಕ. ಇವರು ಕಳುಹಿಸುವ ಹಣ ನಮ್ಮ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ಕೇರಳ, ತೆಲಂಗಾಣದಂತಹ ಕೆಲವು ರಾಜ್ಯಗಳಲ್ಲಿ ಸಾವಿರಾರು ಕುಟುಂಬಗಳು ಗಲ್ಫ್ನಿಂದ ಬರುವ ಹಣವನ್ನು ನಂಬಿಕೊಂಡೇ ಬದುಕುತ್ತಿವೆ. ಇದರ ಹೊರತಾಗಿಯೂ ಗಲ್ಫ್ ದೇಶಗಳಲ್ಲಿರುವ ಭಾರತೀಯ ಕಾರ್ಮಿಕರು ಅತ್ಯಂತ ದಯನೀಯವಾಗಿ ಬದುಕುತ್ತಿದ್ದಾರೆ.

ಅನ್ಯ ದೇಶಗಳ ಕಾರ್ಮಿಕರಿಗೆ ಅಲ್ಲಿ ಯಾವುದೇ ಮೂಲಭೂತ ಕಾರ್ಮಿಕ ಹಕ್ಕುಗಳು ಅನ್ವಯಿಸುವುದಿಲ್ಲ. ಬಹಳ ಕಠಿಣ ಪರಿಸ್ಥಿತಿಯಲ್ಲಿ ದುಡಿಯಬೇಕಾಗುತ್ತದೆ. ಬಹುತೇಕ ಕಾರ್ಮಿಕರು “ಕಫ‌ಲ’ ಎಂದು ಕರೆಯಲಾಗುವ ಪ್ರಾಯೋಜಿತ ವೀಸಾ ಪಡೆದು ಹೋದವರಾಗಿರುತ್ತಾರೆ. ಪ್ರಾಯೋಜಿತ ವೀಸಾ ಎನ್ನುವುದು ಶೋಷಣೆಯ ಇನ್ನೊಂದು ಹೆಸರು. ಕಫ‌ಲದಲ್ಲಿ ಇತ್ತೀಚೆಗೆ ಕೆಲವು ಸುಧಾರಣೆಗಳು ಆಗಿದ್ದರೂ ಈಗಲೂ ಈ ವೀಸಾದಲ್ಲಿ ಹೋದವರ ವಾಸ್ತವ್ಯ ಪರ್ಮಿಟ್‌ ಪ್ರಾಯೋಜಕನ ಬಳಿಯೇ ಇರುತ್ತದೆ. ನೌಕರಿ ಬದಲಾಯಿಸಬೇಕಾದರೆ ಅಥವಾ ದೇಶ ಬಿಟ್ಟು ಹೋಗಬೇಕಾದರೆ ಪ್ರಾಯೋಜಕನ ಅನುಮತಿ ಬೇಕಾಗುತ್ತದೆ. ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಈ ಪದ್ಧತಿಯನ್ನು ರದ್ದುಪಡಿಸಬೇಕೆಂದು ಹೇಳಿದ್ದರೂ, ಗಲ್ಫ್ ದೇಶಗಳಲ್ಲಿ ಇನ್ನೂ ಮುಂದುವರಿಯುತ್ತಿದೆ. 

ವಿದೇಶಿ ಕಾರ್ಮಿಕರಿಗೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸುವ ಮೂಲಭೂತ ಹಕ್ಕೇ ಅಲ್ಲಿಲ್ಲ. ಕಾನೂನಿನ ರಕ್ಷಣೆ ಮತ್ತು ಮೂಲ ಸೌಕರ್ಯಗಳಿಲ್ಲದೆ ಅತಂತ್ರ ಸ್ಥಿತಿಯಲ್ಲಿ ಅವರು ನೌಕರಿ ಮಾಡಬೇಕಾಗುತ್ತದೆ. ಮಾಲಕರು ಮತ್ತು ನೌಕರಿ ಕೊಡಿಸುವ ಏಜೆನ್ಸಿಗಳ ನಿರಂತರ ಶೋಷಣೆಗೆ ಅವರು ಗುರಿಯಾಗುತ್ತಿರುತ್ತಾರೆ. ಮನೆಗೆಲಸಕ್ಕಾಗಿ ಹೋಗುವ ಮಹಿಳೆಯರ ಸ್ಥಿತಿ ಇದಕ್ಕಿಂತಲೂ ದಯನೀಯವಾಗಿರುತ್ತದೆ. ಅವರಿಗೆ ಯಾವುದೇ ಕಾನೂನು ರಕ್ಷಣೆ ಇರುವುದಿಲ್ಲ. ದಿನವಿಡೀ ದುಡಿತ, ಹೊಟ್ಟೆಬಟ್ಟೆಗೆ ಸಾಕಷ್ಟು ಕೊಡದಿರುವುದು, ಕೂಡಿ ಹಾಕುವುದು, ಮಾನಸಿಕ ಮತ್ತು ದೈಹಿಕ ಕಿರುಕುಳ ಇವುಗಳನ್ನೆಲ್ಲ ಸಹಿಸಿ ಅವರು ದುಡಿಯಬೇಕಾಗುತ್ತದೆ.
ಗಲ್ಫ್ ದೇಶಗಳಲ್ಲಿ ವಿದೇಶಿ ಕಾರ್ಮಿಕರು ಬಹಳ ಶೋಷಣೆಗೊಳಗಾಗುತ್ತಾರೆ ಎನ್ನುವುದನ್ನು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮಗಳ ಇಲಾಖೆಯೂ ಒಪ್ಪಿಕೊಂಡಿದೆ. ದೈಹಿಕ ಮತ್ತು ಮಾನಸಿಕ ಕಿರುಕುಳಗಳಲ್ಲದೆ ವರ್ಣಬೇಧಧವನ್ನೂ ಅನುಸರಿಸಲಾಗುತ್ತಿದೆ ಎಂದು ಈ ಇಲಾಖೆ ಹೇಳಿತ್ತು. ಜಾಗತಿಕವಾಗಿ ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದರೂ ಪರಿಸ್ಥಿತಿಯಲ್ಲಿ ಹೆಚ್ಚೇನೂ ಸುಧಾರಣೆಯಾಗಿಲ್ಲ ಎನ್ನುವುದು ವಿಷಾದಕರ. ಕಾರ್ಮಿಕರ ಶೋಷಣೆಗೆ ಸಂಬಂಧಿಸಿದಂತೆ ಭಾರತ ಸರಕಾರ ಕೈಗೊಂಡ ಕ್ರಮಗಳೂ ಹೆಚ್ಚೇನೂ ತೃಪ್ತಿದಾಯಕವಾಗಿಲ್ಲ. ಗಲ್ಫ್ ದೇಶಗಳ ಜತೆಗೆ ಸಮಗ್ರವಾಗಿ ಸಂವಾದ ನಡೆಸುವ ಮೂಲಕ ಮತ್ತು ಬಹುಸ್ತರೀಯ ಕಾರ್ಯಕ್ರಮಗಳ ಮೂಲಕ ಕಾರ್ಮಿಕರ ಹಿತರÒಣೆ ಮಾಡುವತ್ತ ಸರಕಾರ ಗಮನ ಹರಿಸಬೇಕು. ಅಂತೆಯೇ ಜನರನ್ನು ಶೋಷಿಸುವ ಖಾಸಗಿ ಏಜೆನ್ಸಿಗಳಿಗೆ ಲಗಾಮು ಹಾಕಲು ಕಟ್ಟುನಿಟ್ಟಿನ ನಿಯಮಗಳನ್ನು ರಚಿಸಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.