ನವದೆಹಲಿ: ಆರ್ಥಿಕ ಹಿಂಜರಿತ ಪರಿಣಾಮ ದೇಶದ ಸ್ಥಿತಿ ಹದಗೆಟ್ಟಿದೆ, ಕೇಂದ್ರ ಸರಕಾರದ ಆರ್ಥಿಕ ನೀತಿ-ನಿಯಮಗಳಿಂದ ದೇಶದ ಆರ್ಥಿಕತೆ ಕಳೆಗುಂದಿದೆ ಎಂದು ದೂಷಿಸುತ್ತಿರುವವರ ನಡುವೆಯೇ ನರೇಂದ್ರ ಮೋದಿ ಸರಕಾರ ಸರಿಯಾದ ಹಾದಿಯಲ್ಲಿ ಸಾಗುತ್ತಿದೆ ಎಂಬ ಅಭಿಪ್ರಾಯವನ್ನು ದೇಶದ ಬಹುತೇಕ ಜನರು ವ್ಯಕ್ತಪಡಿಸಿದ್ದಾರೆ.
ಇಪ್ರೋಸ್ ಸಂಶೋಧನಾ ಸಂಸ್ಥೆ ನಡೆಸಿದ ‘ವಾಟ್ ವರೀಸ್ ದಿ ವರ್ಲ್ಡ್’ ಸಮೀಕ್ಷೆಯಲ್ಲಿ ಈ ಎಲ್ಲಾ ಕುತೂಹಲಕಾರಿ ಅಂಶಗಳು ಬಯಲಾಗಿದೆ. ಶೇ.69ರಷ್ಟು ನಗರವಾಸಿಗಳು ಭಾರತ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆರ್ಥಿಕತೆ, ರಾಜಕೀಯ, ಭ್ರಷ್ಟಾಚಾರ, ಅಪರಾಧ ಮತ್ತು ಹಿಂಸೆ, ಬಡತನ ಮತ್ತು ಸಾಮಾಜಿಕ ಅಸಮಾನತೆ ಹಾಗೂ ಹವಾಮಾನ ಬದಲಾವಣೆಯಂತಹ ಸಂಗತಿಗಳು ಸೇರಿದಂತೆ ಭಾರತೀಯರು ಚಿಂತಿಸುವ ಇತರ ವಿಷಯಗಳನ್ನಿಟ್ಟುಕೊಂಡು ಇಪ್ರೋಸ್ ಸಂಸ್ಥೆ ಈ ಅಧ್ಯಯನವನ್ನು ನಡೆಸಿದೆ.
ಶೇ.69 ಜನರು ದೇಶವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಸಮೀಕ್ಷೆಯಲ್ಲಿ ಒಪ್ಪಿಕೊಂಡಿದ್ದಾರೆ. ಇದೇ ವೇಳೆ, ಭಾರತದಲ್ಲಿ ನಿರಾಶಾವಾದದ ಜಾಗತಿಕ ಪ್ರವೃತ್ತಿ ಹೆಚ್ಚುತ್ತಿದ್ದು, ದೇಶವು ತಪ್ಪು ಹಾದಿಯಲ್ಲಿದೆ ಎಂದು ವಿಶ್ವದ ಶೇ.61ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.
ಸಮೀಕ್ಷೆಯಲ್ಲಿ ಪಾಲ್ಗೊಂಡ ನಗರ ಭಾರತೀಯರಲ್ಲಿ ಕನಿಷ್ಠ ಶೇ.46 ಜನರು ನಿರುದ್ಯೋಗದ ಬಗ್ಗೆ ಹೆಚ್ಚು ಚಿಂತಿಸುತ್ತಿದ್ದಾರೆ. ಅಕ್ಟೋಬನರ್‌ಲ್ಲಿ ನಡೆಸಿದ್ದ ಸಮೀಕ್ಷೆಗೆ ಹೋಲಿಸಿದರೆ ಇದರ ಪ್ರಮಾಣದಲ್ಲಿ ಶೇ 3ರಷ್ಟು ಹೆಚ್ಚಳವಾಗಿದೆ.
ಭಾರತೀಯರು ಚಿಂತೆ ಮಾಡುವ ಇತರ ಕೆಲವು ವಿಷಯಗಳಲ್ಲಿ ಆರ್ಥಿಕ ಮತ್ತು ರಾಜಕೀಯ ಭ್ರಷ್ಟಾಚಾರ, ಅಪರಾಧ ಮತ್ತು ಹಿಂಸೆ, ಬಡತನ ಮತ್ತು ಸಾಮಾಜಿಕ ಅಸಮಾನತೆ ಮತ್ತು ಹವಾಮಾನ ಬದಲಾವಣೆಗಳು ಸಹ ಸೇರಿವೆ ಎಂಬುದನ್ನು ವರದಿ ಉಲ್ಲೇಖ ಮಾಡಿದ್ದು, ಮತ್ತೊಂದೆಡೆ ಬಡತನ ಮತ್ತು ಸಾಮಾಜಿಕ ಅಸಮಾನತೆಯ ಕುರಿತು ಜಾಗತಿಕ ನಾಗರಿಕರು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಅಧ್ಯಯನದ ವರದಿ ತಿಳಿಸಿದೆ.