ಹೊಸದಿಲ್ಲಿ : ವಿಶ್ವ ದರ್ಜೆಯ ರೈಲು ನಿಲ್ದಾಣಗಳನ್ನು ರೂಪಿಸುವ ನಿಟ್ಟಿನಲ್ಲಿ ಖಾಸಗಿ ಗುತ್ತಿಗೆದಾರರಿಗೆ ರೈಲು ನಿಲ್ದಾಣಗಳನ್ನು 90 ವರ್ಷಗಳ ಲೀಸಿಗೆ ನೀಡುವ ಬಗ್ಗೆ ರೈಲ್ವೆ ಸಚಿವಾಲಯವು ಚಿಂತನೆ ನಡೆಸುತ್ತಿದೆ.
ರೈಲು ನಿಲ್ದಾಣ ಪುನರ್ ನವೀಕರಣ ಯೋಜನೆಯ ಗರಿಷ್ಠ ಲಾಭವನ್ನು ಪಡೆಯುವ ದಿಶೆಯಲ್ಲಿ ನಾವು ಲೀಸ್ ಅವಧಿಯನ್ನು 90 ವರ್ಷಗಳಿಗೆ ವಿಸ್ತರಿಸಿದಲ್ಲಿ ಅದರ ಲಾಭಗಳು ಒಂದೂವರೆ ಪಟ್ಟು ಹೆಚ್ಚಲಿವೆ. ಪ್ರಕೃತ ರೈಲು ನಿಲ್ದಾಣಗಳನ್ನು 45 ವರ್ಷಗಳ ಲೀಸಿನ ಮೇಲೆ ನೀಡಲಾಗುತ್ತಿದೆ.
ಈಗ ಲೀಸಿಗೆ ಕೊಡಲಾಗಿರುವ 23 ರೈಲು ನಿಲ್ದಾಣಗಳ ಪ್ರಗತಿಯನ್ನು ಗಮನಿಸಿಕೊಂಡು ಮುಂದಿನ ಕಂತಿನ ರೈಲು ನಿಲ್ದಾಣಗಳನ್ನು 90 ವರ್ಷಗಳ ಲೀಸಿಗೆ ನೀಡುವ ಬಗ್ಗೆ ಸಚಿವ ಸಂಪುಟವನ್ನು ಸಂಪರ್ಕಿಸಬಹುದಾಗಿದೆ ಎಂದು ಹೆಸರು ತಿಳಿಸಬಯಸದ ರೈಲ್ವೇ ಸಚಿವಾಲಯದ ಅಧಿಕಾರಿಯೋರ್ವರು ಹೇಳಿದ್ದಾರೆ.
ಭಾರತೀಯ ರೈಲ್ವೇಯು ಮಧ್ಯಪ್ರದೇಶದ ಭೋಪಾಲ್‌ನ ಹಬೀಬ್‌ಗಂಜ್‌ನಲ್ಲಿ ಮೊತ್ತ ಮೊದಲ ರೈಲ್ವೇ ಅಭಿವೃದ್ಧಿ ಯೋಜನೆಯನ್ನು ಆರಂಭಿಸಲು ಈಗ ಸಜ್ಜಾಗಿದೆ. ಇದೇ ವೇಳೆ ಇನ್ನೂ 23 ರೈಲು ನಿಲ್ದಾಣಗಳಿಗೆ ಟೆಂಡರ್ ನೀಡಲಾಗಿದೆ. ಇವುಗಳಲ್ಲಿ ಪುಣೆ, ಹೌರಾ, ಕಾನ್ಪುರ ಸೆಂಟ್ರಲ್, ಚೆನ್ನೈ ಸೆಂಟ್ರಲ್ ಮತ್ತು ಬಾಂದ್ರಾ ಟರ್ಮಿನಸ್ ಕೂಡ ಸೇರಿವೆ.
ರೈಲ್ವೇಯು ಸುಮಾರು 400 ನಿಲ್ದಾಣಗಳನ್ನು ಖಾಸಗಿ – ಸರಕಾರಿ ಪಾಲುದಾರಿಕೆಯ ನೆಲೆಯಲ್ಲಿ ಪುನರಭಿವೃದ್ಧಿಪಡಿಸುವ ಯೋಜನೆಯನ್ನು ಹಾಕಿಕೊಂಡಿದೆ. ಇವುಗಳನ್ನು ವಿಶ್ವದರ್ಜೆಯ ಮಟ್ಟಕ್ಕೆ ತರುವ ಯತ್ನದಲ್ಲಿ ಈ ನಿಲ್ದಾಣಗಳಲ್ಲಿ ಕೆಫೆಗಳನ್ನು, ವಾಕ್‌ವೆà ಗಳನ್ನು ಮತ್ತು ಪ್ರಯಾಣಿಕರಿಗಾಗಿ ಹೋಲ್ಡಿಂಗ್ ಏರಿಯಾಗಳನ್ನು ರೂಪಿಸಲಾಗುವುದು.
ಇವುಗಳನ್ನು 45 ವರ್ಷಗಳ ವಾಣಿಜ್ಯ ಲೀಸಿಗೆ ನೀಡಲಾಗುವುದು ಮತ್ತು ಇವುಗಳ ನಿರ್ವಹಣಾ ಗುತ್ತಿಗೆ ಅವಧಿಯು 15 ವರ್ಷಗಳದ್ದಾಗಿರುವುದು. ಸದ್ಯಕ್ಕೆ 90 ವರ್ಷಗಳ ಅವಧಿಯ ಗುತ್ತಿಗೆ ಸೂತ್ರವನ್ನು ಗುಜರಾತ್‌ನ ಸೂರತ್ ಮತ್ತು ಗಾಂಧೀನಗರ ರೈಲು ನಿಲ್ದಾಣಗಳಿಗೆ ಸೀಮಿತಗೊಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.