Advertisement

ಚೀನ ಸೇನೆ ಕಾಲ್ತೆಗೆಯುವ ತನಕ ಹೆಜ್ಜೆ ಹಿಂದಿಡಲ್ಲ: ಭಾರತ ಪಟ್ಟು

02:22 PM Sep 25, 2020 | keerthan |

ಹೊಸದಿಲ್ಲಿ: ಚೀನದ ಅಪನಂಬಿಕೆಯ ವರ್ತನೆ ಇದೀಗ ಲಡಾಖ್‌ ಬಿಕ್ಕಟ್ಟನ್ನು ಮತ್ತಷ್ಟು ಕಗ್ಗಂಟಾಗಿಸಲಿದೆ. ಪೂರ್ವ ಲಡಾಖ್‌ನ ಎಲ್‌ಎಸಿಯಿಂದ ಚೀನ ಸೇನೆ ವಾಪಸಾಗುವವರೆಗೂ ಪ್ರಸ್ತುತ ಆಕ್ರಮಿಸಿಕೊಂಡಿರುವ ಪ್ರಮುಖ ಶಿಖರಗಳಿಂದ ಕೆಳಗೆ ಇಳಿಯದೇ ಇರಲು ಭಾರತೀಯ ಸೇನೆ ನಿರ್ಧರಿಸುವ ಸಾಧ್ಯತೆ ಇದೆ.

Advertisement

ಆ.29-30ರ ಕಾರ್ಯಾಚರಣೆಗೂ ಮುನ್ನ ಭಾರತೀಯ ತುಕಡಿಗಳು ಫಿಂಗರ್‌ 4-8ರವರೆಗಷ್ಟೇ ಗಸ್ತು ತಿರುಗುತ್ತಿದ್ದವು. ಅದುವರೆಗೂ ಪ್ಯಾಂಗಾಂಗ್‌ ತ್ಸೊ ದಕ್ಷಿಣ ದಂಡೆಯ ಉನ್ನತ ಶಿಖರಗಳ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗಿರಲಿಲ್ಲ. ಆದರೆ, ಆಗಸ್ಟ್‌ ಕೊನೆಯಲ್ಲಿ ಪಿಎಲ್‌ಎ ನಡೆಸಿದ ರಾತ್ರೋರಾತ್ರಿ ಅತಿಕ್ರಮಣದ ದುಸ್ಸಾಹಸ ಭಾರತೀಯ ಸೇನೆಗೆ ಭಾರೀ ಲಾಭ ತಂದುಕೊಟ್ಟಿದೆ. ದಕ್ಷಿಣ ದಂಡೆಯ ಎಲ್ಲ ಪರ್ವತಗಳ ಮೇಲೂ ತುಕಡಿಗಳನ್ನು ಸೇನೆ ನಿಯೋಜಿಸಿದೆ. ಪ್ಯಾಂಗಾಂಗ್‌ ಸಮೀಪ ಪಿಎಲ್‌ಎ ತುಕಡಿಗಳು ಹಿಂದೆ ಸರಿಯುವ ತನಕ ಭಾರತ, ಈ ಪರ್ವತಗಳಿಂದ ಕೆಳಗೆ ಇಳಿಯುವುದಿಲ್ಲ ಎನ್ನಲಾಗುತ್ತಿದೆ.

“ಉಭಯ ರಾಷ್ಟ್ರಗಳ ಸೇನೆಗಳ ಅರ್ಥಪೂರ್ಣ ವಾಪಸಾತಿ ಮತ್ತು ಸಂಘರ್ಷ ತಗ್ಗಿಸುವ ವಿಚಾರ ಚೀನದ ರಾಜಕೀಯ ನಾಯಕತ್ವದ ನಿರ್ಧಾರಗಳನ್ನು ಅವಲಂಬಿಸಿದೆ’ ಎಂದು ಸೇನಾ ಮೂಲಗಳು ತಿಳಿಸಿವೆ. ಸೇನೆ ಹಿಂಪಡೆಯುವ ಸಂಬಂಧ ಉಭಯ ರಾಷ್ಟ್ರಗಳ ಕಾರ್ಪ್ಸ್ ಕಮಾಂಡರ್‌ಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದರೂ, ಇದು ಕೇವಲ ಬಿಕ್ಕಟ್ಟಿನ ಪ್ರದೇಶಗಳಲ್ಲಿ ಸಂಘರ್ಷ ತಗ್ಗಿಸಲು ನೆರವಾಗುತ್ತದಷ್ಟೇ. ಆದರೂ, ಭಾರತೀಯ ಸೇನೆ ಎಲ್‌ಎಸಿಯಲ್ಲಿ ಎಲ್ಲ ಸಂಭವನೀಯತೆಗೆ ಸಿದ್ಧವಿರಬೇಕಿದೆ ಎಂದು ತಿಳಿಸಿವೆ.

ಇದನ್ನೂ ಓದಿ: ಕೋವಿಡ್ 19 ಕಾರಣ: ಮತ್ತೆ ಲಾಕ್‌ಡೌನ್‌ ಬೇಡವೇ ಬೇಡವೆಂದ ಜನತೆ

ಎಪ್ರಿಲ್‌- ಮೇ ಹಿಂದಿದ್ದ ಗಡಿಸ್ಥಿತಿಯನ್ನು ಯಥಾವತ್ತು ಕಾಪಾಡಿಕೊಳ್ಳುವಂತೆ ಭಾರತೀಯ ಕಮಾಂಡರ್‌ಗಳು ಚೀನಕ್ಕೆ ಬುದ್ಧಿ ಹೇಳಿದ್ದರೂ, ಬೀಜಿಂಗ್‌ ಮಾತ್ರ ಇನ್ನೂ ಇದಕ್ಕೆ ಮೀನಾಮೇಷ ಎಣಿಸುತ್ತಿದೆ ಎಂದು ಸೇನೆ ಮೂಲಗಳು ತಿಳಿಸಿವೆ.

Advertisement

ತೈವಾನ್‌ ಸಮೀಪ ಚೀನ ವಿಮಾನ ಹಾರಾಟ: ತೈವಾನ್‌ ಜಲಸಂಧಿಯಲ್ಲಿ ಚೀನ ಮತ್ತೆ ಕಿರಿಕ್‌ ಮುಂದುವರಿಸಿದೆ. ಪಿಎಲ್‌ಎಯ 2 ಸೇನಾ ಕಣ್ಗಾವಲು ವಿಮಾನಗಳು ಈ ಭಾಗದಲ್ಲಿ 3 ದಿನಗಳ ಹಾರಾಟ ನಡೆಸಿವೆ ಎಂದು ತೈವಾನ್‌ ರಕ್ಷಣಾ ಇಲಾಖೆ ಖಚಿತಪಡಿಸಿದೆ. ಚೀನೀ ಕಣ್ಗಾವಲು ವಿಮಾನಗಳನ್ನು ತೈವಾನ್‌ ಸೇನೆ ಕೂಡಲೇ ಪತ್ತೆ ಹಚ್ಚಿದ್ದು, ತನ್ನ ದ್ವೀಪಗಳ ಮೇಲೆ ವಾಯುಗಸ್ತನ್ನು ಹೆಚ್ಚಿಸಿ ಬೀಜಿಂಗ್‌ಗೆ ಆಘಾತ ನೀಡಿದೆ. ಅಮೆರಿಕದ ಉನ್ನತಾಧಿಕಾರಿ ತೈಪೆಗೆ ಭೇಟಿ ನೀಡಿರುವುದು ಚೀನದ ಅಸಹನೆ ಹೆಚ್ಚಿಸಿದೆ. ಯುಎಸ್‌ ಅಧಿಕಾರಿ ಭೇಟಿ ವೇಳೆ, ತೈವಾನ್‌ ತನ್ನ ಭಾಗವೆಂದು ಸಾರಲು ಚೀನ ಕಳೆದ ವಾರ ಒಟ್ಟು 37 ಯುದ್ಧವಿಮಾನಗಳನ್ನು ಹಾರಿಬಿಟ್ಟಿತ್ತು.

ಕಾಲಾಪಾನಿಯಲ್ಲಿ ಜನ ಗಣತಿಗೆ ನೇಪಾಲ ನಿರ್ಧಾರ
ಉತ್ತರಾಖಂಡದ ಭೂಪ್ರದೇಶಗಳನ್ನು ತನ್ನದೆಂದು ನಕ್ಷೆಯಲ್ಲಿ ಚಿತ್ರಿಸಿದ ನೇಪಾಲ ಮತ್ತೆ ಭಾರತದ ಕಾಲಾಪಾನಿ ಮೇಲೆ ವಕ್ರದೃಷ್ಟಿ ಬೀರಿದೆ. ಕಾಲಾಪಾನಿಯಲ್ಲಿ ಜನಗಣತಿ ನಡೆಸಲು ಕೆ.ಪಿ. ಶರ್ಮಾ ಓಲಿ ಸರಕಾರ ಪಿತೂರಿ ರೂಪಿಸಿದೆ. ಪ್ರತಿ 10 ವರ್ಷಕ್ಕೊಮ್ಮೆ ಜನಗಣತಿ ನಡೆಸುವ ನೇಪಾಲ, 2021ರ ಮೇ ತಿಂಗಳಿನಲ್ಲಿ ಕಾಲಾಪಾನಿಯನ್ನೂ ಸೇರಿಸಿಕೊಂಡು ಜನರನ್ನು ಗಣತಿ ಮಾಡಲಿದೆ. ಆದರೆ, ನೇಪಾಲದ ಈ ನಿರ್ಧಾರಕ್ಕೆ ಕಾಲಾಪಾನಿ ಸಮೀಪದ ಹಳ್ಳಿಜನ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. “ನಾವು ಭಾರತೀಯ ಪ್ರಜೆಗಳು. ನೇಪಾಲ ಸರಕಾರ ನಡೆಸುವ ಗಣತಿಯಲ್ಲಿ ನಾವೇಕೆ ಪಾಲ್ಗೊಳ್ಳಬೇಕು?’ ಎಂದು ಬುಧಿ ಹಳ್ಳಿಯ ವಾಸಿ ಮಹೇಂದ್ರ ಬುಧಿಯಾಲ್‌ ತಿಳಿಸಿದ್ದಾರೆ.

ಗಿಲ್ಗಿಟ್‌- ಬಾಲ್ಟಿಸ್ಥಾನ್‌ನಲ್ಲಿ ಚುನಾವಣೆ ಘೋಷಣೆ
ಭಾರತದ ತೀವ್ರ ವಿರೋಧದ ನಡುವೆಯೂ ಪಾಕಿಸ್ಥಾನ ಅಕ್ರಮವಾಗಿ ಆಕ್ರಮಿಸಿರುವ ಗಿಲ್ಗಿಟ್‌- ಬಾಲ್ಟಿಸ್ಥಾನ್‌ನ ಕ್ಷೇತ್ರಗಳಿಗೆ ನ.15ರಂದು ವಿಧಾನಸಭೆ ಚುನಾವಣೆ ನಡೆಸುವುದಾಗಿ ಘೋಷಿಸಿದೆ. ಅಕ್ರಮವಾಗಿ ಆಕ್ರಮಿಸಿರುವ ಪ್ರದೇಶಗಳ ಮೇಲೆ ಪಾಕಿಸ್ಥಾನಕ್ಕೆ ಯಾವುದೇ ಸಾಂವಿಧಾನಿಕ ಹಕ್ಕಿಲ್ಲ ಎಂದು ಭಾರತ ಇತ್ತೀಚೆಗಷ್ಟೇ ಆಕ್ಷೇಪ ತೆಗೆದಿತ್ತು. ಇದರ ಬೆನ್ನಲ್ಲೇ ಪಾಕ್‌ ಅಧ್ಯಕ್ಷ ಡಾ| ಆರೀಫ್ ಆಳ್ವಿ, “2017ರ ಚುನಾವಣಾ ಕಾಯ್ದೆಯ ಸೆಕ್ಷನ್‌ 57 (1)ರ ಅನ್ವಯ ಗಿಲ್ಗಿಟ್‌- ಬಾಲ್ಟಿಸ್ಥಾನ್‌ನ ವಿಧಾನಸಭಾ ಕ್ಷೇತ್ರಗಳಿಗೆ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ’ ಎಂದು ಹೇಳಿದ್ದಾರೆ. ಜುಲೈ 11, ಆಗಸ್ಟ್‌ 18ರಂದು ನಡೆಯಬೇಕಿದ್ದ ಈ ಚುನಾವಣೆ ಕೋವಿಡ್ ಕಾರಣದಿಂದಾಗಿ 2 ಬಾರಿ ಮುಂದೂಡಲ್ಪಟ್ಟಿತ್ತು. ಗಿಲ್ಗಿಟ್‌- ಬಾಲ್ಟಿಸ್ಥಾನ್‌ನ ಒಟ್ಟು 24 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಪಾಕಿಸ್ಥಾನ ವಿರುದ್ಧ ಲಡಾಖ್‌ ಸಂಸದ ಕಿಡಿ

ಗಿಲ್ಗಿಟ್‌- ಬಾಲ್ಟಿಸ್ಥಾನ್‌ನಲ್ಲಿನ ಚುನಾವಣೆ, ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಯೋಜಿತ ಪ್ರವಾಸಕ್ಕೆ ಲಡಾಖ್‌ನ ಯುವ ಸಂಸದ ಜಮ್ಯಾಂಗ್‌ ತ್ಸೆರಿಂಗ್‌ ಟ್ವಿಟರಿನಲ್ಲಿ ಕಿಡಿಕಾರಿದ್ದಾರೆ. “ಗಿಲ್ಗಿಟ್‌- ಬಾಲ್ಟಿಸ್ಥಾನ ಭಾರತದ ಅವಿಭಾಜ್ಯ ಅಂಗ. ಭಾರತದ ಈ ಪ್ರದೇಶದಲ್ಲಿ ಕ್ರೂರ ನರಮೇಧ ನಡೆಸಲು ಪಾಕಿಸ್ಥಾನ ಸೇನೆ ಪಿತೂರಿ ರೂಪಿಸಿದೆ. ನಾನು ಈ ಭಾಗದ ಜನರ ಹೋರಾಟವನ್ನು ಬೆಂಬಲಿಸುತ್ತೇನೆ’ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next