ಸೋಲ್: ಭಾರತೀಯ ವನಿತಾ ಹಾಕಿ ಆಟಗಾರ್ತಿಯರು ನಾಲ್ಕನೇ ಪಂದ್ಯದಲ್ಲಿ ಮತ್ತೆ ಭರ್ಜರಿ ಆಟವಾಡಿ ತಮಗಿಂತ ಉತ್ತಮ ರ್‍ಯಾಂಕ್ ಹೊಂದಿರುವ ಕೊರಿಯ ಆಟಗಾರ್ತಿಯರನ್ನು 3-1 ಗೋಲುಗಳಿಂದ ಸೋಲಿಸಿದರು. ಈ ಗೆಲುವಿನ ಮೂಲಕ ಭಾರತ ವನಿತಾ ತಂಡ ಐದು ಪಂದ್ಯಗಳ ಸರಣಿಯಲ್ಲಿ 3-1 ಮುನ್ನಡೆ ಸಾಧಿಸಿತು. ಸರಣಿಯ ಅಂತಿಮ ಪಂದ್ಯ ಮಾ. 11ರಂದು ನಡೆಯಲಿದೆ.
ಪಂದ್ಯದ ಮೊದಲ ಕ್ವಾರ್ಟರ್ ಅವಧಿಯಲ್ಲಿ ಗುರ್ಜಿತ್ ಕೌರ್ ಎರಡನೇ ಮತ್ತು ದೀಪಿಕಾ14ನೇ ನಿಮಿಷದಲ್ಲಿ ಗೋಲು ಹೊಡೆದ ಕಾರಣ ಭಾರತ ಪಂದ್ಯದಲ್ಲಿ ಪ್ರಾಬಲ್ಯ ಸ್ಥಾಪಿಸಿತು. ಪೂನಂ ರಾಣಿ 47ನೇ ನಿಮಿಷದಲ್ಲಿ ಭರ್ಜರಿ ಗೋಲು ದಾಖಲಿಸಿ ಭಾರತದ ಮುನ್ನಡೆಯನ್ನು 3-0ಕ್ಕೇರಿಸಿದರು. ಪಂದ್ಯದ ಅಂತಿಮ ಹಂತದಲ್ಲಿ ಕೊರಿಯದ ಮಿ ಹ್ಯುನ್ ಪಾರ್ಕ್ ತಂಡದ ಏಕೈಕ ಗೋಲನ್ನು ಹೊಡೆದರು.
ಪಂದ್ಯ ಆರಂಭವಾಗುತ್ತಲೇ ಭಾರತೀಯ ವನಿತೆಯರು ಕೊರಿಯದ ರಕ್ಷಣಾ ಗೋಡೆ ಮುರಿಯಲು ಮುಂದಾದರು. ಎರಡನೇ ನಿಮಿಷದಲ್ಲಿ ಭಾರತಕ್ಕೆ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಲಭಿಸಿತು. ಗುರ್ಜಿತ್ ಕೌರ್ ಈ ಅವಕಾಶದಲ್ಲಿ ಚೆಂಡನ್ನು ಕೊರಿಯದ ಗೋಲ್‌ಕೀಪರ್ ಹೀಬಿನ್ ಜಂಗ್ ಅವರನ್ನು ವಂಚಿಸಿ ಗೋಲಾಗಿ ಪರಿವರ್ತಿಸಿ ಭಾರತಕ್ಕೆ 1-0 ಮುನ್ನಡೆ ಒದಗಿಸಿದರು. ನಾಲ್ಕನೇ ನಿಮಿಷದಲ್ಲಿ ಕೊರಿಯಕ್ಕೆ ಗೋಲು ಹೊಡೆಯುವ ಅವಕಾಶ ಲಭಿಸಿತ್ತು. ಆದರೆ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಹೊಡೆದ ಚೆಂಡು ಹೊರಗೆ ಹೋಯಿತು. 10ನೇ ನಿಮಿಷದಲ್ಲಿ ಕೊರಿಯಕ್ಕೆ ಇನ್ನೊಂದು ಪೆನಾಲ್ಟಿ ಕಾರ್ನರ್ ಸಿಕ್ಕಿದ್ದರೂ ಭಾರತೀಯ ಗೋಲ್‌ಕೀಪರ್ ಸ್ವಾತಿ ಅದನ್ನು ತಡೆಯಲು ಯಶಸ್ವಿಯಾಗಿದ್ದರು.
ಪಂದ್ಯದ 14ನೇ ನಿಮಿಷದಲ್ಲಿ ಭಾರತಕ್ಕೆ ಮತ್ತೆ ಪೆನಾಲ್ಟಿ ಕಾರ್ನರ್ ಲಭಿಸಿತ್ತು. ಈ ಸಲ ದೀಪಿಕಾ ಅದನ್ನು ಗೋಲಾಗಿ ಪರಿವರ್ತಿಸಿ ಭಾರತಕ್ಕೆ 2-0 ಮುನ್ನಡೆ ಒದಗಿಸಿದರು. ಹೀಗಾಗಿ ಮೊದಲ ಕ್ವಾರ್ಟರ್ ಅವಧಿ ಮುಗಿದಾಗ ಭಾರತ 2-0 ಮುನ್ನ ಡೆಯೊಂದಿಗೆ ಪಂದ್ಯದಲ್ಲಿ ಪ್ರಾಬಲ್ಯ ಸ್ಥಾಪಿಸಿತ್ತು. ದ್ವಿತೀಯ ಕ್ವಾರ್ಟರ್ ಅವಧಿಯಲ್ಲಿ ಎರಡೂ ತಂಡಗಳ ಆಟಗಾರ್ತಿಯರು ಗೋಲ್ ಹೊಡೆಯಲು ಹೋರಾಡಿದರು.