ಹೊಸದಿಲ್ಲಿ : ಭಾರತೀಯ ಮಹಿಳಾ ಕ್ರಿಕೆಟ್ ಕೋಚ್ ಆಗಿ 53ರ ಹರೆಯದ ಮಾಜಿ ಭಾರತೀಯ ಟೆಸ್ಟ್ ಕ್ರಿಕೆಟ್ ಆಟಗಾರ ಡಬ್ಲ್ಯು ವಿ ರಾಮನ್ ಅವರನ್ನು ಆಯ್ಕೆ ಮಾಡಲಾಗಿದೆ.
ಬಿಸಿಸಿಐ ಆಡಳಿತಗಾರರು, ತಮ್ಮೊಳಗೇ ವ್ಯಕ್ತವಾದ ಭಿನ್ನಾಭಿಪ್ರಾಯದ ಹೊರತಾಗಿಯೂ, ದಕ್ಷಿಣ ಆಫ್ರಿಕದ ಸುಪ್ರಿಸಿದ್ಧ ವಿಶ್ವ ದರ್ಜೆಯ ಕ್ರಿಕೆಟಿಗ ಗ್ಯಾರಿ ಕರ್ಸ್ಟನ್ ಗೆ ಬದಲು ರಾಮನ್ ಅವರನ್ನು ಆಯ್ಕೆ ಮಾಡಿದರು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ರಾಮನ್ ಪ್ರಕೃತ ಬೆಂಗಳೂರಿನಲ್ಲಿನ ನ್ಯಾಶನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಬ್ಯಾಟಿಂಗ್ ಸಲಹೆಗಾರರಾಗಿ ದುಡಿಯುತ್ತಿದ್ದಾರೆ.
ಬಿಸಿಸಿಐ ನ ತಾತ್ಕಾಲಿಕ ಆಯ್ಕೆ ಸಮಿತಿಯ ಉನ್ನತ ಆಯ್ಕೆಯೇ ಕರ್ಸ್ಟನ್ ಆಗಿದ್ದರು. ಆದರೆ ಕರ್ಸ್ಟನ್ ಅವರು ಐಪಿಎಲ್ ಫ್ರಾಂಚೈಸಿ ರಾಯಲ್ ಚ್ಯಾಲೆಂಜರ್ ಬೆಂಗಳೂರು ಇದರ ಕೋಚ್ ಹುದ್ದೆಯನ್ನು ಬಿಟ್ಟುಕೊಡಲು ಸಿದ್ಧರಿರಲಿಲ್ಲ. ಆದುದರಿಂದ ರಾಮನ್ ಆಯ್ಕೆ ಗೊಂಡರು ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.
ಬಿಸಿಸಿಐ ಆಯ್ಕೆ ಸಮಿತಿಯು ಮಾಜಿ ನಾಯಕ ಕಪಿಲ್ ದೇವ್, ಅಂಶುಮಾನ್ ಗಾಯಕ್‌ವಾಡ್‌ಮತ್ತು ಶಾಂತಾ ರಂಗಸ್ವಾಮಿ ಅವರನ್ನು ಒಳಗೊಂಡಿದೆ. ಆಯ್ಕೆ ಸಮಿತಿಯ ಮುಂದೆ ಮೂರು ಹೆಸರುಗಳು ಇದ್ದವು. ಅವೆಂದರೆ ಗ್ಯಾರಿ ಕಸ್ಟರ್ನ್, ರಾಮನ್ ಮತ್ತು ವೆಂಕಟೇಶ್ ಪ್ರಸಾದ್.