ಪರ್ತ್: ಭಾರತ ನೀಡಿದ 143 ರನ್ ಗಳ ಸವಾಲನ್ನು ಬೆನ್ನಟ್ಟಲು ವಿಫಲವಾದ ಬಾಂಗ್ಲಾ ಮಹಿಳಾ ಕ್ರಿಕೆಟ್ ತಂಡವು ಐಸಿಸಿ ಮಹಿಳಾ ಟಿ20 ವಿಶ್ವಕಪ್ ಕೂಟದ ಲೀಗ್ ಪಂದ್ಯದಲ್ಲಿ 18 ರನ್ ಗಳಿಂದ ಭಾರತದ ಮಹಿಳೆಯರಿಗೆ ಶರಣಾಗಿದೆ. ಈ ಮೂಲಕ ಹರ್ಮನ್ ಪ್ರೀತ್ ಕೌರ್ ಪಡೆ ವಿಶ್ವ ಟಿ20 ವಿಶ್ವಕಪ್ ಕೂಟದಲ್ಲಿ ಸತತ ಎರಡನೇ ಜಯ ದಾಖಲಿಸಿ ಬೀಗಿದೆ.
ಭಾರತದ ಸವಾಲನ್ನು ಬೆನ್ನಟ್ಟಲಾರಂಭಿಸಿದ ಬಾಂಗ್ಲಾ ಮಹಿಳಾ ತಂಡಕ್ಕೆ ಆರಂಭಿಕ ಆಟಗಾರ್ತಿ ಮುರ್ಷಿದಾ ಖಟೂನ್ (30) ಅವರು ಆಸರೆಯಾದರು. ಆದರೆ ಅಗ್ರ ಕ್ರಮಾಂಕದ ಆಟಗಾರ್ತಿಯರಿಂದ ಅವರಿಗೆ ಉತ್ತಮ ಬೆಂಬಲ ದೊರಕಲಿಲ್ಲ.
ಇನ್ನೋರ್ವ ಆರಂಭಿಕ ಆಟಗಾರ್ತಿ ಶಮೀನಾ ಸುಲ್ತಾನ ಅವರು ಕೇವಲ 3 ರನ್ ಗಳಿಸಿ ಔಟಾದರು. ಬಳಿಕ ಮಧ್ಯಮ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ನಿಗರ್ ಸುಲ್ತಾನ (35) ಅವರ ಬ್ಯಾಟಿಂಗ್ ಬಾಂಗ್ಲಾ ಗೆಲುವಿನ ಆಸೆಯನ್ನು ಜೀವಂತವಿರಿಸಿತ್ತು.
ಆದರೆ ಭಾರತದ ಮಹಿಳಾ ಬೌಲರ್ ಗಳ ಬಿಗು ದಾಳಿಗೆ ಕಂಗೆಟ್ಟ ಬಾಂಗ್ಲಾ ಮಹಿಳಾ ಬ್ಯಾಟ್ಸ್ ಮನ್ ಗಳು ಜಯದ ಗುರಿಯನ್ನು ತಲುಪುವಲ್ಲಿ ಎಡವಿದರು. ಅಂತಿಮವಾಗಿ 20 ಓವರುಗಳಲ್ಲಿಉ ಬಾಂಗ್ಲಾ 8 ವಿಕೆಟ್ ಗಳನ್ನು ಕಳೆದುಕೊಂಡು 124 ರನ್ ಗಳನ್ನು ಗಳಿಸಲಷ್ಟೇ ಶಕ್ತವಾಯಿತು.
ಭಾರತದ ಪರ ಲೆಗ್ ಬ್ರೇಕ್ ಗೂಗ್ಲಿ ಬೌಲರ್ ಪೂನಮ್ ಯಾದವ್ ಅವರು 4 ಓವರ್ ಗಳಲ್ಲಿ 18 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಇನ್ನು 4 ಓವರ್ ಗಳಲ್ಲಿ ಕೇವಲ 14 ರನ್ ನೀಡಿ 2 ವಿಕೆಟ್ ಪಡೆದ ಮಧ್ಯಮ ವೇಗಿ ಶಿಖಾ ಪಾಂಡೆ ಭಾರತದ ಪರ ಯಶಸ್ವೀ ಬೌಲರ್ ಎಣಿಸಿಕೊಂಡರು. ಇನ್ನೋರ್ವ ಮಧ್ಯಮ ವೇಗಿ ಅರುಂಧತಿ ರೆಡ್ಡಿ ದುಬಾರಿ ಎಣಿಸಿದರೂ 2 ವಿಕೆಟ್ ಪಡೆದರು ಇನ್ನೊಂದು ವಿಕೆಟ್ ರಾಜೇಶ್ವರೀ ಗಾಯಕ್ವಾಡ್ ಪಾಲಾಯಿತು.
ಬಾಂಗ್ಲಾ ದೇಶದ ಪರ ನಿಗರ್ ಸುಲ್ತಾನ (35) ಟಾಪ್ ಸ್ಕೋರರ್ ಎಣಿಸಿಕೊಂಡರೆ ಉಳಿದಂತೆ ಮುರ್ಷಿದಾ ಖಟೂನ್ (30), ಫಾತಿಮಾ ಖಟೂನ್ (17), ರುಮಾನ ಅಹಮ್ಮದ್ (13) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.