ಹೊಸದಿಲ್ಲಿ: ಭಾರತದ ರೋವರ್‌ಗಳಾದ ಅರ್ಜುನ್ ಲಾಲ್-ಅರವಿಂದ್ ಸಿಂಗ್ ಜೋಡಿ ಟೋಕಿಯೊ ಒಲಿಂಪಿಕ್ಸ್ ಅರ್ಹತೆ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. ಟೋಕಿಯೊದಲ್ಲೇ ನಡೆದ ಏಶ್ಯ/ಓಶಿಯಾನಿಯ ಕಾಂಟಿನೆಂಟಲ್ ಕ್ವಾಲಿಫೈಯಿಂಗ್ ಸ್ಪರ್ಧೆಯ ಪುರುಷರ ಲೈಟ್‌ವೇಟ್ ಡಬಲ್ಸ್ ಸ್ಕಲ್ಸ್ ವಿಭಾಗದಲ್ಲಿ ಇವರು ದ್ವಿತೀಯ ಸ್ಥಾನಿಯಾಗಿ ಈ ಹೆಗ್ಗಳಿಕೆಗೆ ಪಾತ್ರರಾದರು.
ಭಾರತದ ಮತ್ತೋರ್ವ ರೋವರ್ ಜಾಕರ್ ಖಾನ್ ಪುರುಷರ ಸಿಂಗಲ್ಸ್ ಸ್ಕಲ್ಸ್ ಫೈನಲ್‌ನಲ್ಲಿ 4ನೇ ಸ್ಥಾನಿಯಾಗಿ ಒಲಿಂಪಿಕ್ಸ್ ಅರ್ಹತೆಯನ್ನು ಕಳೆದುಕೊಂಡರು. ಇಲ್ಲಿ ಮೊದಲ ಸ್ಥಾನಿಯಾದವರಿಗಷ್ಟೇ ಅವಕಾಶವಿತ್ತು. ಲೈಟ್‌ವೇಟ್ ಡಬಲ್ಸ್ ಸ್ಕಲ್ಸ್ ವಿಭಾಗದಲ್ಲಿ ಮೊದಲ 3 ಸ್ಥಾನ ಪಡೆದವರಿಗೆ ಟೋಕಿಯೊ ಒಲಿಂಪಿಕ್ಸ್ ಅರ್ಹತಾ ಕೋಟಾ ಲಭ್ಯವಿತ್ತು.
ಅರ್ಜುನ್-ಅರವಿಂದ್ ಅವರಿಗೆ ರೋಯಿಂಗ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷೆ ರಾಜಲಕ್ಷ್ಮೀ ಸಿಂಗ್ ದೇವೊ ಅಭಿನಂದನೆ ಸಲ್ಲಿಸಿದ್ದಾರೆ. ಭಾರತದ ಒಟ್ಟು 14 ಮಂದಿ ರೋವರ್ ಇದರಲ್ಲಿ ಪಾಲ್ಗೊಂಡಿದ್ದರು.
ಇಟಲಿಗೆ ತೆರಳುವುದಿಲ್ಲ :
ಅರ್ಜುನ್-ಅರವಿಂದ್ ಟೋಕಿಯೊ ಒಲಿಂಪಿಕ್ಸ್ ಅರ್ಹತೆ ಪಡೆದ ಭಾರತದ ಏಕೈಕ ಜೋಡಿಯಾಗಿದೆ. ಇಟಲಿಯಲ್ಲಿ ಇನ್ನೊಂದು ಅರ್ಹತಾ ಸುತ್ತಿನ ಸ್ಪರ್ಧೆ ಇದ್ದರೂ ಕೋವಿಡ್‌ನಿಂದಾಗಿ ಭಾರತದ ಸ್ಪರ್ಧಿಗಳನ್ನು ಕಳುಹಿಸುವುದಿಲ್ಲ ಎಂಬುದಾಗಿ ಆರ್‌ಎಫ್ಐ ಸ್ಪಷ್ಟಪಡಿಸಿದೆ.