ಕೋವಿಡ್ 19 ವೈರಸ್ ಹರಡುವಿಕೆ ತಡೆಯಲು ಭಾರತೀಯ ರೈಲ್ವೇ ಇಲಾಖೆ ಮತ್ತೆ 90 ರೈಲುಗಳ ಓಡಾಟ ಸ್ಥಗಿತಗೊಳಿಸಿದೆ. ಈ ಮೂಲಕ ಸ್ಥಗಿತಗೊಂಡ ರೈಲುಗಳ ಸಂಖ್ಯೆ 245ಕ್ಕೆ ತಲುಪಿದೆ. ಈ ಎಲ್ಲ ರೈಲುಗಳು ಮಾ.20ರಿಂದ 31ರ ವರಗೆ ಓಡಾಟ ನಡೆಸುವುದಿಲ್ಲ. ಇದರಿಂದ ಭಾರತೀಯ ರೈಲ್ವೇಗೆ ಮಾರ್ಚ್‌ನಲ್ಲಿ ಸುಮಾರು 450 ಕೋಟಿ ರೂ. ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ. ಈ ತಿಂಗಳಲ್ಲಿ ಟಿಕೆಟ್ ರದ್ದತಿಯೂ ಅತಿ ಹೆಚ್ಚು ಪ್ರಮಾಣದಲ್ಲಿ ನಡೆದಿದೆ. ಮಾ. 1ರಿಂದ 12ರವರೆಗೂ ಉತ್ತರ ವಿಭಾಗೀಯ ರೈಲ್ವೇಯಲ್ಲೇ 12 ಲಕ್ಷ ಟಿಕೆಟ್‌ಗಳು ರದ್ದಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಜನತಾ ಕರ್ಫ್ಯೂ ಆಚರಣೆಯ ದಿನವಾದ ಭಾನುವಾರದಂದು ದೇಶದ ವಿವಿಧ ಮಾರ್ಗಗಳಲ್ಲಿ ಸಂಚರಿಸುವ ಸುಮಾರು 3700 ರೈಲುಗಳ ಸಂಚಾರವನ್ನು ರೈಲ್ವೇ ಇಲಾಖೆಯು ರದ್ದುಗೊಳಿಸಿದೆ.
ರೈಲ್ವೆ ಕೆಟರಿಂಗ್ ಬಂದ್
ಮಾ. 22ರಿಂದ ಮೇಲ್ ಅಥವಾ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಕೆಟರಿಂಗ್ ಸೇವೆಯನ್ನು ಸ್ಥಗಿತಗೊಳಿಸುವಂತೆ ಐಆರ್‌ಸಿಟಿಸಿ ಆದೇಶಿಸಿದೆ. ಎಲ್ಲ ಫುಡ್ ಪ್ಲಾಜಾಗಳು, ರಿಫ್ರೆಶ್‌ಮೆಂಟ್ ಕೊಠಡಿಗಳು, ಜನ ಆಹಾರ ಕೇಂದ್ರಗಳು ಹಾಗೂ ಸೆಲ್ ಕಿಚನ್‌ಗಳನ್ನು ಮುಂದಿನ ಆದೇಶದವರೆಗೆ ಮುಚ್ಚುವಂತೆಯೂ ಸೂಚಿಸಲಾಗಿದೆ.