ಬೀಜಿಂಗ್:ಭಾರತ, ಚೀನಾ ನಡುವಿನ ಗಡಿ ಸಂಘರ್ಷ ವಿಚಾರ ಇದೀಗ ತಾರಕಕ್ಕೇರತೊಡಗಿದ್ದು, ಚೀನಾದ 59 ಆ್ಯಪ್ ಗಳ ಮೇಲೆ ಭಾರತ ನಿಷೇಧ ಹೇರಿದ ಬೆನ್ನಲ್ಲೇ ಜಿಂಗ್ ಪಿನ್ ನೇತೃತ್ವದ ಚೀನಾ ಸರ್ಕಾರ ಇದೀಗ ಭಾರತದ ವೆಬ್ ಸೈಟ್ (ವರ್ಚುವಲ್ ಪ್ರೈವೇಟ್ ನೆಟ್ ವರ್ಕ್) ಹಾಗೂ ದಿನಪತ್ರಿಕೆಗಳನ್ನು ಬ್ಲಾಕ್ ಮಾಡಿರುವುದಾಗಿ ವರದಿ ತಿಳಿಸಿದೆ.
ಬೀಜಿಂಗ್ ನಲ್ಲಿರುವ ರಾಜತಾಂತ್ರಿಕ ಮೂಲಗಳ ಪ್ರಕಾರ, ಈವರೆಗೆ ಭಾರತದ ಟಿವಿ ಚಾನೆಲ್ ಗಳನ್ನು ಐಪಿ ಟಿವಿ ಮೂಲಕ ವೀಕ್ಷಿಸಬಹುದಾಗಿತ್ತು. ಆದರೆ ಈಗ ಕಳೆದ ಎರಡು ದಿನಗಳಿಂದ ಎಕ್ಸ್ ಪ್ರೆಸ್ ವಿಪಿಎನ್ ಐಫೋನ್ ಹಾಗೂ ಡೆಸ್ಕ್ ಟಾಪ್ ಗಳಲ್ಲಿಯೂ ಕಾರ್ಯನಿರ್ವಹಿಸುತ್ತಿಲ್ಲ ಎಂದು ತಿಳಿಸಿದೆ.
ಸೆನ್ಸಾರ್ ಶಿಪ್ ನ ಮೂಲಕ ಕೆಲವು ವೈಬ್ ಸೈಟ್ ಬಳಸಲು ಅವಕಾಶ ಕಲ್ಪಿಸುವ ವಿಪಿಎನ್ ಗಳನ್ನು ಬ್ಲಾಕ್ ಮಾಡುವ ಅತ್ಯಾಧುನಿಕ ತಂತ್ರಜ್ಞಾನದ ಫೈರ್ ವಾಲ್ ಅನ್ನು ಚೀನಾ ತಯಾರಿಸಿದೆ ಎಂದು ವರದಿ ವಿವರಿಸಿದೆ.
ಅಷ್ಟೇ ಅಲ್ಲ ಆನ್ ಲೈನ್ ಸೆನ್ಸಾರ್ ಶಿಪ್ ನಲ್ಲಿ ಚೀನಾ ಬಹಳ ಕುಖ್ಯಾತಿ ಪಡೆದಿದೆ. ಕ್ಸಿ ಜಿಂಗ್ ಪಿಂಗ್ ನೇತೃತ್ವದ ಸರ್ಕಾರ ಇಂತಹ ಕೆಲಸಗಳಲ್ಲಿ ಮಾಸ್ಟರ್ ಮೈಂಡ್ ಹೊಂದಿದೆ. ಇದಕ್ಕೆ ಉತ್ತಮ ಉದಾಹರಣೆ, ಹಾಂಗ್ ಕಾಂಗ್ ನ ಬಿಸಿಬಿಸಿ ಸುದ್ದಿಯನ್ನು ಸಿಎನ್ ಎನ್ ಅಥವಾ ಬಿಬಿಸಿ ಬಿತ್ತರಿಸುತ್ತಿದ್ದರೆ ತಕ್ಷಣವೇ ಬೀಜಿಂಗ್ ನಲ್ಲಿರುವ ಟಿವಿ ಅಥವಾ ವೆಬ್ ಸೈಟ್ ಗಳ ಸ್ಕ್ರೀನ್ ಬ್ಲ್ಯಾಂಕ್ ಆಗುತ್ತದೆ, ನಂತರ ಆ ಸುದ್ದಿ ಮುಗಿದ ನಂತರವಷ್ಟೇ ಮತ್ತೆ ಸ್ಕ್ರೀನ್
ಕಾಣಿಸಿಕೊಳ್ಳುತ್ತದೆ ಎಂದು ತಿಳಿಸಿದೆ.