Advertisement

ಗೆಜ್ಜೆಯ ನಿನಾದ ಬಲು ಮಧುರ; ಕಾಲ್ಗೆಜ್ಜೆಯೆಂದರೆ ಹೆಣ್ಣು ಮಕ್ಕಳಿಗೆ ಅದೇನೋ ಪ್ರೀತಿ

06:30 PM Sep 08, 2020 | Nagendra Trasi |

ಕಾಲ್ಗೆಜ್ಜೆಯೆಂದರೆ ರಮಣಿಯರಿಗೆ ಅದೇನೋ ಪ್ರೀತಿ. ಕೇವಲ ಚಿನ್ನ, ಬೆಳ್ಳಿಗೆ ಸೀಮಿತವಾಗಿದ್ದ ಗೆಜ್ಜೆಗಳು ಈಗ ಪ್ಲಾಸ್ಟಿಕ್‌, ಗಾಜು, ತಾಮ್ರ, ಕಂಚು, ವಜ್ರ, ಮುತ್ತು, ಹವಳ, ರತ್ನ ಹಾಗೂ ಮರದ ತುಂಡಿನಲ್ಲಿಯೂ ಲಭ್ಯ! ದಶಕದ ಹಿಂದೆ ಒಂದೆಳೆಯ ಚಿಕ್ಕ ಸರಪಳಿಯಂತೆ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಗೆಜ್ಜೆ ಇದೀಗ ಹೂವು, ಸೂರ್ಯ, ಚಂದ್ರ, ನಕ್ಷತ್ರದಂಥ ಆಕೃತಿಗಳಲ್ಲಿ ಮತ್ತು ಅಕ್ಷರಗಳು ಹಾಗೂ ಪದಗಳ ಆಕೃತಿಯಲ್ಲೂ ಮೂಡಿ ಬಂದಿದೆ. ವಿನ್ಯಾಸದ ಗೆಜ್ಜೆ ಬೇಕು ಎಂದು ಅಕ್ಕಸಾಲಿಗರಲ್ಲಿ ಹೇಳಿ ಮಾಡಿಸಿಕೊಳ್ಳುತ್ತಾರೆ. ಇಂಥ ಗೆಜ್ಜೆಗಳು ಆನ್‌ಲೈನ್‌ನಲ್ಲೂ ಲಭ್ಯ.

Advertisement

 “ಪೆಟ್‌’ ಗೆಜ್ಜೆ: ನಿಮ್ಮ ಪೆಟ್‌ ನೇಮ್‌, ತಮ್ಮ ಹೆಸರಿನ ಮೊದಲ ಅಕ್ಷರ, ಸಾಕು ಪ್ರಾಣಿಗಳ ಹೆಸರನ್ನೂ ಕಾಲ್ಗೆಜ್ಜೆಗಳಲ್ಲಿ ಮೂಡಿಸಬಹುದು. ಅಲ್ಲದೆ ಇಂಥ ಬ್ರೇಸ್ಲೆಟ್‌ಗಳು ಹೇಗಿದ್ದರೂ ಮಾರುಕಟ್ಟೆಯಲ್ಲಿ ಲಭ್ಯವಿವೆ. ಅವುಗಳನ್ನೇ ಕಾಲಿಗೆ ಹಾಕಿಕೊಂಡರೆ ಆಂಕ್ಲೆಟ್‌ ಆಗುತ್ತವೆ. ಕೈಗೆ ತೊಡುವುದನ್ನೇ  ಕಾಲಿಗೂ ತೊಟ್ಟರಾಯಿತು. ಇದೇ ರೀತಿ ಕೊರಳಿಗೆ ತೊಡುವ ಸರವನ್ನೂ ಕಾಲ್ಗೆಜ್ಜೆಯಂತೆ ತೊಡಬಹುದು! ಚಿಕ್ಕವರಾಗಿದ್ದಾಗ ಮಾಡಿಸಿದ ಸರ ಈಗ ಧರಿಸಲು ಒಂದು ವೇಳೆ ಚಿಕ್ಕದಾಗುತ್ತದೆ ಎಂದಾದರೆ ಸ್ವಲ್ಪ ಬಿಗಿಯಾಗಿಸಿ ಕಾಲ್ಗೆಜ್ಜೆಯಂತೆ ತೊಡಬಹುದು. ಫ್ರೆಂಡ್‌ಶಿಪ್‌ ಡೇ ಬಂದಾಗ ಫ್ರೆಂಡ್‌ಶಿಪ್‌ ಬ್ಯಾಂಡ್‌ ಗಳ ಹಾವಳಿ ಜೋರು. ಕೈಗೆ ಕಟ್ಟುವ ಆ ಬ್ಯಾಂಡ್‌ ಗಳನ್ನು ಕಾಲಿಗೂ ಕಟ್ಟಿಕೊಳ್ಳಬಹುದು ಎಂದರೆ ನೀವು ನಂಬಲೇಬೇಕು. ಫ್ರೆಂಡ್‌ಶಿಪ್‌, ಲವ್‌ ಇತ್ಯಾದಿ ಪದಗಳುಳ್ಳ ಕಾಲ್ಗೆಜ್ಜೆಗಳನ್ನು ಬ್ಯಾಂಡ್‌ನ‌ಂತೆಯೇ ಉಡುಗೊರೆಯಾಗಿ ಗೆಳತಿಯರಿಗೆ ನೀಡುತ್ತಾರೆ! ಯಾವ ರೀತಿ ಟ್ಯಾಟೂ (ಹಚ್ಚೆ) ಹಾಕಿಸಿಕೊಂಡು ಜನರು ತಮ್ಮ ವಿಚಾರಗಳನ್ನು ವ್ಯಕ್ತ ಪಡಿಸುತ್ತಾರೋ ಅದೇ ರೀತಿ ಉಡುಪಿಗೆ ಹೋಲುವಂತೆ ಅಥವಾ ಮೂಡ್‌ಗೆ ಅನುಗುಣವಾಗಿ ಕಾಲ್ಗೆಜ್ಜೆ ತೊಡಬಹುದು. ಇದು ಹೊಸ ಟ್ರೆಂಡ್‌ ಕೂಡ ಹೌದು.

ಮುತ್ತಿನ ಗತ್ತು

ಪಾಶ್ಚಾತ್ಯ ಮತ್ತು ಸಾಂಪ್ರದಾಯಿಕ, ಎರಡೂ ಬಗೆಯ ಉಡುಪುಗಳ ಜೊತೆ ತೊಡಬಹುದಾದ ಆಭರಣಗಳಲ್ಲಿ ಒಂದು, ಮುತ್ತಿನ ಹಾರ. ನಮ್ಮ ಅಜ್ಜಿ, ಮುತ್ತಜ್ಜಿಯರೂ ತೊಡುತ್ತಿದ್ದ ಈ ಸರಳ, ಸುಂದರವಾದ ಒಡವೆ ಇಂದಿಗೂ ಕ್ಲಾಸಿಕ್‌. ತೊಟ್ಟ ಉಡುಗೆಗೆ ಇನ್ನಷ್ಟು ಮೆರುಗು ನೀಡುವ ಮುತ್ತಿನಹಾರವನ್ನು ರಾಜಮನೆತನದವರು, ಚಿತ್ರನಟಿಯರು, ರಾಜಕಾರಣಿಗಳು ತೊಟ್ಟಿದ್ದನ್ನು ನೀವು ನೋಡಿರಬಹುದು. ಸರಳ ಉಡುಗೆ ತೊಟ್ಟರೂ, ಮುತ್ತಿನ ಹಾರ ಅದಕ್ಕೆ ರಾಯಲ್‌ ಲುಕ್‌ ನೀಡುತ್ತದೆ. ಕೇವಲ ಮಹಿಳೆಯರಿಗಷ್ಟೇ ಸೀಮಿತವಾಗದೆ ಈ ಮುತ್ತಿನ ಹಾರ ಪುರುಷರಲ್ಲೂ ಫೇವರಿಟ್‌ ಆಗಿದೆ. ಮದುವೆ, ನಿಶ್ಚಿತಾರ್ಥ, ಹಬ್ಬ, ಪೂಜೆ ಮತ್ತು ಇತರ ಸಮಾರಂಭಗಳಿಗೆ ಮುತ್ತಿನ ಹಾರವನ್ನು ತೊಡಬಹುದು. ಸಾಂಪ್ರದಾಯಿಕ ಉಡುಗೆ ಜೊತೆ ಇದು ಚೆನ್ನಾಗಿ ಹೊಂದುತ್ತದೆ. ಸಾಲಿಡ್‌ ಕಲರ್‌ ಶರ್ಟ್‌, ಪೆನ್ಸಿಲ್‌ ಸ್ಕರ್ಟ್‌ ಪಾಶ್ಚಾತ್ಯ ಉಡುಗೆ ಜೊತೆ ತೊಡುವುದಾದರೆ, ಮುತ್ತಿನ ಹಾರವನ್ನು ಫಾರ್ಮಲ್‌ ಸೂಟ್‌ ಜೊತೆ ತೊಡಬಹುದು. ಜೀನ್ಸ್‌ ಪ್ಯಾಂಟ್‌ ಜೊತೆ ಬಿಳಿ ಅಥವಾ ಬೇರೆ ಯಾವುದೇ ಸಾಲಿಡ್‌ ಕಲರ್ಡ್‌ (ಒಂದೇ ಬಣ್ಣದ) ಶರ್ಟ್‌ ತೊಟ್ಟು, ಮುತ್ತಿನ ಹಾರವನ್ನು ಧರಿಸಬಹುದು. ಸಾಲಿಡ್‌ ಕಲರ್ಡ್‌ ಬಟ್ಟೆಗಳ ಜೊತೆ ಮುತ್ತಿನ ಹಾರ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಬಿಳಿ ಅಂಗಿ ಜೊತೆ, ಕಪ್ಪು ಬಣ್ಣದ ಪೆನ್ಸಿಲ್‌ ಸ್ಕರ್ಟ್‌ (ಲಂಗ) ತೊಟ್ಟು, ಮುತ್ತಿನ ಹಾರ ಧರಿಸಬಹುದು.

ಪಾರ್ಟಿಗಳಿಗೆ ಲಿಟಲ್‌ ಬ್ಲಾಕ್‌ ಡ್ರೆಸ್‌ ಜೊತೆಯೂ ಈ ಮುತ್ತಿನ ಹಾರ ತೊಡಬಹುದು. ಕೇಶಾಲಂಕಾರಕ್ಕೂ ಮುತ್ತಿನಹಾರ ಉಂಗುರ, ಓಲೆ, ಬಳೆ, ಬ್ರೇಸ್‌ಲೆಟ್‌, ಮಾಟಿ, ಡಾಬು, ವಂಕಿ, ಸೊಂಟಪಟ್ಟಿ ಮತ್ತು ಇತರ ಆಭರಣಗಳಲ್ಲೂ ಮುತ್ತುಗಳನ್ನು ಕಾಣಬಹುದು. ಅವುಗಳನ್ನು ಹೆಚ್ಚಾಗಿ ನೃತ್ಯಗಾರರು ಮತ್ತು ವಧುಗಳು ತೊಡುತ್ತಾರೆ. ಇವೆಲ್ಲ ಅಲ್ಲದೆ ಮಹಿಳೆಯರು, ಮುತ್ತಿನ ಹಾರವನ್ನು ಕತ್ತಿಗೆ ಹಾಕುವ ಬದಲು ಮುಡಿಗೇರಿಸಿ ಸಿಂಗಾರ ಮಾಡುತ್ತಾರೆ. ಸರಳ ಬನ್‌ (ತುರುಬು) ಸುತ್ತ ಮುತ್ತಿನ ಹಾರವನ್ನು ಕಟ್ಟಿ ಕೇಶ ವಿನ್ಯಾಸ ಮಾಡಲಾಗುತ್ತದೆ. ಗಗನ ಸಖೀಯರು ಸಾಮಾನ್ಯವಾಗಿ ಇಂಥ ಹೇರ್‌ಸ್ಟೈಲ್‌ ಮಾಡಿಕೊಳ್ಳುತ್ತಾರೆ. ಈ ಫ್ಯಾಷನ್‌ನ ಪ್ರಭಾವವನ್ನು ಮದುವೆಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಎಥ್ನಿಕ್‌ ಡೇಯಂಥ ಸಮಾರಂಭಗಳಲ್ಲಿ, ಹಬ್ಬ ಮತ್ತು ಪೂಜೆಗಳಿಗೆ ಬರುವ ಮಹಿಳೆಯರಲ್ಲಿ ನೋಡಬಹುದು.

Advertisement

ಸುಶ್ಮಿತಾ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next