Advertisement

ಹಲವು ನಿರೀಕ್ಷೆಗಳ 15ನೇ ಐಪಿಎಲ್‌ ; ಹೊಸ ಬದಲಾವಣೆಗಳಿಗೆ ತೆರೆದುಕೊಂಡ ಪಂದ್ಯಾವಳಿ

05:15 PM Mar 24, 2022 | Team Udayavani |

ಹೊಸದಿಲ್ಲಿ: ಶನಿವಾರ ಆರಂಭವಾಗಲಿರುವ 15ನೇ ಐಪಿಎಲ್‌ ಪಂದ್ಯಾವಳಿಗೆ ಸೀಮಿತ ಸಂಖ್ಯೆಯ ವೀಕ್ಷಕರಿಗಷ್ಟೇ ಪ್ರವೇಶಾವಕಾಶ ನೀಡಲು ಬಿಸಿಸಿಐ ನಿರ್ಧರಿಸಿದೆ. ಪ್ರತೀ ಪಂದ್ಯಕ್ಕೆ ಸ್ಟೇಡಿಯಂ ಸಾಮರ್ಥ್ಯದ ಶೇ. 25ರಷ್ಟು ಪ್ರೇಕ್ಷಕರಿಗೆ ಪ್ರವೇಶ ಲಭಿಸಲಿದೆ.

Advertisement

ಭಾರತದಲ್ಲಿ ಕೊನೆಯ ಸಲ ನಡೆದ 2021ರ ಮೊದಲಾರ್ಧದ ಐಪಿಎಲ್‌ ಪಂದ್ಯಗಳ ವೇಳೆ ವೀಕ್ಷಕರಿಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿತ್ತು. ಬಳಿಕ ಈ ಪಂದ್ಯಾವಳಿ ಯುಎಇಗೆ ಸ್ಥಳಾಂತರಗೊಂಡಿತು. ಸೀಮಿತ ಸಂಖ್ಯೆಯ ವೀಕ್ಷಕರಿಗೆ ಸ್ಟೇಡಿಯಂ ಬಾಗಿಲು ತೆರೆದಿತ್ತು. 2020ರ ಸಂಪೂರ್ಣ ಟೂರ್ನಿ ಯುಎಇಯಲ್ಲೇ ನಡೆದಾಗ ವೀಕ್ಷಕರಿಗೆ ಪ್ರವೇಶ ಇರಲಿಲ್ಲ.

ಟಿಕೆಟ್‌ ಮಾರಾಟ ಆರಂಭ
“15ನೇ ಆವೃತ್ತಿಯ ಐಪಿಎಲ್‌ ವೀಕ್ಷಕರನ್ನು ಮರಳಿ ಸ್ಟೇಡಿಯಂಗೆ ಸ್ವಾಗತಿಸಲಿದೆ. ಶೇ. 25ರಷ್ಟು ವೀಕ್ಷಕರಿಗೆ ಪ್ರವೇಶಾವಕಾಶ ನೀಡಲಾಗುವುದು’ ಎಂದು ಐಪಿಎಲ್‌ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಬುಧವಾರದಿಂದ ಲೀಗ್‌ ಪಂದ್ಯಗಳ ಆನ್‌ಲೈನ್‌ ಟಿಕೆಟ್‌ ಮಾರಾಟ ಆರಂಭಗೊಂಡಿದೆ.

ಲೀಗ್‌ ಪಂದ್ಯಗಳು ಮಹಾರಾಷ್ಟ್ರದ 4 ಸ್ಟೇಡಿಯಂಗಳಲ್ಲಿ ನಡೆಯಲಿವೆ. ಈ ತಾಣಗಳೆಂದರೆ, ಮುಂಬಯಿಯ ವಾಂಖೇಡೆ ಸ್ಟೇಡಿಯಂ, ಬ್ರೆಬೋರ್ನ್ ಸ್ಟೇಡಿಯಂ, ನವೀ ಮುಂಬಯಿಯ ಡಿ.ವೈ. ಪಾಟೀಲ್‌ ಸ್ಟೇಡಿಯಂ ಮತ್ತು ಪುಣೆಯ ಎಂ.ಸಿ.ಎ. ಸ್ಟೇಡಿಯಂ.

ವಾಂಖೇಡೆ ಮತ್ತು ಡಿ.ವೈ. ಪಾಟೀಲ್‌ ಸ್ಟೇಡಿಯಂಗಳಲ್ಲಿ ತಲಾ 20 ಪಂದ್ಯಗಳು, ಬ್ರೆಬೋರ್ನ್ ಮತ್ತು ಎಂ.ಸಿ.ಎ. ಸ್ಟೇಡಿಯಂನಲ್ಲಿ ತಲಾ 15 ಪಂದ್ಯಗಳು ನಡೆಯಲಿವೆ.

Advertisement

ಐಪಿಎಲ್‌ 15ನೇ ಸೀಸನ್‌ಗೆ ಇನ್ನು ಎರಡೇ ದಿನ ಬಾಕಿ. ಕ್ರಿಕೆಟ್‌ ಪ್ರೇಮಿಗಳ ಕಾತರ ತೀವ್ರಗೊಂಡಿದೆ. ಈ ನಡುವೆ ಬಿಸಿಸಿಐ ಈ ಬಾರಿಯ ಐಪಿಎಲ್‌ನಲ್ಲಿ ಕೆಲವು ನಿಯಮಗಳನ್ನು ಬದಲಾಯಿಸಲು ನಿರ್ಧರಿಸಿದೆ.ಅದರಂತೆ ಕೋವಿಡ್‌-19, ಡಿಆರ್‌ಎಸ್‌, ಸೂಪರ್‌ ಓವರ್‌ ನಿಯಮಗಳಲ್ಲಿ ಸಣ್ಣ ಪುಟ್ಟ ಮಾರ್ಪಾಟುಗಳನ್ನು ಮಾಡಲಾಗಿದೆ.

ಕೊರೊನಾ ರೂಲ್ಸ್‌ ಬದಲು
ಕಳೆದ ಆವೃತ್ತಿಯಲ್ಲಿ ಪ್ಲೇಯಿಂಗ್‌ ಇಲೆವೆನ್‌ನ ಆಟಗಾರರಿಗೆ ಕೊರೊನಾ ಸೋಂಕು ತಗುಲಿದರೆ ಪಂದ್ಯವನ್ನು ಮುಂದೂಡಲಾಗುತ್ತಿತ್ತು. ಮುಂದೂಡಿಕೆಯ ಬಳಿಕವೂ ಆಡಲು ಸಾಧ್ಯವಾಗದಿದ್ದರೆ ಎದುರಾಳಿ ತಂಡಕ್ಕೆ ವಿಜಯದ ಶ್ರೇಯ ಲಭಿಸುತ್ತಿತ್ತು. ಆದರೆ ಈ ನಿಯಮವನ್ನು ರದ್ದುಗೊಳಿಸಲಾಗಿದೆ. ಆಗ ಐಪಿಎಲ್‌ ತಾಂತ್ರಿಕ ಸಮಿತಿ ಮುಂದಿನ ನಿರ್ಧಾರ ಪ್ರಕಟಿಸಲಿದೆ. ಪಂದ್ಯವನ್ನು ಮರು ಸಂಘಟಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ.

ಬಯೋಬಬಲ್‌ ಉಲ್ಲಂಘನೆಗೆ…
ಈ ಬಾರಿ ಕೊರೊನಾ ಬಯೋಬಬಲ್‌ ಉಲ್ಲಂಘನೆಗೆ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲಾಗಿದೆ. ಬಯೋಬಬಲ್‌ ಉಲ್ಲಂ ಸಿದರೆ ಪಂದ್ಯದ ನಿಷೇಧದ ವರೆಗೆ ಆಟಗಾರರನ್ನು ಕ್ವಾರಂಟೈನ್‌ನಲ್ಲಿ ಇರಿಸಲು ಅನುಮತಿ ಇರುವುದಿಲ್ಲ. ಬಯೋ ಬಬಲ್‌ ಉಲ್ಲಂಘನೆಗೆ, ಆಟಗಾರನ ಕುಟುಂಬ ಅಥವಾ ಪಂದ್ಯದ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವ ಅವಕಾಶವೂ ಇದೆ. ಫ್ರಾಂಚೈಸಿಯು ಹೊರಗಿನವರನ್ನು ಜೈವಿಕ ವಲಯಕ್ಕೆ ಕರೆತಂದರೆ ಅವರು ಒಂದು ಕೋಟಿ ರೂ. ವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆ.

ಬ್ಯಾಟ್ಸ್‌ಮನ್‌ ನಿಯಮ
ಬ್ಯಾಟ್ಸ್‌ಮನ್‌ ಓರ್ವ ಕ್ಯಾಚ್‌ ನೀಡಿ ಔಟಾದ ಬಳಿಕ ಕ್ರೀಸಿಗೆ ಬರುವ ಹೊಸ ಬ್ಯಾಟ್ಸ್‌ಮನ್‌ ಸ್ಟ್ರೈಕ್‌ಎಂಡ್‌ನ‌ಲ್ಲಿ ಆಟ ಆರಂಭಿಸುವಂತೆ ಎಂಸಿಸಿ ಸಲಹೆ ನೀಡಿತ್ತು. ಇದೀಗ ಈ ನಿಯಮ ಐಪಿಎಲ್‌ನಲ್ಲೂ ಅನುಷ್ಠಾನಗೊಳ್ಳಲಿದೆ. ಆದರೆ ಓವರ್‌ನ ಕೊನೆಯ ಎಸೆತದಲ್ಲಿ ಔಟಾದರೆ ಇದು ಅನ್ವಯವಾಗದು.

ಹೆಚ್ಚುವರಿ ಡಿಆರ್‌ಎಸ್‌
ಈ ಬಾರಿಯ ಐಪಿಎಲ್‌ನಲ್ಲಿ ಇನ್ನಿಂಗ್ಸ್‌ ಒಂದರಲ್ಲಿ ಪ್ರತೀ ತಂಡಕ್ಕೆ ತಲಾ 2 ಡಿಆರ್‌ಎಸ್‌ ಆಯ್ಕೆ ಲಭಿಸಲಿದೆ. ಈ ಹಿಂದೆ ಕೇವಲ ಒಂದೇ ಡಿಆರ್‌ಎಸ್‌ ಅವಕಾಶವಿತ್ತು. ಅಂಪಾಯರಿಂಗ್‌ ದೋಷಗಳಿಂದ ಮುಕ್ತಿ ಪಡೆಯಲು ಈ ಬದಲಾವಣೆ ತರಲಾಗಿದೆ.

ನೂತನ ಟೈ-ಬ್ರೇಕರ್‌
ಪಂದ್ಯವೊಂದು ಟೈ ಆದ ಬಳಿಕ ಸೂಪರ್‌ ಓವರ್‌ ನಡೆಸಲು ಸಾಧ್ಯವಾಗದಿದ್ದರೆ ಅಥವಾ ಸೂಪರ್‌ ಓವರ್‌ ಬಳಿಕವೂ ಪಲಿತಾಂಶ ನಿರ್ಧರಿಸಲು ಸಾಧ್ಯವಾಗದಿದ್ದರೆ ನೂತನ ಟೈ-ಬ್ರೇಕರ್‌ ವಿಧಾನ ರೂಪಿಸಲಾಗಿದೆ. ಆಗ ಲೀಗ್‌ ಹಂತದ ಅಂಕಪಟ್ಟಿಯಲ್ಲಿ ಮೇಲಿನ ಸ್ಥಾನ ಹೊಂದಿರುವ ತಂಡವನ್ನು ವಿಜಯಿ ಎಂದು ನಿರ್ಧರಿಸಲಾಗುತ್ತದೆ.

ಇತ್ತೀಚೆಗೆ ಮೆರಿಲ್‌ಬಾನ್‌ ಕ್ರಿಕೆಟ್‌ ಕ್ಲಬ್‌ (ಎಂಸಿಸಿ) ಅಂತಾರಾಷ್ಟ್ರೀಯ ಕ್ರಿಕೆಟ್‌ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ತಂದಿತ್ತು. ಅವುಗಳಲ್ಲಿ ಕೆಲವು ಐಪಿಎಲ್‌ಗ‌ೂ ಅನ್ವಯವಾಗಲಿದೆ.

ಉದ್ಘಾಟನಾ ಸಮಾರಂಭವಿಲ್ಲ!
15ನೇ ಐಪಿಎಲ್‌ ಪಂದ್ಯಾವಳಿ ಕೂಡ ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾಗದು. ಯಾವುದೇ ಅದ್ಧೂರಿ, ಆಡಂಬರ, ಆಕರ್ಷಣೆ ಇಲ್ಲದೇ ನೇರವಾಗಿ ಕೂಟ ಮೊದಲ್ಗೊಳ್ಳಲಿದೆ.

ಐಪಿಎಲ್‌ ಉದ್ಘಾಟನಾ ಸಮಾರಂಭವೆಂದರೆ ಅದೊಂದು ಬಹುಕೋಟಿ ಮೊತ್ತದ ಕಾರ್ಯಕ್ರಮ. ವಿಶ್ವದ ವಿವಿಧ ಭಾಗಗಳ ಸೆಲೆಬ್ರಿಟಿಗಳು ಪಾಲ್ಗೊಳ್ಳುವ ಈ ಕಾರ್ಯಕ್ರಮಕ್ಕೆ 30 ಕೋಟಿ ರೂ. ತನಕ ವೆಚ್ಚವಾಗುತ್ತದೆ.

ಕೊರೊನಾದಿಂದಾಗಿ ಸೀಮಿತ ವೀಕ್ಷಕರಿಗಷ್ಟೇ ಪ್ರವೇಶ ಇರುವುದರಿಂದ ಆರ್ಥಿಕವಾಗಿ ಈ ಸಮಾರಂಭ ಬಿಸಿಸಿಐ ಪಾಲಿಗೆ ದೊಡ್ಡ ಹೊರೆಯಾಗಲಿದೆ.

2019ರಲ್ಲಿ ಮೊದಲ ಸಲ ಐಪಿಎಲ್‌ ಉದ್ಘಾಟನಾ ಸಮಾರಂಭವನ್ನು ಕೈಬಿಡಲು ಬಿಸಿಸಿಐ ನಿರ್ಧರಿಸಿತು. ಈ ಮೊತ್ತವನ್ನು ಪುಲ್ವಾಮಾದಲ್ಲಿ ಉಗ್ರರಿಗೆ ಬಲಿಯಾದ ಸೈನಿಕರ ಕುಟುಂಬದವರಿಗೆ ಅರ್ಪಿಸಲಾಯಿತು. 2020ರ ಐಪಿಎಲ್‌ ವಿಳಂಬವಾಗಿ ಯುಎಇಯಲ್ಲಿ ಆರಂಭವಾದ್ದರಿಂದ ಬಿಸಿಸಿಐ ಉದ್ಘಾಟನೆಯ ಗೊಡವೆಗೇ ಹೋಗಲಿಲ್ಲ. ಕಳೆದ ವರ್ಷ ಕೊರೊನಾ ಅಡ್ಡಿಯಾಯಿತು.

ಗ್ರೂಪ್‌ ಮಾದರಿಯಲ್ಲಿ ಐಪಿಎಲ್‌
10 ತಂಡಗಳು ಪಾಲ್ಗೊಳ್ಳಲಿರುವ 2022ರ ಐಪಿಎಲ್‌ ಟೂರ್ನಿ “ರೌಂಡ್‌ ರಾಬಿನ್‌’ ಬದಲು ಗ್ರೂಪ್‌ ಮಾದರಿಯಲ್ಲಿ ನಡೆಯಲಿರುವುದೊಂದು ವಿಶೇಷ.

ಇಲ್ಲಿ ತಲಾ 5 ತಂಡಗಳ 2 ಗ್ರೂಪ್‌ಗ್ಳನ್ನು ರಚಿಸಲಾಗಿದೆ. ಆದರೆ ಪ್ರತಿಯೊಂದು ತಂಡದ ಆಡುವ ಪಂದ್ಯಗಳ ಸಂಖ್ಯೆಯಲ್ಲಿ ವ್ಯತ್ಯಯವಾಗಿಲ್ಲ,ಅದು ಹದಿನಾಲ್ಕೇ ಆಗಿರಲಿದೆ. 8 ತಂಡಗಳಿರುವಾಗಲೂ ಪ್ರತಿಯೊಂದು ತಂಡ 14 ಲೀಗ್‌ ಪಂದ್ಯಗಳನ್ನಾಡುತ್ತಿತ್ತು.

ಐಪಿಎಲ್‌ ಸಾಧನೆಯನ್ನು ಆಧರಿಸಿ ತಂಡಗಳನ್ನು ವಿಂಗಡಿಸಲಾಗಿದೆ. ಅತ್ಯಧಿಕ ಸಲ ಚಾಂಪಿಯನ್‌ ಎನಿಸಿದ ಮುಂಬೈಗೆ “ಟೀಮ್‌ 1′ ಮಾನ್ಯತೆ ಲಭಿಸಿದ್ದು, ಅದು “ಎ’ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿದೆ. 4 ಸಲ ಕಪ್‌ ಎತ್ತಿದ ಚೆನ್ನೈಗೆ “ಟೀಮ್‌ 2′ ಮಾನ್ಯತೆ ಲಭಿಸಿದ್ದು, ಅದು “ಬಿ’ ವಿಭಾಗದ ಅಗ್ರಸ್ಥಾನಿಯಾಗಿದೆ. ನೂತನ ತಂಡಗಳಾದ ಲಕ್ನೋ ಸೂಪರ್‌ ಜೈಂಟ್ಸ್‌ಗೆ 9ನೇ ಹಾಗೂ ಗುಜರಾತ್‌ ಟೈಟಾನ್ಸ್‌ಗೆ 10ನೇ ಸ್ಥಾನ ಲಭಿಸಿದೆ.

14 ಪಂದ್ಯಗಳ ಲೆಕ್ಕಾಚಾರ
ಗ್ರೂಪ್‌ ಹಂತದಲ್ಲಿ ಪ್ರತಿಯೊಂದು ತಂಡ ಇನ್ನೊಂದು ತಂಡದ ವಿರುದ್ಧ 2 ಪಂದ್ಯಗಳನ್ನಾಡಲಿದೆ. ಆಗ ಪ್ರತಿಯೊಂದು ತಂಡ 8 ಪಂದ್ಯಗಳನ್ನು ಆಡಿದಂತಾಗುತ್ತದೆ. ಬಳಿಕ ಎದುರಾಳಿ ತಂಡದ ವಿರುದ್ಧವೂ ಆಡಲಿದೆ.
“ಎ’ ವಿಭಾಗದ ಅಗ್ರ ತಂಡವಾಗಿರುವ ಮುಂಬೈ, “ಬಿ’ ವಿಭಾಗದ ಅಗ್ರ ತಂಡವಾಗಿರುವ ಚೆನ್ನೈ ವಿರುದ್ಧ 2 ಪಂದ್ಯಗಳನ್ನಾಡುತ್ತದೆ. ಹಾಗೆಯೇ ಉಳಿದ ತಂಡಗಳ ವಿರುದ್ಧ ಒಮ್ಮೆ ಮುಖಾಮುಖೀ ಆಗಲಿದೆ. ಅದರಂತೆ ಎರಡೂ ವಿಭಾಗಗಳಲ್ಲಿ ಸಮಾನ ಸ್ಥಾನದಲ್ಲಿರುವ ತಂಡಗಳು ಪರಸ್ಪರ 2 ಪಂದ್ಯಗಳನ್ನಾಡಿ, ಉಳಿದ ತಂಡಗಳ ವಿರುದ್ಧ ಒಂದೊಂದು ಪಂದ್ಯವನ್ನು ಆಡಲಿವೆ. ಇದರಂತೆ ಹೈದರಾಬಾದ್‌-ಕೆಕೆಆರ್‌, ಆರ್‌ಸಿಬಿ-ರಾಜಸ್ಥಾನ್‌, ಡೆಲ್ಲಿ-ಪಂಜಾಬ್‌, ಲಕ್ನೋ-ಗುಜರಾತ್‌ ಎರಡು ಸಲ ಎದುರಾಗಲಿವೆ. ಅಲ್ಲಿಗೆ ಪ್ರತಿಯೊಂದು ತಂಡ ಲೀಗ್‌ ಹಂತದಲ್ಲಿ 14 ಪಂದ್ಯಗಳನ್ನು (8 ಪ್ಲಸ್‌ 6) ಆಡಿದಂತಾಗುತ್ತದೆ.

ಗ್ರೂಪ್‌ ಎ:  ಮುಂಬೈ ಕೆಕೆಆರ್‌ ರಾಜಸ್ಥಾನ್‌ ಡೆಲ್ಲಿ ಲಕ್ನೋ

ಗ್ರೂಪ್‌ ಬಿ:  ಚೆನ್ನೈ ಹೈದರಾಬಾದ್‌ಆರ್‌ಸಿಬಿ ಪಂಜಾಬ್‌ ಗುಜರಾತ್‌

Advertisement

Udayavani is now on Telegram. Click here to join our channel and stay updated with the latest news.

Next