ಹೊಸದಿಲ್ಲಿ: ಕೋವಿಡ್ ಸೋಂಕಿನ ಪರಿಣಾಮ ಜಾರಿಯಾಗಿರುವ ಲಾಕ್‌ಡೌನ್‌ನಿಂದಾಗಿ ಜೀವನಾವಶ್ಯಕ ವಸ್ತುಗಳು ಸಿಗದೆ ಜನ ಪರದಾಡುತ್ತಿದ್ದಾರೆ.
ಈ ನಡುವೆ ಜೀವನಕ್ಕೆ ಅತ್ಯವಶ್ಯಕವಾಗಿರುವ ಹಾಲನ್ನು ಒಂದೆಡೆಯಿಂದ ಮತ್ತೂಂದೆಡೆಗೆ ಸಾಗಿಸುವ ನಿಟ್ಟಿನಲ್ಲಿ ಹಾಲಿನ ಟ್ಯಾಂಕ್ ವ್ಯಾಗನ್‌ಗಳನ್ನು ನಿರ್ಮಿಸುವ ಮೂಲಕ ಭಾರತೀಯ ರೈಲ್ವೆ ಮಹತ್ವದ ಹೆಜ್ಜೆ ಇರಿಸಿದೆ.
ಹೊಸದಾಗಿ ಅಭಿವೃದ್ಧಿಪಡಿಸಿರುವ ಒಂದು ಮಿಲ್ಕ್ ಟ್ಯಾಂಕ್ ವ್ಯಾನ್ 44,660 ಲೀಟರ್ ಹಾಲನ್ನು ಸಂಗ್ರಹಿಸಿ ಸಾಗಿಸುವ ಸಾಮರ್ಥ್ಯ ಹೊಂದಿದೆ. ಇದು ಹಿಂದಿದ್ದ ಟ್ಯಾಂಕ್‌ಗಳ ಸಂಗ್ರಹ ಸಾಮರ್ಥ್ಯಕ್ಕಿಂತ ಶೇ.12ರಷ್ಟು ಹೆಚ್ಚು. ಗಂಟೆಗೆ 110 ಕಿ.ಮೀ ವೇಗದಲ್ಲಿ ಓಡಲು ಅನುಕೂಲವಾಗುವಂತೆ ಸ್ಟೈನ್‌ಲೆಸ್ ಸ್ಟೀಲ್ ಬಳಸಿ ಸ್ಥಳೀಯವಾಗಿಯೇ ಈ ಟ್ಯಾಂಕ್‌ಗಳನ್ನು ಉತ್ಪಾದಿಸಲಾಗಿದ್ದು, ಇವುಗಳು ಹಾಲನ್ನು ಅತೀ ಕಡಿಮೆ ವೆಚ್ಚದಲ್ಲಿ, ಅತ್ಯಂತ ಸುರಕ್ಷಿತವಾಗಿ ಮತ್ತು ಕಡಿಮೆ ಸಮಯದಲ್ಲಿ ಸರಬರಾಜು ಮಾಡಲು ನೆರವಾಗಲಿವೆ ಎಂದು ರೈಲ್ವೆ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ.
97 ಲಕ್ಷ ಟನ್ ಧಾನ್ಯ ಸಾಗಣೆ: ಕೋವಿಡ್ ಲಾಕ್‌ಡೌನ್‌ನಲ್ಲೂ ರೈಲ್ವೆ ಇಲಾಖೆಯ ಸರಕು ಸಾಗಣೆ ರೈಲುಗಳು ದಿನದ 24 ಗಂಟೆ ಹಾಗೂ ವಾರದ ಏಳೂ ದಿನ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿವೆ. 2020ರ ಮಾ.24ರಿಂದ ಮೇ 22ರವರೆಗೆ 23.2 ಲಕ್ಷಕ್ಕೂ ಅಧಿಕ ವ್ಯಾಗನ್‌ಗಳು ಸಂಚರಿಸಿದ್ದು, ಈ ಪೈಕಿ 13.5 ಲಕ್ಷ ವ್ಯಾಗನ್‌ಗಳು ಹಾಲು, ಆಹಾರ ಧಾನ್ಯ, ಉಪ್ಪು, ಸಕ್ಕರೆ, ಅಡುಗೆ ಎಣ್ಣೆ ರೀತಿಯ ಜೀವನಾವಶ್ಯಕ ವಸ್ತುಗಳನ್ನು ಸಾಗಿಸಿವೆ. ಎಲ್ಲಕ್ಕಿಂತ ಮುಖ್ಯವಾಗಿ 2020ರ ಏ.1ರಿಂದ ಮೇ 22ರವರೆಗೆ ಭಾರತೀಯ ರೈಲ್ವೇಯು ಬರೋಬ್ಬರಿ 97 ಲಕ್ಷ ಟನ್ ಆಹಾರ ಧಾನ್ಯಗಳ ಸಾಗಣೆ ಮಾಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 46 ಲಕ್ಷ ಟನ್ ಧಾನ್ಯ ಸಾಗಣೆಯಾಗಿತ್ತು ಎಂದು ರೈಲ್ವೇ ಇಲಾಖೆ ಮಾಹಿತಿ ನೀಡಿದೆ.
ಶ್ರಮಿಕ್ ರೈಲುಗಳಲ್ಲಿ 44 ಲಕ್ಷ ಮಂದಿ ಪ್ರಯಾಣ
ಮೇ 1ರಿಂದ ರೈಲ್ವೇ ಸಚಿವಾಲಯ ಇದುವರೆಗೆ 3,276 ಶ್ರಮಿಕ ವಿಶೇಷ ರೈಲುಗಳನ್ನು ಓಡಿಸಿದೆ. ಅದರಲ್ಲಿ 44 ಲಕ್ಷ ಮಂದಿ ಕಾರ್ಮಿಕರು ಪ್ರಯಾಣ ಮಾಡುತ್ತಿದ್ದಾರೆ. 25ರಂದು 223 ರೈಲುಗಳು 2.8 ಲಕ್ಷ ಮಂದಿಯನ್ನು ಕರೆದೊಯ್ದಿವೆ.
ಐಆರ್‌ಸಿಟಿಸಿ ವತಿಯಿಂದ 74 ಲಕ್ಷ ಉಚಿತ ಊಟ ವಿತರಿಸಲಾಗಿದೆ. 1 ಕೋಟಿ ನೀರಿನ ಬಾಟಲಿಗಳನ್ನು ನೀಡಲಾಗಿದೆ. ಗುಜರಾತ್, ಮಹಾರಾಷ್ಟ್ರ, ಪಂಜಾಬ್, ಉ.ಪ್ರ., ದಿಲ್ಲಿಯಿಂದ ಹೆಚ್ಚಿನ ಸಂಖ್ಯೆಯ ವಿಶೇಷ ರೈಲುಗಳು ಹೊರಟಿವೆ.